ಈ ಜಾತಿ , ಧರ್ಮಗಳನ್ನು ಇನ್ನೂ ಜೀವಂತವಾಗಿ ಇಟ್ಟಿರುವವರು ರಾಜಕಾರಣಿಗಳು ಮಾತ್ರ , ತಮ್ಮ ತಮ್ಮ ವೋಟು ಬ್ಯಾಂಕ್ ಗಳನ್ನ ಪೋಷಿಸಿಕೊಳ್ಳಲು. ಇನ್ನು ಅವರ ಕೃಪಾ ಪೋಷಿತ ಬುಧ್ಧಿಜೀವಿಗಳ ಗುಂಪುಗಳು. ಮುಸ್ಲಿಮ್ ನ ‘ಮು’ ಅನ್ನುವಾಗಲೇ ರಾಜಕಾರಣಿಗಳು ಎಗರಿಕೊಂಡು ಬರ್ತಾರೆ. ಅವರ ಉಧ್ಧಾರ ಮಾಡಿದ್ದೇ ಮಾಡಿದ್ದು, ಆದರೆ ಹೆಸರಿಗೆ ಮಾತ್ರ , ಅವರನ್ನ ಮಾತ್ರ ಅದೇ ಲೆವೆಲ್ನ್ಯಾಗೆ ದಬಾಕೆ ಇಟ್ಟಿದಾರೆ. ದಲಿತ ಪದದ ‘ದ’ ಅನ್ನುವಾಗಲೇ ಬುಧ್ಧಿಜೀವಿಗಳು ನೆಗೆದುಬೀಳ್ತಾರೆ. ಅವರಿಗೆ ದಲಿತರು ಅಂದರೆ ಯಾರು ಗೊತ್ತಾ ಕೇಳಿ. ಖಂಡಿತ ಗೊತ್ತಿರಲ್ಲ. ಶೂದ್ರರೂ ದಲಿತರಲ್ಲ ಅಂತ ಇವರಿಗೆ ಗೊತ್ತೇ ಇರಲ್ಲ. ಮತ್ತೆ ದಲಿತರೆಂದರೆ ಯಾರು? ಶೂದ್ರರಿಗಿಂತ ಕಡೆಯಾದ ಅಸ್ಪೃಶ್ಯರು. ಗಾಂಧಿ ಲೇಬಲ್ಲಿಸಿದ ಹರಿಜನರು. ಹಳ್ಳಿಯ ಹೊಟೇಲುಗಳಲ್ಲಿ ಇವರಿಗೇ ಅಂತ ಬೇರೆ ತಟ್ಟೆ ಲೋಟ ಇರುತ್ತವೆ. ಈ ಬುಧ್ಧಿಜೀವಿಗಳು ಆರಾಧಿಸುವ ವೇಮುಲ, ಕನ್ಹೈಯಾ ಗಳು ಆ ಥರದ ಅಸ್ಪೃಶ್ಯ ಅವಸ್ಥೆಯಲ್ಲಿ ಜೀವನ ಕಳೆಯುತ್ತಿರುವವರಾ ಅಥವಾ ನೆಹರು ಕೃಪೆಯಿಂದ ನಾಲ್ವತ್ತರ ಗಡಿ ತಲುಪುತ್ತಿದ್ದರೂ ಹಾಸ್ಟೆಲ್ನಲ್ಲಿ ಮಜಾ ಮಾಡುತ್ತಾ ಉಣ್ಣಕೊಂಡು ತಿಂದ್ಕೊಂಡು ಸ್ಟೂಡೆಂಟ್ ಆಗೇ ಇರುವವರ ? ನಕ್ಸಲೈಟ್ ಗುರುಗಳೋ ಹೇಳಿದ್ರೆ “ಭಾರತ್ ತೆರೆ ತುಕಡೆ ಕರೇಂಗೇ” ಅಂತ ಘೋಷಣೆ ಕೂಗುವವ್ರ?
ಮುಖ್ಯ , ಗಂಬೀರ ಪ್ರಶ್ನೆ. ರಾಜಕಾರಣಿ ಗಳು ನಮ್ಮ ಜೀವನ ರೀತಿಯನ್ನು ನಿರ್ದೇಶಿಸಬೇಕಾ? ನಮ್ಮ ಭವಿಷ್ಯವನ್ನ ಇವರು ನಿರ್ಧರಿಸಬೇಕಾ? ನಾವು ಜಾತಿ ಭೇದ ಮೀರಿ ಮೇಲೆ ಬಂದದ್ದನ್ನ ನಮ್ಮ ಮೇಲೆ ಪುನಃ ಹೇರೋಕ್ಕೆ ಇವರು ಯಾರು?
ಸಾಕಪ್ಪಾ ಸಾಕು. ರಾಜಕಾರಣಿಗಳ ಥರ , ಬುದ್ಧಿಜೀವಿಗಳ ಥರ ಈ ಮೇಲಿನ ರಾಜಕೀಯ ಸಾಕು. ಜಾತಿಭೇದ, ಧರ್ಮಭೇದಗಳು ಸಮಕಾಲೀನ ಭಾರತದಲ್ಲಿ ಉಳಿದಿಲ್ಲ ಅನ್ನೋದನ್ನ ಗಂಭೀರವಾಗಿ ವಿವೇಚಿಸಿ ನೋಡೋಣ . ಸ್ವಲ್ಪ ಹೊತ್ತು ವೋಟಿಂಗ್ ಬೂಥ್ ನಿಂದ ಆಚೆ ಬರೋಣವಾ ?
ಹಿಂದುತ್ವ , ಹಿಂದೂಗಳು ಮತ್ತು ಭಾರತೀಯರು ಇವೆಲ್ಲವನ್ನೂ ದ್ವೇಷ ಮಾಡುವಂಥ ತಂಡಕ್ಕೆ ಇವುಗಳ ವಿರುಧ್ಧ ಕೆಲವು ಆಕ್ಷೇಪಣೆಗಳು, ಟೀಕೆಗಳು ಇವೆ. ಈ ತಂಡದಲ್ಲಿ ವಿದೇಶಿಗಳೂ ಇದ್ದಾರೆ, ಭಾರತೀಯರೂ ಇದ್ದಾರೆ. ಭಾರತೀಯರ ವಿರೋಧ ಸ್ವಾಭಾವಿಕವಾಗಿದ್ದಲ್ಲಿ, ರಾಜಕೀಯ ಪ್ರೇರಿತ ಅಲ್ಲದಿದ್ದಲ್ಲಿ ಅಪನಂಬಿಕೆಯಿಂದ ಅಥವ ನಾಸ್ತಿಕತೆಯಿಂದ ಹುಟ್ಟಿದ್ದು . ಇದಲ್ಲದ್ದು ಯಾವುದೋ ಅಸಾಮಾಜಿಕ ಶಕ್ತಿಗಳಿಂದ, ಯಾವುದೋ ಲಾಭದಿಂದ ಪ್ರೇರಿತವಾದದ್ದು. ವಿದೇಶಿಗಳ ವಿರೋಧ ಸ್ವಾಭಾವಿಕವಾಗಿದ್ದಲ್ಲಿ ಒಂದು ತರಹದ ಅಪೂರ್ಣ ಜ್ಞಾನದಿಂದ ಉಂಟಾದದ್ದು ಅಥವ ಭಾರತೀಯರಿಂದ ಪ್ರೇರಿತವಾದದ್ದು. ತಮ್ಮ ಧರ್ಮದೊಡನೆ ತುಲನಾತ್ಮಕವಾಗಿ ಹಿಂದುತ್ವವನ್ನು ಅಭ್ಯಸಿಸಿದ ಕೆಲವು ಹೊರಗಿನವರು ಅದನ್ನು ದ್ವೇಷಿಸುತ್ತಾರೆ ಎಂದರೆ ಅದು ಅಸೂಯೆಯಿಂದ ಬಂದಿದ್ದು ಅಂತಲೂ ಹೇಳಬಹುದು.
ಹಿಂದುತ್ವ, ಹಿಂದೂ ಜನ ಮತ್ತು ಹಿಂದೂ ರಾಷ್ಟ್ರಗಳ ಬಗ್ಗೆ ಈ ಗುಂಪಿಗಿರುವ ಟೀಕೆ, ಅಭ್ಯಂತರ, ಆಕ್ಷೇಪಣೆಗಳನ್ನು ಒಂದೊಂದಾಗಿ ತೆಗೆದುಕೊಂಡು, ಅಭ್ಯಸಿಸಿ ಅವಕ್ಕೆ ಉತ್ತರ, ಸಮಾಧಾನಗಳನ್ನೂ ಹುಡುಕಿ ಅವರಿಗೆ ತಿಳಿಹೇಳೋಕ್ಕೆ ಪ್ರಯತ್ನಿಸೋಣ.
ಟೀಕೆ ೧ :
ಹಿಂದುತ್ವದಲ್ಲಿನ ಜಾತಿಪಧ್ಧತಿಯಿಂದಾಗಿ ಮೇಲ್ಜಾತಿಯವರಿಂದ ಕೆಳಜಾತಿಯವರ ಮೇಲೆ ದಬ್ಬಾಳಿಕೆ, ದೌರ್ಜನ್ನ್ಯಗಳು ನಡೆಯುತ್ತಿವೆ.
ಹಿಂದುತ್ವ ಇತರ ‘ಒಬ್ಬನೇ ದೇವರು’ ಎಂದು ಪ್ರತಿಪಾದಿಸುವ ಧರ್ಮಗಳಿಂದ ಈ ಕೆಳಗಿನ ತತ್ವಗಳಿಂದಾಗಿ ಭಿನ್ನವಾಗಿದೆ.
ಹಿಂದುತ್ವದಲ್ಲಿ ಈ ಕೆಳಗಿನವುಗಳನ್ನು ಹೊಂದಿಲ್ಲ..
- ಏಕಮೇವ ಧರ್ಮ ಸಂಸ್ಥಾಪಕ
- ಏಕ ದೈವ ಜ್ಞಾನ ಮತ್ತು ಪಧ್ಧತಿ
- ಏಕ ದೈವ ತತ್ವ
- ಏಕ ಧರ್ಮ ಗ್ರಂಥ
- ಏಕ ನೈತಿಕ ತತ್ವ
- ಏಕ ಕೇಂದ್ರೀಯ ಧರ್ಮಾಧಿಕಾರ
- ಒಬ್ಬ ಪ್ರವಾದಿಯ ಕಲ್ಪನೆ
ಸಾಮಾನ್ಯವಾಗಿ ಹಿಂದುತ್ವ ಜಗತ್ತಿನ ಅತ್ಯಂತ ಹಳೆಯ ಸುವ್ಯವಸ್ಥಿತ ಧರ್ಮ ಎಂದು ಕರೆಯಲ್ಪಡುತ್ತದೆ. ಅದು ಭಾರತದಲ್ಲಿ ಸಾವಿರಾರು ಬೇರೆ ಬೇರೆ ಧಾರ್ಮಿಕ ಗುಂಪುಗಳಿಂದ ಸುಮಾರು ಕ್ರಿ. ಪೂ. ೧೫೦೦ ರಲ್ಲಿ ಜನ್ಮ ತಳೆದ ವ್ಯವಸ್ಥೆ. ಈ ಬಹು ಸಮ್ಮಿಲಿತ ಪರಂಪರೆ ಮತ್ತು ಸಂಪ್ರದಾಯಗಳಿಂದಾಗಿ ನಂಬಿಕೆಗಳ ಸ್ವಾತಂತ್ರ್ಯ ಮತ್ತು ಉದಾರ ಮನೋಭಾವಗಳು ಹಿಂದುತ್ವದ ವಿಶೇಷತೆಗಳಾಗಿವೆ.
ಬಹುತೇಕವಾಗಿ ಹಿಂದುತ್ವದ ಒಂದೊಂದು ಪರಂಪರೆಗಳೂ ಒಂದೇ ದೇವರನ್ನು ನಂಬಿದರೂ ಇತರ ದೇವರುಗಳನ್ನು ಅದೇ ಮಹಾ ದೈವತ್ವದ ಬೇರೆ ಬೇರೆ ಸ್ವರೂಪಗಳು ಎಂದೇ ಬಗೆಯುತ್ತವೆ. ಹೀಗಾಗಿ ಹಿಂದುತ್ವ ಪರಂಪರಾಗತವಾಗಿ ಜಗತ್ತಿನ ಅತ್ಯಂತ ಪರಧರ್ಮ ಸಹಿಷ್ಣು ಪಧ್ಧತಿಯಾಗಿ ಗುರುತಿಸಲ್ಪಟ್ಟಿದೆ.
ಹಿಂದುತ್ವದ ಮೂಲ ಮಾನವೀಯ ಮೌಲ್ಯಗಳು
- ಸತ್ಯ ; ದಯೆ, ಅನುಕಂಪ ಕೂಡಿದ ಮತ್ತು ನಿಷ್ಪೀಡಕ ಸತ್ಯ .
- ಅಹಿಂಸೆ : ಯಾವ ಜೀವಿಗಳಿಗೂ ತನು ಮನಗಳ ಹಿಂಸೆ ಕೊಡದೆ ಇರುವದು.
- ಅಸ್ತೇಯಂ : ತನ್ನದಲ್ಲದ ವಸ್ತುವನ್ನು ಆಸೆ ಮತ್ತು ಸ್ವಾರ್ಥಗಳಿಗೆ ಬಲಿಯಾಗಿ ಹೊಂದುವದು ನಿಷಿಧ್ಧ .
- ದಯೆ : ಪ್ರತಿಯೊಂದು ಜೀವಿಯ ಮೇಲೂ ದಯೆ ಮತ್ತು ಅನುಕಂಪ ; ಸ್ವಕಷ್ಟದಲ್ಲೂ ಸಹಾಯ ಹಸ್ತ .
- ಕ್ಷಾಂತಿ : ಜೀವಿಸು , ಜೀವಿಸಗೊಡು ; ಧಾರ್ಮಿಕ ಹಿಂಸೆ ನಿಷಿಧ್ಧ .
- ಆರ್ಜವಂ : ಸರಳ, ನೇರ ಮತ್ತು ಮೋಸವಿಲ್ಲದ ನಡತೆ ; ಬಿಚ್ಚು ಮನಸ್ಸಿನ, ನಿಷ್ಕಪಟ ನಿಲುವು.
- ಮಾಧುರ್ಯ : ಅಸಭ್ಯ , ನಯವಿಲ್ಲದ ವರ್ತನೆ ನಿಷಿಧ್ಧ.
- ದಮ : ಆತ್ಮ ಸಂಯಮ
- ದಾನ : ನಿಸ್ವಾರ್ಥವಾಗಿ ಕೊಡುವ, ಕಲಿಸುವ, ಹಂಚುವ, ಗುಣ
- ಅಕಲ್ಕತೆ : ಪಾಪ ರಹಿತ, ನಿರಾಧಾರವಾಗಿ ಪರರ ಮೇಲೆ ನಿರ್ಣಯ ತೆಗೆದುಕೊಂಡು ಜರಿಯುವದು ನಿಷಿಧ್ಧ.
ಇದಲ್ಲದೆ ಹಿಂದುತ್ವದಲ್ಲಿ ಕರ್ಮ ಸಿಧ್ಧಾಂತ ಮತ್ತು ಪುನರ್ಜನ್ಮದಲ್ಲಿ ನಂಬಿಕೆ ಇದೆ. ಮನುಷ್ಯ ಒಂದು ಜನ್ಮದಲ್ಲಿ ಮಾಡಿದ ಕರ್ಮ ಫಲವನ್ನು ಮರುಜನ್ಮದಲ್ಲಿ ಭೋಜಿಸುತ್ತಾನೆ ಎಂದು ಇದರ ಅರ್ಥ.
ಸನಾತನ ಧರ್ಮದ ತಿರುಳು
- ಪ್ರತಿಯೊಂದು ಜೀವ ಮತ್ತು ನಿರ್ಜೀವ ವಸ್ತುವಿನಲ್ಲೂ ದೈವತ್ವ ಅಸ್ತಿತ್ವದಲ್ಲಿ ಇರುತ್ತದೆ. ಜೀವನದ ಉದ್ದೇಶ ನಮ್ಮಲ್ಲಿ ಮತ್ತು ಇತರ ಜೀವ, ನಿರ್ಜೀವಗಳಲ್ಲಿ ಮನೆ ಮಾಡಿಕೊಂಡಿರುವ ದೈವತ್ವವನ್ನು ಕಂಡುಕೊಳ್ಳುವದೇ ಆಗಿದೆ.
- ಹಿಂದುತ್ವದ ಒಂದು ಮೂಲಭೂತ ವಿಶೇಷತೆ ಕೋಟಿ ಕೋಟಿ ಸ್ವರೂಪಗಳಲ್ಲಿರುವ ದೈವತ್ವವನ್ನು ಆರಾಧಿಸುವದೇ ಆಗಿದೆ. ಒಬ್ಬ ಭಕ್ತ / ಭಕ್ತೆ ತಾನು ಆರಿಸಿಕೊಂಡ ದೈವತ್ವಕ್ಕೆ ಯಾವ ಸ್ವರೂಪ ಕೊಡುತ್ತಾನೆ /ಳೆ ಅನ್ನುವದು ಅವನ / ಳ ಸ್ವಭಾವ ಮತ್ತು ಸಂವೇದನೆಯ, ಒಲವಿನ ಮೇಲೆ ನಿರ್ಭರವಾಗಿರುತ್ತದೆ.
- ದೈವತ್ವವನ್ನು ಹುಡುಕುವ ಪ್ರತಿಯೊಂದು ದಾರಿಯೂ ಕ್ರಮಬಧ್ಧವಾಗಿದೆ. ಈ ವಿವಿಧ ದಾರಿಗಳು ಪರಸ್ಪರ ಗೌರವ ಕೊಡುವದು ಮುಖ್ಯ ಅವಶ್ಯಕತೆಯಾಗಿದೆ. ಹೀಗಾಗಿ ಬಹುತತ್ವವಾದ ಮತ್ತು ಧರ್ಮ ನಿರಪೇಕ್ಷತೆಗಳು ಹಿಂದುತ್ವದ ಮೂಲದಲ್ಲೇ ಅವಿಭಾಜ್ಯ ಅಂಗಗಳಾಗಿ ಸಮ್ಮಿಲಿತಗೊಂಡಿವೆ.
- ಯಾವುದೇ ವರ್ಣ ಮತ್ತು ಜಾತಿಗೆ ಸೇರಿದ ಪ್ರತಿ ವ್ಯಕ್ತಿಯೂ ನಿರ್ವಾಣಕ್ಕೆ ಅರ್ಹನಾಗಿದ್ದಾನೆ. ಭಗವದ್ಗೀತೆಯ ಅನುಸಾರ ಒಬ್ಬ ವ್ಯಕ್ತಿಯ ವರ್ಣ ಅವನ ಪ್ರಕೃತಿಸ್ವಭಾವ ಮತ್ತು ವೃತ್ತಿಕೌಶಲ್ಯದ ಮೇಲೆ ನಿರ್ಭರವಾಗಿರುತ್ತದೆಯೇ ಹೊರತು ಹುಟ್ಟು ಅಥವ ಆನುವಂಶಿಕತೆಯ ಮೇಲೆ ಅಲ್ಲ . ಜನ ತಮ್ಮ ವರ್ಣದ ಪಾತ್ರ ನಿರ್ವಹಿಸುತ್ತಾರೆ. ವಿವಿಧ ವೃತ್ತಿಗಳು ಸಾಮಾಜಿಕ ಜೀವನದ ನಿರ್ಧಾರಿತ ಆವಶ್ಯಕತೆಗಳು. ಅವುಗಳಲ್ಲಿ ಕೀಳು ಮೇಲಿನ ಪ್ರಶ್ನೆ ಇಲ್ಲ. ಪರಶುರಾಮ ಮತ್ತು ಶಬರಿ ಸ್ವಾಭಾವಿಕ ವರ್ಣಾಂತರದ ದೃಷ್ಟಾಂತಗಳು.
ವರ್ಣಾಶ್ರಮ ಪಧ್ಧತಿಯ ಬಗ್ಗೆ ಹೇಳುವದಾದರೆ ಅದರ ಮೂಲ ಪ್ರತಿಪಾದಕರು ಭೋಧಿಸಿದ್ದಕ್ಕೂ ಅನುಯಾಯಿಗಳು ಆಚರಣೆಯಲ್ಲಿ ತಂದದ್ದಕ್ಕೂ ಗ್ರಹಿಕೆಯ, ಪಾತಳಿಯ, ಆಳಗಳ, ಕಾಲಮಾನದ ಮತ್ತು ಸಾಂದ್ರತೆಗಳ ಭಿನ್ನತೆ, ಸೋರಿಕೆ ಉಂಟಾಗಿರುವ ಸಾಧ್ಯತೆಗಳಿವೆ. ಆದರ್ಶದ ಮಾದರಿಯ ನಿಲುವು ಮತ್ತು ಮೌಲ್ಯಗಳು ಕ್ರಮೇಣ ಕಾಲಾಂತರದಲ್ಲಿ ಅಪಾರ ಜನಸಂಖ್ಯೆಯ ಬಳಕೆಯಲ್ಲಿ ಸವೆಯುವ ಸಾಧ್ಯತೆ ಇದ್ದೇ ಇರುತ್ತದೆ. ಆ ಕಾರಣದಿಂದ ಆ ಪಧ್ಧತಿಯೇ ಬೇಡ ಅನ್ನುವದಕ್ಕಿಂತ ಕೆಲವು ಮಾರ್ಗದರ್ಶಕ ಶಿಸ್ತಿನ ನಿಯಮಗಳ ಆವಶ್ಯಕತೆಯನ್ನು ಒಪ್ಪಿಕೊಳ್ಳುವದು ಸಮಂಜಸವಾಗುತ್ತದೆ, ಅಂಥ ಒಂದು ವ್ಯವಸ್ಥೆ ಇದ್ದಾಗ ಅದನ್ನು ಮೀರುವ ಬಗ್ಗೆ ಒಂದು ಆಂತರಿಕ ಆತಂಕ, ಭಯ ಮತ್ತು ಸ್ವಾಭಾವಿಕ ಬಧ್ಧತೆಗಳು ಕೆಲಸ ಮಾಡುತ್ತವೆ.
ಪುರಾಣ ಕಾಲದ ವರ್ಣಾಶ್ರಮ ಪಧ್ಧತಿ
ಋಗ್ವೇದದಲ್ಲಿ ಹೇಳಿದಂತೆ ನಾಲ್ಕು ವರ್ಣಗಳು ಅಸ್ತಿತ್ವದಲ್ಲಿದ್ದವು. ಬ್ರಾಹ್ಮಣ ( ಪುರೋಹಿತರು ಮತ್ತು ಶಿಕ್ಷಕರು ), ಕ್ಷತ್ರಿಯ ( ರಾಜರು ಮತ್ತು ಯೋಧರು), ವೈಶ್ಯ ( ರೈತರು, ಭೂಮಾಲಿಕರು ಮತ್ತು ವ್ಯಾಪಾರಿಗಳು) ಮತ್ತು ಶೂದ್ರರು ( ಸೇವಕರು ಮತ್ತು ಕೆಲಸಗಾರರು ) ಎಂಬ ನಾಲ್ಕು ವರ್ಣಗಳಿದ್ದವು. ಇವುಗಳಿಗೆ ಹೊರತಾಗಿ ದಲಿತರು ಎಂಬ ಅಸ್ಪ್ರಶ್ಯ ಗುಂಪು ಇತ್ತು. ಇವರು ಸ್ವಚ್ಚತೆಯ ಕೆಲಸಗಳನ್ನು ಮಾಡಬೇಕಿತ್ತು. ಗಾಂಧೀಜಿಯವರು ಇವರನ್ನೇ ಹರಿಜನರು (ದೇವರ ಮಕ್ಕಳು ) ಎಂದು ಕರೆದರು. ಕ್ರಿ , ಶ. 5೦೦ ರಲ್ಲಿ ಒಂದು ವರ್ಣ ಅಥವಾ ಜಾತಿಯಲ್ಲಿ ಹುಟ್ಟಿ ಅದರಲ್ಲೇ ಸಾಯಬೇಕಿತ್ತೇ ವಿನಃ ಮೇಲ್ಬಢತಿಯ ಸಾಧ್ಯತೆ ಇರಲಿಲ್ಲ.
ಪ್ರಾಯಶಃ ಚಾತುರ್ವರ್ಣ ಅಂದಿನ ಸಮಾಜದ ಆವಶ್ಯಕತೆಯಾಗಿತ್ತು. ಸ್ವಾಮಿ ಶಿವಾನಂದರು ಹೇಳುವಂತೆ ಸಮಾಜ ಒಂದು ದೊಡ್ಡ ಯಂತ್ರ ಇದ್ದ ಹಾಗೆ ಮತ್ತು ಈ ವರ್ಣಗಳು ಅದರ ಭಾಗಗಳಿದ್ದ ಹಾಗೆ. ಒಂದು ಭಾಗ ಶಿಥಿಲ ಅಥವ ಅಶಕ್ತವಾಗಿದ್ದಲ್ಲಿ ಇಡೀ ಯಂತ್ರವೇ ಕೆಲಸ ಮಾಡುವ ಸಾಧ್ಯತೆ ಇರಲ್ಲ. ಆದ್ದರಿಂದ ಒಂದೊಂದು ಭಾಗವನ್ನು ಒಂದೊಂದು ಕಾರ್ಯ ಮಾಡಲು ವಿನ್ಯಾಸಗೊಳಿಸಿ ತಯಾರಿಸಿ, ಪ್ರಯೋಗಿಸಿ, ಸಿಧ್ಧಪಡಿಸಲಾಗಿತ್ತು.
ವರ್ಣಾಶ್ರಮ ಪಧ್ಧತಿ ಸಮಾಜದ ಅಂಗವಾದ ಜನಸಂಖ್ಯೆಯನ್ನು ಪರಸ್ಪರ ಅವಲಂಬಿತ ಭಾಗಗಳಲ್ಲಿ ವಿಂಗಡಿಸಿ ಸಮಾಜ ಸುಸೂತ್ರವಾಗಿ ಸಾಗುವಂತೆ ಮಾಡಿದ ಒಂದು ವ್ಯವಸ್ಥೆಯಾಗಿತ್ತು. ಯಾವುದೇ ಸಮಾಜದಲ್ಲಿ ಬೇರೆ ಬೇರೆ ಗುಂಪಿನ ಜನ ಬೇರೆ ಬೇರೆ ಕಾರ್ಯಗಳನ್ನು ಮಾಡುತ್ತಾರೆನ್ನುವದು ಒಪ್ಪತಕ್ಕ ಮಾತು. ಬುಧ್ಧಿಜೀವಿಗಳು ಮತ್ತು ಕರಕೌಶಲ್ಯದ ಕೆಲಸ ಮಾಡುವವರ (WHITE COLLAR and BLUE COLLAR) ಮಧ್ಯದ ವಿಂಗಡಣೆ ಜಗತ್ತಿನ ಎಲ್ಲ ನಾಗರಿಕತೆಗಳಲ್ಲೂ ಅಸ್ತಿತ್ವದಲ್ಲಿ ಇತ್ತು. ಅಲ್ಲದೆ ವರ್ಣಾಶ್ರಮ ವ್ಯವಸ್ಥೆಯ ಉದ್ದೇಶ ಪ್ರತಿ ಗುಂಪಿಗೂ ತಮ್ಮ ತಮ್ಮ ಸ್ವಾಭಾವಿಕ ಒಲವು ಮತ್ತು ಕೌಶಲ್ಯಗಳ ಅನುಗುಣವಾಗಿ ಕೆಲಸ ಮಾಡುವ ಅವಕಾಶ ಒದಗಿಸುವದೂ ಆಗಿತ್ತು.
ಒಂದು ವಿಶಿಷ್ಟ ಉದ್ಯೋಗದ ಒಲವು ಮತ್ತು ಕುಶಲತೆಗಳು ಆನುವಂಶಿಕ ತಳಿಯಲ್ಲೂ ಇರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ . ಪ್ರತಿಯೊಬ್ಬ ಜೀವಿ ಹುಟ್ಟಿನಿಂದಲೇ ಒಂದು ನಿರ್ದಿಷ್ಟ ಉದ್ಯೋಗದ ದಿಶೆಯಲ್ಲಿ ಆನುವಂಶಿಕವಾಗಿ ಒಲವು ಹೊಂದಿರುವ ಸಾಧ್ಯತೆ ಇದೆ. ಒಬ್ಬ ವ್ಯಕ್ತಿ ಯಶಸ್ವೀ ಉದ್ಯಮಿಯಾಗಬೇಕಿದ್ದರೆ ಅವನ ರಕ್ತದಲ್ಲೇ ಆ ಗುಣ ಇರಬೇಕಲ್ಲದೆ ಅವನು ಅದಕ್ಕೆ ತಕ್ಕ ವಿಶಿಷ್ಟ ಕೌಟುಂಬಿಕ ಕುಶಲತೆ, ಆಚರಣೆ ಮತ್ತು ವ್ಯವಹಾರಗಳ ಮಧ್ಯೆ ಬೆಳೆಯಬೇಕಾಗುತ್ತದೆ.
ಭಾರತವನ್ನು ಆಳುತ್ತಿದ್ದ ಬ್ರಿಟಿಶ್ ಸರ್ಕಾರ ಕೂಡ 1860 ರಿಂದ 1920 ರ ವರೆಗೆ ಆಡಳಿತದಲ್ಲಿ ಜಾತಿ ವಿಂಗಡಣೆ ಅನುಸರಿಸಿ ಮಹತ್ವದ ಸ್ಥಾನಗಳಲ್ಲಿ ಮೇಲ್ಜಾತಿಯವರನ್ನೇ ನೇಮಿಸುತ್ತಿತ್ತು. 1920 ರಲ್ಲಿ ನಡೆದ ಸಾಮಾಜಿಕ ಪ್ರತಿಭಟನೆಯ ನಂತರ ಈ ನೀತಿ ಸಡಿಲಾಗಿದ್ದಲ್ಲದೇ ಸರಕಾರೀ ನೌಕರಿಗಳಲ್ಲಿ ಕೆಳಜಾತಿಯವರಿಗೆ ಕೆಲ ಪ್ರತಿಶತದ ಮೀಸಲಾತಿಯ ಪ್ರಥೆ ಜಾರಿಗೆ ಬಂದಿತು.
ಮುಂದೆ ಭಾರತ ಸ್ವತಂತ್ರವಾಗಿ ನಮ್ಮದೇ ಸರಕಾರ ಆಳುವಾಗ 1949 ರಲ್ಲಿ ಜಾತಿ ಪಧ್ಧತಿಯನ್ನು ಪೂರ್ಣವಾಗಿ ನಿರ್ಮೂಲನೆ ಮಾಡುವ ಕಾಯಿದೆ ಬಂದಿತು. ಅಸ್ಪ್ರುಶ್ಯತೆಯ ಆಚರಣೆ ಮತ್ತು ಒಬ್ಬರ ಜಾತಿ ಆಧಾರದ ಮೇಲೆ ಅವರ ಜತೆ ಭೇದ ನೀತಿ ಅನುಸರಿಸುವದು ಅಪರಾಧಗಳಾದವು. ತದ ನಂತರ ಜಾತಿಭೇದ ತನ್ನ ತೀವ್ರತೆಯನ್ನು ಪಟ್ಟಣದ ಪ್ರದೇಶಗಳಲ್ಲಿ ಹೆಚ್ಚಿನ ಮಟ್ಟಿಗೆ ಕಳೆದುಕೊಂಡಿತು. ಆದರೆ ಹಳ್ಳಿಯ ಪ್ರದೇಶಗಳಲ್ಲಿ ಈ ಪರಂಪರೆಯು ಸಣ್ಣ ಪ್ರಮಾಣದಲ್ಲಿ ಉಳಿದುಕೊಂಡಿತು. ಸರಕಾರ ಹೊಸ ನೀತಿ ತಂದು ಶಿಕ್ಷಣದಲ್ಲಿ ಮತ್ತು ಸರಕಾರೀ ನೌಕರಿಗಳಲ್ಲಿ ದಲಿತರಿಗೆ ಮೀಸಲಾತಿ ನೇಮಿಸಿ ಅವರನ್ನು ಮೇಲೆತ್ತುವ ಮತ್ತು ಸಹಾಯ ಒದಗಿಸುವ ಕ್ರಮ ಕೈಕೊಂಡಿತು.
೧. ಭಾರತ ಸರಕಾರದ ಜಾತಿ ಮೀಸಲಾತಿಯ ನೀತಿ ನಿಯಮಗಳು
ಭಾರತ ಸರಕಾರ ಇತಿಹಾಸ ಕಾಲದಿಂದ ಹಿಂದುಳಿದ ಕೆಲವು ಜಾತಿ ಮತ್ತು ಬುಡಕಟ್ಟು ಜನಾಂಗಗಳಿಗೆ ಸಂವಿಧಾನ ಬಧ್ಧವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ನಾಮಕರಣ ಮಾಡಿದೆ. ಈ ಸಂಬಂಧದಲ್ಲಿ ಸಂವಿಧಾನ ೧೯೫೦ ರ ಪರಿಶಿಷ್ಟ ಜಾತಿ ಕಾಯಿದೆಯ ಮೊದಲ ಹಂತದಲ್ಲಿ ೨೯ ರಾಜ್ಯಗಳಲ್ಲಿರುವ ೧೧೦೮ ಜಾತಿಗಳನ್ನು ಅಧಿಕೃತ ಪಟ್ಟಿ ಮಾಡಲಾಯಿತು . ಅದೇ ರೀತಿ ಸಂವಿಧಾನ ೧೯೫೦ ರ ಪರಿಶಿಷ್ಟ ಪಂಗಡ ಕಾಯಿದೆಯ ಮೊದಲ ಹಂತ ದಲ್ಲಿ ೨೨ ರಾಜ್ಯಗಳಲ್ಲಿ ರುವ ೭೪೪ ಪಂಗಡಗಳ ಅಧಿಕೃತ ಪಟ್ಟಿ ಮಾಡಲಾಯಿತು. ಸ್ವಾತಂತ್ರ್ಯದ ಮೊದಲಾಗಿ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗಳಿಗೆ ಮೀಸಲಾತಿ ನೀಡಿ ರಾಜಕೀಯ ಪ್ರಾತಿನಿಧ್ಯವನ್ನು ನಿಯಮಿಸಿದೆ. ಸಂವಿಧಾನವು ಈ ಸಮೂಹಗಳಿಗಾಗಿ ಧೃಡೀಕೃತ ಕಾರ್ಯಕ್ರಮದ ಸಾಮಾನ್ಯ ನಿಯಮಗಳನ್ನು ಗೊತ್ತು ಮಾಡಿದೆ.
ಎಸ್ಸಿ, ಎಸ್ಟಿ ಪಂಗಡಗಳ ಪರಿಸ್ಥಿತಿಯನ್ನು ಸುಧಾರಿಸುವದಕ್ಕೆ ಸರಕಾರ ಕೈಕೊಂಡ ಕ್ರಮಗಳು
ಸಂವಿಧಾನ ಈ ದಿಶೆಯಲ್ಲಿ ಮೂರು ಕ್ರಮಗಳ ತಂತ್ರ ವಿಧಾನವನ್ನು ಸೂಚಿಸಿದೆ.
- ರಕ್ಷಣಾತ್ಮಕ ವ್ಯವಸ್ಥೆ : ವರ್ಗ ಸಮಾನತೆ ಕಾಪಾಡುವ, ಸಮಾನತೆಯ ಅತಿಕ್ರಮಣದ ವಿರುಧ್ಧ ದಂಡಿಸುವ, ಮತಭೇದವನ್ನು ಜಾರಿಯಲ್ಲಿ ಇಡಲು ಪ್ರಯತ್ನಿಸುವ ಆಚರಣೆಗಳನ್ನು ತೊಡೆದುಹಾಕುವ ಕ್ರಮಗಳ ಬಗ್ಗೆ ಕಾನೂನುಗಳನ್ನು ಜಾರಿಗೆ ತರಬೇಕು
- ಸಕಾರಾತ್ಮಕ ಕ್ರಿಯೆ :ಎಸ್ಸಿ ಮತ್ತು ಎಸ್ಟಿ ಸಮೂಹಗಳಿಗೆ ಉನ್ನತ ಶಿಕ್ಷಣದಲ್ಲಿ ಮತ್ತು ಉದ್ಯೋಗಗಳ ಹಂಚಿಕೆಯಲ್ಲಿ ಯೋಗ್ಯ ಅವಕಾಶಗಳನ್ನು ಒದಗಿಸುವ ನಿರ್ದಿಷ್ಟ ಕ್ರಮಗಳನ್ನು ಕೈಕೊಂಡು ಈ ಸಮೂಹಗಳು ಸಮಾಜದ ಮುಖ್ಯ ವಾಹಿನಿಯಲ್ಲಿ ಸಮ್ಮಿಲಿತಗೊಳ್ಳುವಂತೆ ನೋಡಿಕೊಳ್ಳುವದು
- ಅಭಿವೃಧ್ಧಿ : ಎಸ್ಸಿ, ಎಸ್ಟಿ ಸಮೂಹಗಳು ಮತ್ತು ಇತರ ಜಾತಿ ಸಮುದಾಯಗಳ ಮಧ್ಯೆ ಇರುವ ಸಾಮಾಜಿಕ ಮತ್ತು ಆರ್ಥಿಕ ಅಂತರಗಳನ್ನು ತೊಡೆದು ಹಾಕುವ ದಿಶೆಯಲ್ಲಿ ಸಂಪನ್ಮೂಲಗಳನ್ನು ಮತ್ತು ಲಾಭಾನ್ಶಗಳನ್ನು ವಿಶೇಷವಾಗಿ ಎಸ್ಸಿ ಮತ್ತು ಎಸ್ಟಿ ಸಮೂಹಗಳಿಗೆ ಒದಗಿಸುವದು
ರಾಷ್ಟ್ರೀಯ ಆಯೋಗಗಳು
ಈ ದಿಶೆಯಲ್ಲಿ ಸಂಬಂಧಪಟ್ಟ ಸಂವಿಧಾನ ಮತ್ತು ಕಾನೂನುಗಳಲ್ಲಿ ನಿಗದಿತ ರಕ್ಷಣಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಭಾರತಾ ಸಂವಿಧಾನ ವಿಶೇಷ ವಿಧಿ ಕ್ರಮಾಂಕ 338 ಮತ್ತು 338A ಗಳ ಅಡಿಯಲ್ಲಿ ಎರಡು ಶಾಸನ ಬಧ್ಧ ಆಯೋಗಗಳನ್ನು ನೇಮಿಸಿತು : ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಮತ್ತು ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ . ಈ ಎರಡೂ ಆಯೋಗಗಳ ಅಧ್ಯಕ್ಷರು ರಾಷ್ಟ್ರೀಯ ಮಾನವಾಧಿಕಾರ ಆಯೋಗದ ಶಾಶ್ವತ ಆವ್ಹಾನಿತರಾಗಿರುತ್ತಾರೆ.
ಎಸ್ಸಿ ಮತ್ತು ಎಸ್ಟೀ ಅಲ್ಲದೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಆಶಕ್ತವಾದ ಇತರ ಕೆಳಜಾತಿಗಳನ್ನು ಸೇರಿಸಿ ಮೂರನೆಯ ಮೀಸಲಾತಿಯಾಗಿ ‘ಇತರ ಹಿಂದುಳಿದ ವರ್ಗ’ (OTHER BACKWARD CLASS – OBC) ವೆಂದು ಭಾರತ ಸರಕಾರವು ವಿಂಗಡಿಸಿ ಭಾರತದ ಸಂವಿಧಾನದ ಅಡಿ ನಿಯಮಿಸಿತು. 1980ರ ಮಂಡಲ್ ಕಮೀಶನ್ ವರದಿಯಂತೆ ಈ ಇತರ ಹಿಂದುಳಿದ ವರ್ಗ ಭಾರತದ ಜನಸಂಖ್ಯೆಯ 52 % ಇದೆಯೆಂದು ಘೋಷಿಸಿತು. ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ ( NSSO- NATIONAL SAMPLE SURVEY ORGANISATION) 2006 ರಲ್ಲಿ ಈ ಪ್ರಮಾಣ 41% ಇದೆ ಎಂದು ವರದಿ ಮಾಡಿತು. ಇತ್ತೀಚಿಗೆ ಇದು 40% ಇದೆಯೆಂದು ಅಂದಾಜು ಮಾಡಲಾಗಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ಈ ಓಬಿಸಿ ಸೂಚಿಯನ್ನು ಅಸ್ಥಾಯಿಯಾಗಿಟ್ಟು ಸಾಮಾಜಿಕ, ಶೈಕ್ಷಣಿಕ ಮತ್ತು ಅರ್ಥಿಕ ಬದಲಾವಣೆಗಳನ್ನು ಅನುಸರಿಸಿ ಕೆಲ ಜಾತಿಗಳನ್ನು ಸೇರಿಸಿ ಅಥವ ಕೆಲ ಜಾತಿಗಳನ್ನು ಹೊರತೆಗೆಯುವ ಪ್ರಕ್ರಿಯೆಯನ್ನು ಮಾಡುತ್ತದೆ. ಆದರೆ ಈ ಜಾತಿಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಅರ್ಥಿಕ ಮಟ್ಟಗಳ ಹರವು ವ್ಯಾಪಕವಾಗಿರುತ್ತದೆ. ಹಾಗಾಗಿ ಸರಕಾರ ಕೊಡುವ ಸವಲತ್ತುಗಳನ್ನು ಮೇಲಿನ ಕೆನೆ ಪದರಿನ (CREAMY LAYER) ಕಬಳಿಸುವ ಸಾಧ್ಯತೆ ಇರುವದಲ್ಲದೆ ನಿಜವಾದ ಅವಶ್ಯಕತೆ ಇರುವ ಒಂದೊಂದು ಜಾತಿಯ ಕೆಳಮಟ್ಟಗಳು ವಂಚಿತವಾಗುವ ಅಪಾಯ ಇರುತ್ತದೆ. ಸರಕಾರ 1992 ರಲ್ಲಿ ಹಿಂದುಳಿಯುವಿಕೆಯನ್ನು ಗುರುತಿಸಲು ಹನ್ನೊಂದು ಮಾಪಕಗಳನ್ನು ವಿಧಿಸಿತು. ಹಿಂದುಳಿದ ಜಾತಿಗಳ ರಾಷ್ಟ್ರೀಯ ಆಯೋಗ ಅಕ್ಟೋಬರ್ 2015 ರಲ್ಲಿ ಕುಟುಂಬದ ಒಟ್ಟು ವಾರ್ಷಿಕ ಆದಾಯ ಹದಿನೈದು ಲಕ್ಷ ರೂಪಾಯಿ ಅಥವ ಹೆಚ್ಚಿಗೆ ಇದ್ದಲ್ಲಿ ಇತರ ಹಿಂದುಳಿದ ವರ್ಗದ ಸವಲತ್ತು ಪಡೆಯಲು ಅನರ್ಹರು ಎಂದು ನಿಗದಿಪಡಿಸಿತು. ಮತ್ತು ಈ OBC ವರ್ಗದಲ್ಲಿ ಹಿಂದುಳಿದ, ಜಾಸ್ತಿ ಹಿಂದುಳಿದ ಮತ್ತು ಅತೀ ಹಿಂದುಳಿದ ಎಂಬ ಮೂರು ಭಾಗಗಳನ್ನು ಮಾಡಿ ಆಯಾ ಭಾಗದ ಜನಸಂಖ್ಯೆಗೆ ಅನುಗುಣವಾಗಿ ಸವಲತ್ತುಗಳನ್ನು ಹಂಚುವ ಕಾರ್ಯ ಕೈಕೊಳಲಾಯಿತು. ಕುಟುಂಬದ ವಾರ್ಷಿಕ ಗಳಿಕೆಗೆ ಅನುಸಾರವಾಗಿ OBC ಸವಲತ್ತುಗಳನ್ನು CREAMY LAYER ನ ಬಳಸುವಿಕೆಯಿಂದ ಹೊರಗಿದುವದಲ್ಲದೆ ಈ ಕೆಳಗಿನ ಇತರ ಅಂಶಗಳನ್ನು ನಿಗದಿಪಡಿಸಲಾಯಿತು.
ಡಾಕ್ಟರ್, ಇಂಜಿನಿಯರ್, ಲೆಕ್ಕ ತಪಾಸಿಗರ, ಆಕ್ಟರ್ಸ್ , ಸಲಹೆಗಾರರ, ಮಾಧ್ಯಮ ವೃತ್ತಿಯವರ ,ಬರೆಹಗಾರರು, ಅಧಿಕಾರಿಗಳ , ಕರ್ನಲ್ ಮತ್ತು ಹೆಚ್ಚಿನ ದರ್ಜೆಯ ರಕ್ಷಣಾ ಅಧಿಕಾರಿಗಳ , ನ್ಯಾಯಾಧೀಶರ, ಕ್ಲಾಸ್ A ಮತ್ತು B ಸರಕಾರೀ ಅಧಿಕಾರಿಗಳ, ಶಾಸಕರ ಮತ್ತು ಸಂಸದರ ಮಕ್ಕಳು OBC ಸವಲತ್ತುಗಳನ್ನು ಪಡೆಯಲು ಅನರ್ಹರು.
ಇತ್ತೀಚಿಗಿನ ಸ್ಥಿತಿಯಂತೆ ಭಾರತ ಸರಕಾರದ ಜಾತಿವಾಚಕ ಮೀಸಲಾತಿಯ ಪ್ರಮಾಣಗಳು ಮತ್ತು ಗರಿಷ್ಠತೆ
ಜಾತಿ / ವರ್ಗ ಮೀಸಲಾತಿ ಪ್ರತಿಶತ ಜನಸಂಖ್ಯೆ ಪ್ರತಿಶತ
ಪರಿಶಿಷ್ಟ ಜಾತಿ ( SC ) 7.5 % 16.6 %
ಪರಿಶಿಷ್ಟ ಪಂಗಡ ( ST ) 15.0 % 8.6 %
ಇತರ ಹಿಂದುಳಿದ ವರ್ಗ (OBC) 27.5 % 40.0 %
ಒಟ್ಟು ಗರಿಷ್ಠ ಮೀಸಲಾತಿ 50.0 %
ಈ OBC ಅನ್ನುವದು ಒಂದು ತೆರೆದ ವೇದಿಕೆಯಾದ್ದರಿಂದ ಯಾವುದೋ ರಾಜಕಾರಣಿಗಳಿಂದ ಪ್ರೇರಿತವಾಗಿ ಯಾವುದೋ ಒಂದು ಅನುಕೂಲಸ್ಥ ಜಾತಿಯ ಜನವೇ OBC ಸ್ಟೇಟಸ್ ಬೇಡಿ ಹೋರಾಟ ಶುರು ಮಾಡಿಕೊಂಡು ಬಿಡುತ್ತಾರೆ. ಎಲ್ಲಾ ಜಾತಿಗಳನ್ನು ಸೇರಿಸಿ OBC ಕೋಟಾದ ಒಟ್ಟು ಮೊತ್ತದಲ್ಲಿ 50% ಗರಿಷ್ಠ ಮಟ್ಟ ಇರುವದರಿಂದ ಸರಕಾರ ಒಪ್ಪುವದಕ್ಕಾಗಲ್ಲ. ಮಾದನದ್ದನ್ನು ಕಿತ್ಕೊಂಡು ಹೈದನಿಗೆ ಕೊಡಕ್ಕಾಗಲ್ಲ. ಹೋರಾಟ ತೀವ್ರವಾಗಿ ಜನ ಧನ ಆಸ್ತಿಗಳ ಹಾನಿ ಪಾನಿ ಆಗುತ್ತವೆ. ಮಾಧ್ಯಮ ಅವರ ಜತೆ ಕುಣಿಯುತ್ತೆ. ಗೊತ್ತಿದ್ದೂ ಗೊತ್ತಿದ್ದೂ ಸರಕಾರ ಮಣಿಯುತ್ತೆ .ಗಲಾಟೆ ಮಾಡಿದವರಿಗೆ OBC ಮಾನ್ಯತೆ ಸಿಕ್ಕತ್ತೆ. ಆಂದೋಲನ ನಿಲ್ಲತ್ತೆ. ಚುಚ್ಚಿ ಕೊಟ್ಟ ರಾಜಕೀಯ ಪಕ್ಷಕ್ಕೆ ಬೆಂಬಲದ ಲಾಭವಾಗುತ್ತೆ. ಚುನಾವಣೆ ಮುಗಿಯುತ್ತೆ. ನ್ಯಾಯಾಲಯ ಮಧ್ಯೆ ಪ್ರವೇಶಿಸಿ ಆ OBC ಮಾನ್ಯತೆಯನ್ನ ರದ್ದುಗೊಳಿಸತ್ತೆ.ಮೈದಾನ ಈ ರಾಜಕೀಯ ನಾಟಕದ ಪುನರಾವರ್ತನೆಗೆ ಮತ್ತೆ ಸಿಧ್ಧವಾಗತ್ತೆ. ಇದೊಂದು ಪುನರಾವ್ರುತ್ತಿಯ ವಿಷವರ್ತುಲ.
ಜಾತಿ ಭೇದದ ವರ್ತಮಾನ ಸ್ಥಿತಿ
ಚಾತುರ್ವರ್ಣ ಪಧ್ಧತಿ ಶಿಕ್ಷಿತ ಪಟ್ಟಣ ಪ್ರದೇಶಗಳಲ್ಲಿ ಮಾಯವಾಗಿದೆ. ಶಿಕ್ಷಣ, ಸರಕಾರೀ ಉದ್ಯೋಗ ನೇಮಕಾತಿ, ಸಂಬಳದಲ್ಲಿ ವಾರ್ಷಿಕ ಹೆಚ್ಚಳ , ಉದ್ಯೋಗದಲ್ಲಿ ಬಡ್ತಿ ಇವೆಲ್ಲವುಗಳಲ್ಲೂ ಸರಕಾರೀ ಜಾತಿ ಮೀಸಲಾತೀ ಪಧ್ಧತಿಯಿಂದ ಕೆಳ ಜಾತಿಯ ವ್ಯಕ್ತಿಗಳಿಗೂ ಮೇಲಿನ ಹುದ್ದೆಗಳನ್ನು ಅಲಂಕರಿಸುವ ಅವಕಾಶ ಸಿಕ್ಕಿದೆ. ಮೇಲು ಜಾತಿಯ ವ್ಯಕ್ತಿಗಳು ಈ ಸ್ಪರ್ಧಾತ್ಮಕ ಓಟದಲ್ಲಿ ಸೋತಲ್ಲಿ , ಕೆಳಗಿನ ದರ್ಜೆಯ ಹುದ್ದೆಗಳನ್ನು ಸ್ವೀಕರಿಸಲು ರಾಜಿ ಮಾಡಿಕೊಂಡಿದ್ದಾರೆ. ಹಾಗಾಗಿ ಕೆಳಜಾತಿಯವರ ಮೇಲೆ ಮೇಲ್ಜಾತಿಯವರು ದಬ್ಬಾಳಿಕೆ ಮಾಡುವ ಸಂಭಾವ್ಯತೆ ಎಲ್ಲಿಂದ ಬರಬೇಕು ? ಈ ಬಗ್ಗೆ ಕೂಗು ಅವಾಸ್ತವ, ದುರುದ್ದೇಶಪೂರಕ ಅಂತಲೇ ಹೇಳಬಹುದು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮೇಲು ಕೀಳು ಜಾತಿಗಳ ವ್ಯಕ್ತಿಗಳ ಹಿನ್ನೆಲೆ, ಸಂಸ್ಕಾರ, ಶಿಕ್ಷಣ ಗಳ ಅಸಮಾನತೆಯಿಂದಾಗಿ ಅವರುಗಳ ಜೀವನ ಸ್ತರ ಮತ್ತು ಬೆಳವಣಿಗೆಯ ಸಾಧ್ಯತೆಗಳಲ್ಲಿ ಹೆಚ್ಚಿನ ಅಸಮತೋಲನ ಬಾರದಿರಲಿ ಎಂದು ಸರಕಾರ ಕಾಯಿದೆ ಬಧ್ಧವಾಗಿ ಈ ಜಾತಿ ಸಂಬಂಧದ ಮೀಸಲಾತಿಯನ್ನು ಜಾರಿಗೆ ತಂದಿತ್ತು. ಆದರೆ ಈ ಮೀಸಲಾತಿಗೂ ಒಂದು ಸಮಯ ನಿರ್ಬಂಧ ಯೋಜನೆ ಮಾಡಲಾಗಿತ್ತು. ಉದಾಹರಣೆಗೆ ಹತ್ತು ವರುಷ ಇರಬಹುದು. ಆದರೆ ಈ ಸವಲತ್ತು ಪಡೆದ ವ್ಯಕ್ತಿಗಳ ಸ್ವಾಭಾವಿಕ ಸಾಮರ್ಥ್ಯದ ಕೊರತೆ, ಆರಾಮಕರ ಸ್ಥಿತಿಯಿಂದ ಹೊರಬರುವದರ ವಿರೋಧ ಮಾನಸಿಕ ಸ್ಥಿತಿಯಿಂದಾಗಿ ಮತ್ತು ಎಲ್ಲಾ ಪಕ್ಷಗಳ ರಾಜಕಾರಣಿಗಳ ಜನಪ್ರಿಯತೆಯ ಕಡೆಗಿನ ಹಂಬಲದಿಂದಾಗಿ ಈ ಮೀಸಲಾತಿ ಮುಂದುವರಿಯುತ್ತಿದೆ ಮತ್ತು ತೆಗೆದು ಹಾಕಲ್ಪಡುವ ಲಕ್ಷಣಗಳು ಕಾಣಿಸುವದಿಲ್ಲ. ಕಷ್ಟ ಪಟ್ಟು ಅಭಿನವ , ಪ್ರಗತಿಪರ ಮತ್ತು ವೃತ್ತಿಪರ ಸಮಾಜವನ್ನು ಕಟ್ಟುವದು ಯಾರಿಗೆ ಬೇಕು ಹೇಳಿ.
ಸಂವಿಧಾನ, ಕಾನೂನು ಮತ್ತು ಸರಕಾರಗಳಿಂದ ಇಷ್ಟೊಂದು ಬೆಂಬಲ, ಕೈ ಹಿಡಿದು ನಡೆಸುವ ಆಸರೆ ಮತ್ತು ರಕ್ಷಣೆ ಇರುವಾಗ ಕೆಳ ಜಾತಿಯ ಜನರು ಜೀವನವನ್ನು ಸಂತೋಷದಿಂದ ಸಾಗಿಸುತ್ತಿರುವಾಗ, ಮೇಲು ಜಾತಿಯವರ ದಬ್ಬಾಳಿಕೆಯ ಪ್ರಶ್ನೆಯೇ ಉದ್ಭವಿಸುವದಿಲ್ಲ . ಯಾವುದೋ ಜಾಯಮಾನದಲ್ಲಿದ್ದ ಜಾತಿ ಭೇದ ಮತ್ತು ದಬ್ಬಾಳಿಕೆ ಈಗ ಮಾಯವಾಗಿದೆ. ಎಲ್ಲೋ ಹಳ್ಳಿಗಳಲ್ಲಿ ಶಿಕ್ಷಣದ ಅಭಾವ , ವರ್ತಮಾನದ ಕಾನೂನು ಬಗ್ಗೆ ಅಜ್ನ್ಯಾನ ಇರೋ ಕಡೆಗೆ ಏನೋ ಅಲ್ಪ ಸ್ವಲ್ಪ ಇರಬಹುದು. ಅದನ್ನೇ ಈ ಮಾಧ್ಯಮದವರು ದೊಡ್ಡದನ್ನಾಗಿ ಮಾಡಿ ಪ್ರಚಾರ ಮಾಡುತ್ತಾರೆ. ಸರಕಾರೀ ಅಧಿಕಾರಿಗಳು ಕಾನೂನು ಕ್ರಮ ಜರುಗಿಸುತ್ತಾರೆ. ಕೆಲವಾರು ಸಲ ಕೃತಕ ಘಟನೆಗಳು ಹುಟ್ಟಿ ಹಾಕಲ್ಪಡುತ್ತವೆ ಮತ್ತು ಹೆಣಕ್ಕೆ ಎಗರುವ ಹದ್ದುಗಳಂತೆ ರಾಜಕೀಯ ನಾಯಕರಾಗಿದ್ದುಕೊಂಡೂ ನಿರುದ್ಯೋಗಿಗಳಾದ ವ್ಯಕ್ತಿಗಳು ಧಾವಿಸುತ್ತಾರೆ. ಈಗ ಕೇಳಿಸುತ್ತಿರುವ “ತೋಳ ಬಂತಲೋ ತೋಳ” ಕೂಗು ಅರ್ಧ ಶತಮಾನದ ಹಿಂದೆ ಓಡಾಡಿದ ತೋಳಿನ ಬಗ್ಗೆ ಇರಬಹುದು. ಕಟು ವಾಸ್ತವಿಕತೆಯ ಪ್ರಕಾರ ಈಗ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಈಗ ಜಾತೀ ರಾಜಕಾರಣದಿಂದ ಬ್ರಾಹ್ಮಣರು ಒಂದು ರೀತಿಯಿಂದ ಅಸ್ಪೃಶ್ಯರು ಅನ್ನಿಸಿಕೊಳ್ಳೋ ಹಾಗಾಗಿದೆ. ದಲಿತ ಅನ್ನೋ ಪದ ತಲೆ ಮೇಲೆ ಇಟ್ಟುಕೊಂಡು ಮೆರವಣಿಗೆ ತೆಗೆಯೋ ಹಾಗಾಗಿದೆ, ಆ ದಲಿತರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಗತಿ ಸ್ಥಿತಿಗಳು ಯಾವ ಪಾತಾಳದಲ್ಲೋ ಇಡಲ್ಪಟ್ಟಿದ್ರುನೂವೇ.
ಟೀಕೆ 2 ; ಅಲ್ಪಸಂಖ್ಯಾತ ಮುಸ್ಲಿಂ ಮೇಲೆ ಬಹುಸಂಖ್ಯಾ ತ ಹಿಂದೂಗಳ ಆಪಾದಿತ ದಬ್ಬಾಳಿಕೆ
ಸರಕಾರದ ಜನಗಣತಿಗಳ ಅನುಗುಣವಾಗಿ ಭಾರತದಲ್ಲಿ ಹಿಂದೂಗಳ ಜನಸಂಖ್ಯೆ 1951 ನಲ್ಲಿ ಇದ್ದ 84.1 % 2011 ರಲ್ಲಿ 79.8% ಆಗಿದೆ. ಮುಸ್ಲಿಮರ ಜನಸಂಖ್ಯೆ 9.8 % ನಿಂದ 14.23% ಆಗಿದೆ. ಕ್ರಿಶ್ಚಿಯನ್ಸ್ ಜನಸಂಖ್ಯೆ 2.3 % ನಿಂದ 2.3 % ಗೆನೆ ಸ್ಥಿರವಾಗಿದೆ.
ಶ್ರೀ ಸಂಜೀವ ನಯ್ಯರ್ ಅವರ ಪ್ರಕಾರ 1951 ರಿಂದ 2011 ರ ವರೆಗೆ ವಿವಿಧ ಧರ್ಮದ ಜನಸಂಖ್ಯೆಗಳ ಪರಸ್ಪರ ಪ್ರಮಾಣಗಳಲ್ಲಿ ಆದ ಬದಲಾವಣೆಯ ದೃಷ್ಟಿಯಿಂದ ಅಲ್ಪಸಂಖ್ಯಾತರು ಎಂಬ ಪದದ ಅರ್ಥದ ಪುನರಾವಲೋಕನ ಮಾಡುವ ಅವಶ್ಯಕತೆ ಇದೆ. ಭಾರತದಲ್ಲಿ ಮುಸ್ಲಿಮ್ಸ್ ಜನಸಂಖ್ಯೆ ಜಗತ್ತಿನ ಕೆಲ ರಾಷ್ಟ್ರಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚಿಗೆ ಇದೆ. ಕೇವಲ ಹಿಂದೂ ಜನಸಂಖ್ಯೆಗಿಂತ ಮುಸ್ಲಿಂ ಜನಸಂಖ್ಯೆ ಕಡಿಮೆ ಇದ್ದ ಮಾತ್ರಕ್ಕೆ ಅವರನ್ನು ಅಲ್ಪಸಂಖ್ಯಾತರು ಅನ್ನುವದು ಸರಿಯೇ?
ಮುಸ್ಲಿಮ್ಸ್ ಜನಸಂಖ್ಯೆ ಜಮ್ಮು ಕಾಶ್ಮೀರನಲ್ಲಿ 68.5 %, ಆಸ್ಸಾಮ್ ನಲ್ಲಿ 34 %, ವೆಸ್ಟ್ ಬೆಂಗಾಲ್ ನಲ್ಲಿ 27%, ಕೇರಳದಲ್ಲಿ 26.3% ಮತ್ತು ಉತ್ತರಪ್ರದೇಶದಲ್ಲಿ 19.2 % ಇದೆ. ಕ್ರಿಶ್ಚಿಯನ್ಸ್ ಜನಸಂಖ್ಯೆ ಕೇರಳದಲ್ಲಿ 18.3 % ಇದೆ.
ಭಾರತದ ಸಂವಿಧಾನ ಅಲ್ಪಸಂಖ್ಯಾತರನ್ನು ವ್ಯಾಖ್ಯಾಯಿಸುವ ಹೊಸದರಲ್ಲಿ ಮುಸ್ಲಿಮ್ಸ್ , ಕ್ರಿಶ್ಚಿಯನ್ಸ್ ಮತ್ತು ಪಾರ್ಸಿಗಳನ್ನು ಅಲ್ಪಸಂಖ್ಯಾತರು ಎಂದು ಗುರುತಿಸಿತ್ತು. 2005 ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದಂತೆ ಅಲ್ಪಸಂಖ್ಯಾತರು ಅಂದರೆ ಯಾವ ಒಂದು ಜನರ ಗುಂಪಿಗೆ ಅಥವಾ ಒಂದು ಜಾತಿ ಸಮುದಾಯಕ್ಕೆ ತನ್ನ ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು ಇತರ ಬಹುಸಂಖ್ಯಾತ ಗುಂಪುಗಳಿಂದ ವಂಚಿತವಾಗದ ಹಾಗೆ ರಕ್ಷಣೆಯ ಆವಶ್ಯಕತೆ ಇದೆ ಎಂದು ಗುರುತಿಸಲ್ಪಡಬಹುದೋ ಅಂಥ ಗುಂಪು ಅಥವಾ ಸಮುದಾಯ. ಅದೇ ತೀರ್ಪಿನ ಪ್ರಕಾರ ಬಹುಸಂಖ್ಯಾತರೆಂದರೆ ಪ್ರಜಾಪ್ರಭುತ್ವದ ಚುನಾವಣೆಯ ಪ್ರಕ್ರಿಯೆಯಲ್ಲಿ ಗೆದ್ದು ರಾಜಕೀಯ ಅಧಿಕಾರ ಪಡೆಯುವಂಥವರು. ಜನಸಂಖ್ಯೆಯ ಯಾವ ಪ್ರತಿಶತ ಪ್ರಮಾಣದ ಮೇಲೆ ಒಂದು ಸಮುದಾಯದ ಜನಸಂಖ್ಯೆ ಬೆಳೆದಲ್ಲಿ ಅದು ತನ್ನ ಅಲ್ಪಸಂಖ್ಯಾತ ಸ್ಥಾನವನ್ನು ಕಳೆದುಕೊಳ್ಳುತ್ತದೆ ಅಂತ ಸಂವಿಧಾನದಲ್ಲಿ ಹೇಳಲಿಲ್ಲ.
ಭಾರತದಲ್ಲಿ ಈಗಿರುವ ತಾರ್ಕಿಕ ತಿಳುವಳಿಕೆಯ ಪ್ರಕಾರ ಬಹುಸಂಖ್ಯಾತ ಸಮಾಜದ ಜನಸಂಖ್ಯೆಗಿಂತ ಕಡಿಮೆ ಜನಸಂಖ್ಯೆ ಇರುವ ಎಲ್ಲ ಸಮಾಜಗಳೂ ಅಲ್ಪಸಂಖ್ಯಾತರೇ. ಈ ತರ್ಕದ ಮೂಲ ಅಂಶಗಳೇನೆಂದರೆ :
- ಹಿಂದೂ ಬಹುಸಂಖ್ಯಾತರಿಂದ ಇತರ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯಾಗಬೇಕು.
- ರಾಜಕೀಯ ಅಧಿಕಾರದಲ್ಲಿರುವ ಹಿಂದೂ ಬಹುಸಂಖ್ಯಾತರು ಚುನಾವಣೆಗಳನ್ನು ಹಿಂದೂ ಧರ್ಮದ ಆಧಾರದ ಮೇಲೆ ಗೆದ್ದದ್ದು .
- ಹಿಂದೂಗಳಲ್ಲದವರನ್ನು ಹಿಂದೂಗಳು ತಮ್ಮ ಮತಕ್ಕೆ ಸೇರಿಕೊಳ್ಳಲು ಒತ್ತಾಯ ಮಾಡಬಹುದಾಗಿದೆ .
ಈ ತರ್ಕ ಅಸಂಬಧ್ಧ , ಅಸಮರ್ಪಕವೆಂದು ಭಾರತದ ಹಿನ್ನೆಲೆ, ಪರಂಪರೆ ಮತ್ತು ಸ್ವಾತಂತ್ರ್ಯಾನಂತರದ ಆಗುಹೋಗುಗಳ ಆಧಾರವಾಗಿ ಹೇಳಬಹುದು. ಸಧ್ಯದ ಪರಿಸ್ಥಿತಿಯಲ್ಲಂತೂ ಇದು ವಿರೋಧಾಭಾಸ.
ಹಿಂದುತ್ವ ಮತ್ತು ಹಿಂದೂ ಸಮಾಜ ಒಂದೇ ದೇವರು, ಒಂದು ಧರ್ಮಗ್ರಂಥ, ಒಂದು ಧರ್ಮಪೀಠದ ಮೇಲೆ ಅವಲಂಬಿಸಿದ್ದಲ್ಲ. ಹಿಂದುತ್ವದಲ್ಲಿ ವಿವಿಧ ವಿಚಾರ ವೇದಿಕೆಗಳು, ನಂಬಿಕೆ , ಆಚರಣೆಗಳು ಮತ್ತು ಧಾರ್ಮಿಕ ಪ್ರಥೆಗಳು ಒಂದೇ ಸಾಮಾಜಿಕ ಛಾವಣಿಯ ಕೆಳಗೆ ಒಟ್ಟಿಗೆ ಸೌಹಾರ್ದಯುತವಾಗಿ ಬಾಳುತ್ತವೆ.ಹಿಂದುತ್ವದ ಮೂಲ ತತ್ವ ಒಂದೇ ಗುರಿಗೆ ಹಲವು ದಾರಿಗಳ ಸಾಧ್ಯತೆಯನ್ನು ಒಪ್ಪಿಕೊಳ್ಳುತ್ತದೆ.ಸಂಸ್ಕೃತಿಗಳ ಸಮಾಗಮಕ್ಕೆ ಇಲ್ಲಿ ಮುಕ್ತ ಅವಕಾಶವಿದೆ. ನೂರಾರು ವರ್ಷಗಳ ಹಿಂದೆ ಭಾರತ ಪಾರ್ಸಿ, ಜ್ಯೂ ಮತ್ತು ಸೀರಿಯನ್ ಕ್ರಿಶ್ಚಿಯನ್ಸ ಸಮುದಾಯಗಳಿಗೆ ಆಶ್ರಯ ಕೊಟ್ಟು ನಿರ್ಬಂಧವಿಲ್ಲದ ಹಕ್ಕುಗಳನ್ನು ಕೊಟ್ಟಿತ್ತು. ಅಲ್ಲದೆ ಭಾರತದಲ್ಲಿ ಹಿಂದೂ ವೋಟುಗಳು ಜಾತಿ, ಭಾಷೆ, ಪ್ರದೇಶಗಳ ಮೇಲೆ ಹರಿದು ಹಂಚಿ ಹೋಗುತ್ತವೆ ಎಂಬುದು ಸರ್ವ ವಿದಿತ.
ಇನ್ನೊಂದು ದೃಷ್ಟಿಯಲ್ಲಿ ಒಂದು ವೇಳೆ ಹಿಂದೂ ಮುಸ್ಲಿಂ ಬಣಗಳಲ್ಲಿ ಜಗಳವಾಯಿತು ಎಂದಿಟ್ಟುಕೊಳ್ಳಿ . ಸಿಕ್ಕಿ ಹಾಕಿಕೊಂಡ ಹಿಂದುವಿನಿಂದ 200 ಹಿಂದೂಗಳಿಗೆ ಕರೆ ಹೋಯಿತೆಂದರೆ 20 ಹಿಂದೂಗಳು ಬರುತ್ತಾರೆ. ಅದೇ ಮುಸ್ಲಿಂ ಕರೆಗೆ ಕನಿಷ್ಠ 175 ಮುಸ್ಲಿಮ್ಸ್ ಓಗೊಡುತ್ತಾರೆ . ಹಾಗಾಗಿ ಬಹುಸಂಖ್ಯಾತರಿದ್ದಾಗ್ಯೂ ಹಿಂದೂಗಳ ಪ್ರಾಬಲ್ಯ, ದಬ್ಬಾಳಿಕೆಗಳ ಭೀತಿ ಭಾರತದಲ್ಲಿ ಇಲ್ಲ. ಹಿಂದೂಗಳಿಂದ ಹಿಂದೂ ಧರ್ಮಕ್ಕೆ ಮತಾಂತರದ ಉದಾಹರಣೆಗಳು ಅಲಭ್ಯ. ಪುನಃ ಪರಿವರ್ತನೆಯ ಸಾಧ್ಯತೆ ಇರಬಹುದು.
ಭಾರತವನ್ನು ಬಿಟ್ಟು ಹೊರದೇಶಗಳಲ್ಲಿ ಅಲ್ಪಸಂಖ್ಯಾತ ಸ್ಥಿತಿಯನ್ನು ಹೇಗೆ ನಿರ್ಧರಿಸುತ್ತಾರೆ ನೋಡೋಣ. ಬ್ರಿಟಿಷ್ ಮತ್ತು ಯುಸ್ಏ ಸಂವಿಧಾನಗಳಲ್ಲಿ ಅಲ್ಪಸಂಖ್ಯೆಯಲ್ಲಿರುವ ಜನಸಮುದಾಯದ ಬಗ್ಗೆ ಏನನ್ನೂ ನಿಗದಿಪಡಿಸಿಲ್ಲ. ಅಲ್ಲಿರುವ ಭೇದ ತ್ವಚೆಯ ಬಣ್ಣ ಮತ್ತು ಜನಾಂಗದ ಬುಡಕಟ್ಟುಗಳ ಮೇಲೆ ನಿರ್ಧರಿಸಲ್ಪಡುತ್ತದೆ. ಆದರೆ ಅಲ್ಪಸಂಖ್ಯಾತ ಬುಡಕಟ್ಟಿನ ಜನಕ್ಕೆ ನಮ್ಮ ಭಾರತದಲ್ಲಿರುವಂತೆ ಯಾವ ವಿಶೇಷ ಸೌಲಭ್ಯಗಳೂ ಇಲ್ಲ. ಬರೀ ರಕ್ಷಣೆ ಕೊಡುವ ದೃಷ್ಟಿಯಿಂದ ಮಾತ್ರ ಈ ವಿಷಯವನ್ನು ನೋಡಲಾಗುತ್ತೆ. ಅಲ್ಲಿ ಧರ್ಮದ ಅನುಗುಣವಾಗಿ ಈ ವರ್ಗೀಕರಣ ಇಲ್ಲವೆ ಇಲ್ಲ. ವಿಡಂಬನೆಯೆಂದರೆ ಭಾರತ ಒಂದು ಧರ್ಮಾತೀತ / ಜಾತ್ಯಾತೀತ ಸಂವಿಧಾನವನ್ನು ಹೊಂದಿದೆ. ಆ ಸಂವಿಧಾನಕ್ಕೆ ಅನುಗುಣವಾಗಿ ಭಾರತದ ಆಡಳಿತ ಧರ್ಮ, ಜಾತಿ, ಮತಕ್ಕೆ ಸಂಬಂಧಪಟ್ಟ ಯಾವ ವಿಷಯದಲ್ಲೂ ಯಾವುದೇ ತರಹದ ಪಕ್ಷಪಾತ ತೋರಿಸದೇ ಸಂಪೂರ್ಣ ತಟಸ್ಥ ಭಾವ ಹೊಂದಿರಬೇಕು. ಆದರೆ ಇಲ್ಲಿ ಅಲ್ಪಸಂಖ್ಯಾತ ಅರ್ಹತೆಯನ್ನ ಧರ್ಮದ ಮೇಲೆ ನಿರ್ಧರಿಸಲಾಗುತ್ತದೆ. ಜುಲೈ 1, 2015 ರ ರಿಸರ್ವ ಬ್ಯಾಂಕ್ ನ ಮೊದಲ ಆದ್ಯತೆಯ ವಲಯಗಳಿಗೆ ಸಾಲ ನೀಡುವ ವಿಷಯದ ಸುತ್ತೋಲೆಯಂತೆ “ಸಿಖ್ಖ್, ಮುಸ್ಲಿಂ,ಕ್ರಿಶ್ಚಿಯನ್ಸ್ ,ಜೊರೊಅಸ್ತ್ರಿಅನ್ ಸ್, ಬುಧ್ಧರು ಮತ್ತು ಜೈನರು ಅಲ್ಪಸಂಖ್ಯಾತ ಕೋಮಿಗೆ ಸೇರಿದವರು. ಸಾಲ ಮಂಜೂರು ಮತ್ತು ವಿತರಣೆ ಮಾಡುವಾಗ ಈ ಕೋಮುಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕು.” ಈ ಆದೇಶ ಭಾರತದಲ್ಲಿ ಕೇವಲ ಹಿಂದೂಗಳಲ್ಲದವರು ಮಾತ್ರ ಸಂತ್ರಸ್ತರು ಮತ್ತು ವಿಶೇಷ ಸವಲತ್ತುಗಳಿಗೆ ಪಾತ್ರರು ಎಂದು ಪೂರ್ವನಿರ್ಧಾರ ಮಾಡುತ್ತದೆ.ಸಿಖ್ಖ್ ಪಾರ್ಸಿ ಮತ್ತು ಜೈನ ಜನಾಂಗದವರು ಸಾಧಾರಣವಾಗಿ ಶ್ರೀಮಂತ ಕುಟುಂಬಗಳಲ್ಲದೆ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ಇದೇ ಗುಂಪಿನವರು ಆಗಿರುತ್ತಾರೆ.ಈ ರೀತಿಯ ತಪ್ಪು ನೀತಿಯಿಂದ ಮಾಡಿದ ಬಹುಸಂಖ್ಯಾತ ,ಅಲ್ಪಸಂಖ್ಯಾತ ವಿಭಜನೆ ಸಂಘರ್ಷದ, ಸಮಸ್ಯೆಗಳ ಮೂಲವಾಗಿದೆ. ಸರಕಾರ ಮತ್ತು ನ್ಯಾಯಾಧೀಕರಣ ಒಟ್ಟಿಗೆ ಕುಳಿತುಕೊಂಡು ಈ ಜಾತ್ಯಾತೀತತೆ ಮತ್ತು ಅಲ್ಪಸಂಖ್ಯಾತ ಅರ್ಹತೆಗಳ ಅಸ್ಪಷ್ಟ ವ್ಯಾಖ್ಯಾನಗಳನ್ನು ವಿಶದಪಡಿಸಬೇಕು. ಇದಕ್ಕೆ ಪರ್ಯಾಯವಾಗಿ ಎಲ್ಲರಿಗೂ ಸಮಾನ ಹಕ್ಕುಗಳು ದೊರೆತು ಆರ್ಥಿಕ ಅಸಮಾನತೆಯ ಆಧಾರದ ಮೇಲೆ ಬಡವರಿಗೆ ವಿಶೇಷ ಸೌಲಭ್ಯಗಳು ದೊರೆಯುವಂತಾಗಬೇಕು. ಇದರ ಮೊದಲ ಹೆಜ್ಜೆಯನ್ನು ಪ್ರಧಾನ ಮಂತ್ರಿ ಮೋದಿಯವರು 8 01 2019 ರಂದು ಇಟ್ಟಿದ್ದಾರೆ. ಅವರ ಕೆಬಿನೆಟ್ಟಿನಲ್ಲಿ ಸವರ್ಣೀಯರಲ್ಲಿನ ಬಡವರಿಗೆ 10 % ಮೀಸಲಾತಿ ಇರಬೇಕು ಎಂದು ನಿರ್ಣಯ ಪಾಸ್ ಆಗಿದೆ. ಲೋಕಸಭೆ ರಾಜ್ಯಸಭೆಗಳಲ್ಲಿ ಪಾಸ್ ಆಗಿ ಕಾನೂನುಬಧ್ಧವಾಗತ್ತಾ ನೋಡಬೇಕಾಗಿದೆ.
ಇಂಡಿಯನ್ ನೇವಿ ಕ್ಯಾಪ್ಟನ್ ಜೇ ಕೇ ಶರ್ಮಾ http://www.merinews.com ನಲ್ಲಿ ತಮ್ಮ 27 05 2015 ರ ಲೇಖನದಲ್ಲಿ ಧರ್ಮದ ಮೇಲೆ ಆಧಾರಿತ ಬಹುಸಂಖ್ಯಾತ ಅಲ್ಪಸಂಖ್ಯಾತ ವರ್ಗೀಕರಣವನ್ನು ಭಾರತ ಮತ್ತು ಪಾಕಿಸ್ತಾನಗಳು ಹೇಗೆ ಬೇರೆ ಬೇರೆಯಾಗಿ ಬೆಳೆಸಿದ್ದಾರೆ ಎಂದು ವಿವರಿಸಿದ್ದಾರೆ . ಸ್ವಾತಂತ್ರ್ಯ ಬಂದಾಗ ಭಾರತ ತನ್ನನ್ನು ಜಾತ್ಯಾತೀತ ರಾಷ್ಟ್ರ ಎಂದು ಘೋಷಿಸಿತು. ಆದರೆ ಪಾಕಿಸ್ತಾನ ತನ್ನನ್ನು ಒಂದು ಇಸ್ಲಾಮಿಕ್ ರಾಷ್ಟ್ರವೆಂದು ಘೋಷಿಸಿಕೊಂಡಿತು. ಜನಾಂಗೀಯ ಶುಧ್ಧೀಕರಣ ಮತ್ತು ಬಲವಂತದ ಮತಾಂತರಗಳು ತಾಂಡವವಾಡಿ ಪಾಕಿಸ್ತಾನದಲ್ಲಿ 1947 ರಲ್ಲಿ ಹಿಂದೂಗಳ ಜನಸಂಖ್ಯೆ 34 % ಇದ್ದದ್ದು 2014 ರಲ್ಲಿ 1 % ಆಗಿದೆ. ಆಗಿನ ಪೂರ್ವ ಪಾಕಿಸ್ತಾನವಾದ ಬಾಂಗ್ಲಾ ದೇಶದಲ್ಲಿ 1947 ರಲ್ಲಿ 15 % ಇದ್ದದ್ದು 1998 ರಲ್ಲಿ 1.6 % ಆಗಿದೆ. ಅದೇ ಭಾರತದಲ್ಲಿ 1951 ರಲ್ಲಿ ಮುಸ್ಲಿಂ ಸಂಖ್ಯೆ 9.8 % ಇದ್ದದ್ದು 2011 ರಲ್ಲಿ 14.2 % ಆಗಿದೆ. ಭಾರತದಲ್ಲಿ ಮುಸ್ಲಿಮರ ವೃಧ್ಧಿ ಆಗಿದೆ. ಅಲ್ಲದೆ ಜಗತ್ತಿನ ಒಟ್ಟು ಮುಸ್ಲಿಮ್ ಸಂಖ್ಯೆಯ ಭಾಗವಾಗಿ 2011 ರಲ್ಲಿ ಭಾರತದಲ್ಲಿ 10.97 % ಇದ್ದರೆ ಪಾಕಿಸ್ತಾನದಲ್ಲಿ 11 % ಇದೆ. ಇದರರ್ಥ ನಿಖರ ಸಂಖ್ಯೆಗಳಲ್ಲಿ ಭಾರತ ಪಾಕಿಸ್ತಾನಗಳಲ್ಲಿ ಮುಸ್ಲಿಮ್ಸ್ ಜನಸಂಖ್ಯೆ ಸಮಾನವಾಗಿದೆ.
ಇದು ಸನಾತನ ಧರ್ಮದವರ ಪರಧರ್ಮ ಸಹಿಷ್ಣುತೆಯ ಪರಮ ನಿದರ್ಶನವಾಗಿದೆಯಲ್ಲದೆ ಹಿಂದುತ್ವ ಅನ್ನುವದು ಒಂದು ಜೀವನ ರೀತಿ, ಧರ್ಮವಲ್ಲ ಅಂತ ಎತ್ತಿ ಹೇಳಿದೆಯೆನ್ನಬಹುದು.
ಭಾರತದ ಎಡಪಂಥೀಯರು, ಬುಧ್ಧಿಜೀವಿಗಳು ಮತ್ತು ಮಾಧ್ಯಮಗಳು ಹಿಂದೂ ಶಬ್ದವನ್ನು ಹಂಗಿಸಲು ಸದಾ ಸಿಧ್ಧವಾಗಿರ್ತಾರೆ. ಮುಸ್ಲಿಮರ ಬಗೆಗಿನ ಯಾವುದೇ ಘಟನೆ ಒಂದು ಮಹತ್ವದ ಸುದ್ದಿಯಾಗುತ್ತದೆ , ಪ್ರೈಮ್ ಟೈಮ್ ನಲ್ಲಿ ಚರ್ಚೆ ಮಾಡುವ ವಿಷಯವಾಗುತ್ತದೆ. ರಾಷ್ಟ್ರೀಯ ಪಕ್ಷ ಹುಸಿ ಜಾತ್ಯಾತೀತ ನೀತಿ ಪಾಲಿಸುತ್ತ ಸಾರಾ ಸಗಟು ಮತ ಬ್ಯಾಂಕ್ ಆದ ಮುಸ್ಲಿಮರ ಒಲೈಕೆಯಲ್ಲೇ ತೊಡಗಿದೆ ಅಂತ ರಾಷ್ಟ್ರವಾದಿ ಪಕ್ಷ ಹೇಳಿದರೆ ಅದಕ್ಕೆ ಪ್ರತಿಯಾಗಿ ರಾಷ್ಟ್ರೀಯ ಪಕ್ಷ ಮತ್ತು ಅದರ ಮೈತ್ರಿಕೂಟ ಈ ರಾಷ್ಟ್ರವಾದಿ ಪಕ್ಷವನ್ನು ಹಿಂದು ಪಕ್ಷ ಅಂತ ಜರಿಯುತ್ತವೆ. 29 ಜನೆವರಿ 2006 ರಂದು ಸರಕಾರ ಮುಸ್ಲಿಮ್, ಕ್ರಿಶ್ಚಿಯನ್ಸ್ , ಬುಧ್ಧಿಸ್ಟ್ಸ್, ಸಿಖ್ಖ್ ,ಪಾರ್ಸಿ ಮತ್ತು ಜೈನರನ್ನು ಅಲ್ಪಸಂಖ್ಯಾತರು ಎಂದು ಘೋಷಿಸಿತು . ಈ ಸಮುದಾಯಗಳಲ್ಲಿ ಬುಧ್ಧಿಸ್ಟ್ಸ್, ಸಿಖ್ಖ್ ,ಪಾರ್ಸಿ ಮತ್ತು ಜೈನರು ಯಾವತ್ತಿಗೂ ಅಲ್ಪಸಂಖ್ಯಾತ ದರ್ಜೆಗೆ ಬೇಡಿಕೆ ಇಟ್ಟವರಲ್ಲ. ಮುಸ್ಲಿಮ್ಸ್ ಮತ್ತು ಕ್ರಿಶ್ಚಿಯನ್ಸ್ ಸಮುದಾಯಗಳ ಪಕ್ಷಪಾತಿ ಅನ್ನಿಸಿಕೊಳಬಾರದೆಂದು ಸರಕಾರ ಇತರರನ್ನು ಸೇರಿಸಿರಬಹುದು.
ಜಗತ್ತಿನಲ್ಲೆಲ್ಲ ಅಲ್ಪಸಂಖ್ಯಾತರನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಲಾಗುತ್ತದೆ.
ಅ) ಒಂದು ದೇಶದ ಬಹು ದೊಡ್ಡ ಗುಂಪಿನ ಜನರಿಂದ ಈ ಕೆಳಗಿನ ದೃಷ್ಟಿಯಿಂದ ಭಿನ್ನವಾಗಿರುವ ಒಂದು ಜನರ ಸಣ್ಣ ಗುಂಪು : ಜನಾಂಗ, ಧರ್ಮ, ಪ್ರದೇಶ,ರಾಜಕೀಯ ಸದಸ್ಯತ್ವ, ರಾಷ್ಟ್ರೀಯತೆ, ಬಣ್ಣ, ಲಿಂಗ, ಆರ್ಥಿಕತೆ, ವರಮಾನ,ಸಾಮಾಜಿಕತೆ, ವಲಸೆಗಾರರು, ನಿರಾಶ್ರಿತರು.
ಬ) ಒಂದು ಸಮುದಾಯ/ ಸಮಾಜದಲ್ಲಿ ಇತರರಿಗೆ ಹೋಲಿಸಲಾಗಿ ಪ್ರಾತಿನಿಧ್ಯ , ಅಧಿಕಾರ ಇಲ್ಲದವರ ಗುಂಪು.
ಕ) ಬಹುಸಂಖ್ಯಾತ ಗುಂಪಿನವರಿಂದ ದಬ್ಬಾಳಿಕೆ / ಶೋಷಣೆಗೆ ಒಳಗಾಗುವ ಸಾಧ್ಯತೆಯುಳ್ಳ ಸಣ್ಣ ಗುಂಪು.
ಸಮಕಾಲೀನ ಭಾರತದಲ್ಲಿ ರಾಷ್ಟ್ರೀಯ ಪಕ್ಷದ ಒಲವಿನ ಪಕ್ಷಪಾತ ಧೋರಣೆಯಿಂದ ಕಳೆದ ಆರು ದಶಕಗಳಲ್ಲಿ ವಿಶೇಷ ಸವಲತ್ತು ಪಡೆದ ಮುಸ್ಲಿಮ್ಸ್ ಮತ್ತು ಕ್ರಿಶ್ಚಿಯನ್ಸ್ ಈ ಮೇಲಿನ ಯಾವುದೇ ವ್ಯಾಖ್ಯಾನದಿಂದಲೂ ಅಲ್ಪಸಂಖ್ಯಾತರು ಅಂತ ವಿಂಗಡಿಸಲು ಅರ್ಹರಾಗುವದಿಲ್ಲ.
ಸಂಖ್ಯೆಯ ದೃಷ್ಟಿಯಿಂದ ಭಾರತದ ಜನಸಂಖ್ಯೆಯ ಒಂದು ಪ್ರತಿಶತ ಇರುವ ಪಾರ್ಸಿಗಳು ಅಲ್ಪಸಂಖ್ಯಾತ ದರ್ಜೆಗೆ ಅರ್ಹತೆ ಪಡೆದಿದ್ದರೂ ತಮ್ಮ ಕಠಿಣ ಪರಿಶ್ರಮದಿಂದ ಯಾವ ಸವಲತ್ತುಗಳನ್ನೂ ಉಪಯೋಗಿಸದೇ ಒಟ್ಟು ರಾಷ್ಟ್ರೀಯ ಉತ್ಪಾದಕತೆಯ (GDP) ಬಹು ಭಾಗದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ಒಂದು ವೇಳೆ ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿ ಅಧಿಕಾರಯುತವಾಗಿದ್ದರೆ ಅವರದೆಂದು ಹೇಳಲ್ಪಡುವ ರಾಷ್ಟ್ರವಾದೀ ಪಕ್ಷ ತುಂಬಾ ಮೊದಲಿನಿಂದಲೇ ಮತ್ತು ದೀರ್ಘಾವಧಿಯ ವರೆಗೆ ಆಳಲು ಯಾಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. ವಾಸ್ತವದಲ್ಲಿ ಹಿಂದೂಗಳಿಗೆ ವಿಶೇಷ ಬೇಡಿಕೆಯನ್ನಿಟ್ಟು ಪಡೆಯುವ ಶಕ್ತಿ ಇಲ್ಲವೇ ಇಲ್ಲ. ಹಿಂದೂಗಳು ಅವರಲ್ಲಿರುವ ಜಾತಿ, ಒಳಜಾತಿ, ಪಂಗಡ, ಪಂಥ ,ಭಾಷೆ, ಪ್ರದೇಶಗಳ ವಿಭಜನೆಗಳ ಮೂಲಕ ಶೋಷಿತಗೊಂಡಿದ್ದಾರೆ. ಹಿಂದೂಗಳು ಇಲ್ಲಿಯ ವರೆಗೆ ಸಾಮೂಹಿಕವಾಗಿ ಒಂದೇ ಪಕ್ಷಕ್ಕೆ ಮತ ನೀಡಿದ್ದೇ ಇಲ್ಲ. ಬ್ರಿಟನ್ನಿನಲ್ಲಿ ಇರುವ ಹಿಂದೂ ಅಲ್ಪಸಂಖ್ಯಾತರು ಭಾರತದ ಹಿಂದೂ ಬಹುಸಂಖ್ಯಾತರಿಗಿಂತ ಹೆಚ್ಚಿನ ಪ್ರಭಾವ / ಅಧಿಕಾರ ಹೊಂದಿದ್ದರೆ ಅಂತ ಹೇಳಬಹುದು. ಅಲ್ಪಸಂಖ್ಯಾತ / ಬಹುಸಂಖ್ಯಾತ ವಿಂಗಡಣೆಯನ್ನು ಬರಿಯೇ ಜನಸಂಖ್ಯೆಯಿಂದ ವ್ಯಾಖ್ಯಾನಿಸಲು ಆಗುವದಿಲ್ಲ.
ರಾಷ್ಟ್ರೀಯ ಪಕ್ಷ ತಾನೊಂದೇ ಹೋರಾಟ ಮಾಡಿ ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟಿದ್ದು ಎಂದು ಸಾಧಿಸುತ್ತ ಎಷ್ಟೋ ದಶಕಗಳ ವರೆಗೆ ಭಾರತವನ್ನು ಆಳಿತು. ವರ್ಷಗಳು ಕಳೆದ ಹಾಗೆ ಆ ಪಕ್ಷದ ಈ ಮೇಲ್ಮೆ ಕ್ಷೀಣಿಸುತ್ತ ಬಂದಿತು. ಆ ಸಂದರ್ಭದಲ್ಲಿ ಅಧಿಕಾರದ ಹಿಡಿತವನ್ನು ಭದ್ರವಾಗಿ ಮುಂದುವರಿಸುವದಕ್ಕೆ ಬಹುಮುಖ ಸಂಸ್ಕೃತಿಯ ಭಾರತೀಯ ಸಮಾಜವನ್ನು ಧರ್ಮ , ಜಾತಿ, ಭಾಷೆ ಮತ್ತು ಪ್ರದೇಶಗಳ ಆಧಾರದಲ್ಲಿ ಒಡೆದು ಆಳುವ ನೀತಿ ಕೈಗೆತ್ತಿಕೊಂಡಿತು. ಬಹುಸಂಖ್ಯಾತರ ಮತಗಳನ್ನು ಒಡೆದು ತನ್ನ ಮುಖವಾಡಗಳಿಗೆ ಸ್ವಲ್ಪ ಮತ್ತು ಆಯ್ಕೆಯಾಗಿ ಬರುವ ಸಾಧ್ಯತೆ ಇಲ್ಲದ ನಾಲ್ಕು, ಐದು , ಆರು ಕ್ರಮಾಂಕದ ಇತರ ಪಕ್ಷಗಳಿಗೆ ಹರಿದು ಹಂಚಿ ಹೋಗುವಂತೆ ಮಾಡಿದ್ದಲ್ಲದೆ ಅಲ್ಪಸಂಖ್ಯಾತರ ಮತಗಳು ಮಾತ್ರ ತನಗೇ 100 % ಬರುವ ಹಾಗೆ ಒಳೊಪ್ಪಂದದ ಮೂಲಕ ಖಾತ್ರಿ ಮಾಡಿಕೊಂಡು ಸುಮಾರು ಅರ್ಧದಶಕಗಳ ಚುನಾವಣೆಗಳನ್ನು ಗೆಲ್ಲುತ್ತ ಹೋಯಿತು. ಈ ಅತಿ ಜಾಣತನದ ಅಂಕಗಣಿತ ಬಹುಸಂಖ್ಯಾತರಾದ ಹಿಂದೂಗಳನ್ನು ದೇಶದಲ್ಲಿ ಅಬಲರನ್ನಾಗಿ ಮಾಡುವದರಲ್ಲಿ ಯಶಸ್ವಿಯಾಯಿತು.
ಈ ಎಲ್ಲ ವಿವಾದಗಳ ಹೊರತಾಗಿಯೂ ಸ್ವಾತಂತ್ರ್ಯದ ನಂತರದ ಭಾರತ ಒಂದು ಜಾತ್ಯಾತೀತ ಮತ್ತು ಸಹಿಷ್ಣು ದೇಶವಾಗಿ ಮೂಡಿ ಬಂದಿದೆ. ನೆರೆಯ ವೈರಿ ಪಾಕಿಸ್ತಾನ ಮತ್ತು ಎಡಪಂಥೀಯ ಆಂತರಿಕ ಶತ್ರುಗಳು ಈ ಹಿಂದೂ ಮುಸ್ಲಿಂ ಮಧ್ಧೆ ವಿರೋಧದ ಪರಂಪರೆಯನ್ನ ಯತ್ನಬಲದಿಂದ ಜಾಗೃತವಾಗಿ ಇಟ್ಟಿದ್ದಾರೆ. ಕೆಲವು ಸಾರೆ ಹಿಂದೂ ಸಂಖ್ಯಾಬಲದ ವಸತಿ ಬಡಾವಣೆಗಳಲ್ಲಿ ಮುಸ್ಲಿಮ್ಸ್ ಗೆ ವಾಸ ಮಾಡಲು ವಿರೋಧ ಕಂಡು ಬಂದದ್ದೂ ಇದೆ. ಸಮಾಜದಲ್ಲಿ ಹಿಂದೂ ಮುಸ್ಲಿಂ ಗಳ ಮಧ್ಯೆ ಒಂದು ಪರಕೀಯ ಭಾವದ ತೆಳು ಪರದೆ ಇದ್ದೇ ಇರುತ್ತದೆ. ಮುಸ್ಲಿಮ್ಸ್ ಗೆ ಅವರ ಭಿನ್ನ ಪರಂಪರೆಯ ನೆನಪನ್ನು ಯಾವುದೋ ಸಂಜ್ಞೆಯ ಮೂಲಕ ಅವರ ಜೀವನದ ವಿವಿಧ ಹಂತಗಳಲ್ಲಿ ಮಾಡಿಕೊಡಲಾಗುತ್ತದೆ. ಇದಕ್ಕೆ ಮನುಷ್ಯ ಸ್ವಭಾವದ ಸ್ವಾಭಾವಿಕತೆಯ ಜೊತೆಗೆ ಜಾತ್ಯಾತೀತ ರಾಷ್ಟ್ರ ಎಂದು ಹೇಳಿಕೊಂಡು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಆಳುವ ಪಕ್ಷದ ಕುಮ್ಮಕ್ಕು ಜವಾಬ್ದಾರವಾಗುತ್ತದೆ. ಇಂಥ ವಾತಾವರಣದಲ್ಲೂ ಭಾರತದ ಮುಸ್ಲಿಮ್ಸ್ ತುಂಬಾ ಕಡಿಮೆ ಉದಾಹರಣೆಗಳಲ್ಲಿ ತಮ್ಮ ಉದ್ಯೋಗದ ಬೆಳವಣಿಗೆಯಲ್ಲಿ ಪಕ್ಷಪಾತ ಮತ್ತು ವಿರೋಧ ಅನುಭವಿಸಿರಬಹುದು. ಮುಸ್ಲಿಮ್ಸ್ ಗೆ ಶಿಕ್ಷಣದಲ್ಲಿ ಹಲವಾರು ಸರಕಾರೀ ಸೌಲಭ್ಯಗಳು ದೊರಕುತ್ತವೆ. ಹಿಂದೂಗಳ ಬಗ್ಗೆ ಅಪಪ್ರಚಾರ ಏನೇ ಇರಲಿ, ದೇಶದಲ್ಲಿ ಮುಸ್ಲಿಮ್ಸ್ ಗೆ ಸಮಾನ ಅವಕಾಶಗಳು ಮತ್ತು ಪ್ರಗತಿಗಳು ಲಭ್ಯವಾಗಿವೆ. ಅದೇ ರಾಜಕಾರಣಿಗಳು ಈ ಎರಡೂ ಸಮುದಾಯಗಳನ್ನು ಅವರಷ್ಟಕ್ಕೆ ಇರಲು ಬಿಟ್ಟಿದ್ದರೆ ಒಳ್ಳೇ ಸೌಹಾರ್ದತೆ ಬೆಳೆಯುವ ಸಾಧ್ಯತೆ ಖಂಡಿತ ಇರುತ್ತಿತ್ತು.
ಶ್ರೀ ಮಿನ್ಹಾಜ್ ಮರ್ಚಂಟ್ ಅವರು ಹೇಳುವಂತೆ ಇಷ್ಟೆಲ್ಲಾ ಬೆಂಕಿ ಹಾಕುವ ರಾಜಕೀಯದ ಮಧ್ಯೆಯೂ ಭಾರತ ಜಾತ್ಯಾತೀತವಾಗಿ ಉಳಿದದ್ದು ಬರೀ ಸಂವಿಧಾನಬಧ್ಧವಾಗಿರಬೇಕು ಎನ್ನುವ ಬಲವಂತದಿಂದ ಅಲ್ಲ. ಭಾರತದ ಜನತೆ ಸ್ವಭಾವಸಹಜವಾಗಿ ಪರಧರ್ಮ /ಪರಜಾತಿ ಸಹಿಷ್ಣುಗಳು. ಹಿಂದೂ ಸಂಸ್ಥೆಗಳಲ್ಲೇ ಇರುವ ಕೆಲವು ಮತಾಂಧ ಧ್ವನಿಗಳು ಆಗಾಗ ಕೆಲವು ಪ್ರಚೋದನಕಾರಿ ಹೇಳಿಕೆಗಳನ್ನು ಕೊಟ್ಟರೂ ಆಯಾ ಸಮಯದಲ್ಲಿ ಅಧಿಕಾರದಲ್ಲಿದ್ದ ಸರಕಾರಗಳು, ಯಾವುದೇ ಪಕ್ಷದ್ದಾಗಿದ್ದರೂ, ಆ ಅಪಸ್ವರಗಳನ್ನು ಹತ್ತಿಕ್ಕಿವೆ. ಅಲ್ಲದೆ ಸಮಾಜ ಸೇವೆಯ ಸೋಗಿನ ಕೆಲವು NGO ಗಳು, ವೆಬ್ಸೈಟ್ ಗಳು , ಕ್ರಿಶ್ಚಿಯನ್ ಪಾದ್ರಿಗಳು , ಇಸ್ಲಾಮಿನ ಮುಲ್ಲಾಗಳು ಇಲ್ಲದ ಮತೀಯ ಬಿಕ್ಕಟ್ಟುಗಳನ್ನು ಹುಟ್ಟು ಹಾಕುವದಕ್ಕೆ , ಅಲ್ಪಸಂಖ್ಯಾತರ ಮನಸ್ಸುಗಳನ್ನು ಕೆಡಿಸುವದಕ್ಕೆ ಸದಾ ನಿರತರಾಗಿರುತ್ತಾರೆ. ವಿದೇಶೀ ಸರಕಾರಗಳು ತಮ್ಮ ವಿಶ್ವ ವ್ಯಾಪಾರ ಸಂಸ್ಥೆ (WTO) ಮತ್ತು ಪರಿಸರ / ಹವಾಮಾನ ಬದಲಾವಣೆಯ ಶಿಷ್ಟಾಚಾರ (PROTOCOL) ಬಗ್ಗೆ ತಾವು ಹಾಕಿದ ಗೆರೆಗಳನ್ನು ಭಾರತ ಅನುಸರಿಸಬೇಕೆಂದು ತಾವು ಧನ ಸಹಾಯ ಮಾಡುತ್ತಿರುವ ಈ NGO ಗಳ ಮೂಲಕ ಭಾರತ ಸರಕಾರದ ಮೇಲೆ ಇಲ್ಲದ ಕೋಮುವಾದದ ಕೃತಕ ಒತ್ತಡ ತರಲು ಹವಣಿಸುತ್ತಿರುತ್ತವೆ. ಆದರೆ ಇದರಿಂದ ಅಪಾರ ಹಾನಿಯಗುವದು ಅಲ್ಪಸಂಖ್ಯಾತರಿಗೆ ಅಂತ ಹೇಳಬಹುದು. ಮಾಧ್ಯಮದ ಅತಿ ಪ್ರಚಾರದಿಂದ ದೇಶದ ಜಾತ್ಯಾತೀತತೆಗೆ ಹಾನಿಯಾಗಿ ಅಲ್ಪಸಂಖ್ಯಾತರರ ವಿರುಧ್ಧದ ವಾತಾವರಣ ನಿರ್ಮಾಣವಾಗಿ ಧರ್ಮಗಳ ಮಧ್ಯದ ಅಂತರ ಇನ್ನೂ ಹೆಚ್ಚಾಗುತ್ತದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಕಾಣಿಸರು. ಮಧ್ಯ ಪೂರ್ವ ದೇಶಗಳಲ್ಲಿ ಅಲ್ಪಸಂಖ್ಯಾತರಿಗೆ ಮೂಲಭೂತ ನಾಗರಿಕ ಹಕ್ಕುಗಳೇ ಇಲ್ಲ. ಯುರೋಪಿನಲ್ಲಿ ಅಲ್ಪಸಂಖ್ಯಾತರು ವಿಶೇಷ ಕಾಯ್ದೆಗಳ ಅಡಿ ಬದುಕಬೇಕು. ಇದಕ್ಕೆ ವ್ಯತಿರಿಕ್ತವಾಗಿ ಭಾರತ ಶತಕಗಳಿಂದ ಎಲ್ಲ ಧರ್ಮಗಳಿಗೆ ಜಾತ್ಯಾತೀತ ಧಾಮವಾಗಿದೆ. ಪಾಶ್ಚಾತ್ಯರು ಭಾರತದ ಜಾತ್ಯಾತೀತ ಜಲಗಳಲ್ಲಿ ಮೀನು ಹಿಡಿಯೋಕ್ಕೆ ಯತ್ನಿಸುವ ಮೊದಲು ತಮ್ಮ ದೇಶಗಳ ಮೇಲೆ ಇರುವ ಜನಾಂಗೀಯ ಮತ್ತು ಧಾರ್ಮಿಕ ಪಕ್ಷಪಾತದ ಅಪವಾದಗಳನ್ನು ಗಮನಿಸಬೇಕು.
ಭಾರತದಲ್ಲಿ ಮುಸ್ಲಿಮ್ಸ್ ಗೆ ತಮ್ಮ ವೈಯಕ್ತಿಕ ಕಾನೂನುಗಳನ್ನು ಪಾಲಿಸಲು ಅವಕಾಶ ಮಾಡಿ ಕೊಡಲಾಗಿದೆ. ಮುಸ್ಲಿಮ್ಸ್ ಬಹುಸಂಖ್ಯಾತರ ಮಧ್ಯ ಪೂರ್ವ ದೇಶ್ ಮತ್ತು ಪೂರ್ವ ಏಷಿಯಾ ದೇಶಗಳಲ್ಲಿ ನಿಷೇಧಿಸಲಾದ ತ್ರಿವಳಿ ತಲಾಕ್ ಭಾರತದ ಮುಸ್ಲಿಮ್ಸ್ ಗೆ ಪಾಲಿಸುವ ಅಧಿಕಾರ ಇನ್ನೂ ಇದೆ. ಈ ಸ್ತ್ರೀ ವಿರೋಧಿ ಮುಸ್ಲಿಂ ವಿಶಿಷ್ಟ ಕಾನೂನನ್ನು ಕಿತ್ತು ಹಾಕಲು ಪ್ರಧಾನಮಂತ್ರಿ ಮೋದಿ ಶತಪ್ರಯತ್ನ ನಡೆಸಿದ್ದಾರೆ. ಮುಸ್ಲಿಂ ಪುರುಷರ ಮತ್ತು ಎಡ ಪಕ್ಷಗಳ ವಿರೋಧದಿಂದ ಅದಿನ್ನೂ ರಾಜ್ಯಸಭೆಯಲ್ಲಿ ತೂಗಾಡುತ್ತಿದೆ. ಪವಿತ್ರ ರಮಜಾನ್ ತಿಂಗಳಲ್ಲಿ ಮುಸ್ಲಿಮ್ಸ್ ಮಸೀದೆಗಳಲ್ಲಿ ಮತ್ತು ಹಲವು ಬೀದಿಗಳಲ್ಲಿ ಕೂಡ ನಿರಾತಂಕವಾಗಿ ನಮಾಜ್ ಮಾಡುತ್ತಾರೆ. ಹಿಂದೂಗಳು ಈ ಧಾರ್ಮಿಕ ಕ್ರಿಯೆಯನ್ನು ಗೌರವಿಸುತ್ತ ತಮ್ಮ ಪಾಡಿಗೆ ತಾವು ಇರುತ್ತಾರೆ. ಇದಕ್ಕೆ ಅಪವಾದಗಳು ಇಲ್ಲವೆಂದಲ್ಲ . ಕೆಲವು ಸಲ ಉತ್ತರ ಪ್ರದೇಶ , ಜಮ್ಮೂ ಕಾಶ್ಮೀರ , ಪಶ್ಚಿಮ ಬಂಗಾಳ ಮತ್ತಿತರ ಕಡೆಗಳಲ್ಲಿ ಮತೀಯ ಕುದಿಯು ಕಾಣಿಸಿಕೊಂಡಿದ್ದೂ ಉಂಟು. ಇಂಥ ಘಟನೆಗಳ ಹಿಂದೆ ಮತೀಯ ಭಾವನೆಗಳನ್ನು ಜಾಗೃತಗೊಳಿಸಿ ಧರ್ಮ ಸಮುದಾಯಗಳನ್ನು ಧ್ರುವೀಕರಿಸುವ ಫಿತೂರಿ ರಾಜಕಾರಣಿಗಳದ್ದೇ ಆಗಿರುತ್ತದೆ. ಅದಾಗ್ಯೂ ಮುಸ್ಲಿಂ ದೇಶಗಳಲ್ಲಿ ಮುಸ್ಲಿಮ್ಸ್ ಜನಗಳೇ ಕಲ್ಪಿಸಿರದ ಸವಲತ್ತುಗಳು ಭಾರತದ ಮುಸ್ಲಿಮ್ಸ್ ಜನರಿಗೆ ಲಭ್ಯವಾಗಿವೆ. ಸರಕಾರೀ ಅನುದಾನ ಇರುವ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿವೆ. ಮುಸ್ಲಿಂ ಸಮುದಾಯ ಭಾರತದ ಕೆಲವು ರಾಜ್ಯಗಳಲ್ಲಿ ಚುನಾವಣಾ ರಾಜಕೀಯದ ಕಾರ್ಯ ಕಲಾಪ ನಿರ್ಧರಿಸುತ್ತಾರೆ.ಭಾರತದಲ್ಲಿ ಮುಸ್ಲಿಮ್ ಜನಾಂಗಕ್ಕೆ ಲಭ್ಯವಾದ ಇಷ್ಟೆಲ್ಲಾ ಸಂರಕ್ಷಣೆ , ಸುರಕ್ಷಣೆಯ ಅಂತಿಮ ಪರಿಣಾಮ ಏನು? ಈ ಜನಾಂಗ ಭಾರತದ ಪರಿಶಿಷ್ಟ ಜಾತಿಗೆ ಹೋಲಿಸಿದರೂ ಅಂತ್ಯಂತ ಬಡ , ತೀರಾ ಹಿಂದುಳಿದ ಜನಾಂಗ. ಹೀಗೆ ಅಂತ ಹೇಳಿದ್ದು ಬೇರೆ ಯಾರೂ ಅಲ್ಲ, ಸರಕಾರ ನೇಮಿಸಿದ ಸಾಚಾರ ಸಮಿತಿ ಮತ್ತು ಮಿಶ್ರಾ ಆಯೋಗದ ವರದಿಗಳು. ಮುಸ್ಲಿಮ್ ಓಲೈಕೆಯ ದುರಂತವೇನೆಂದರೆ ಅದು ಬರಿಯೇ ವೋಟಿಗಾಗಿ, ಅದರಾಚೆ ಇಲ್ಲವೆ ಇಲ್ಲ. ಮುಸ್ಲಿಮ್ಸ್ , ದಲಿತರು ಮತ್ತು OBC ಗಳನ್ನು ಹಲವಾರು ದಶಕಗಳಿಂದ ಅವರು ಇದ್ದ ಸ್ಥಿತಿಯಲ್ಲೇ ರಾಷ್ಟ್ರೀಯ ಪಕ್ಷ ಇಟ್ಟಿರುವದು ಅವರುಗಳೆಲ್ಲ ತನ್ನ ಮೇಲೆಯೇ ಅವಲಂಬಿಸಿರಲಿ, ತನಗೇ ವೋಟು ಮಾಡುತ್ತಿರಲಿ ಎಂಬ ಉದ್ದೇಶದಿಂದ. ಭಾರತದಲ್ಲಿ ಸರಕಾರಗಳು ಬಹು ಸಂಖ್ಯಾತ ಹಿಂದೂಗಳ ವರ್ಚಸ್ಸಿನಲ್ಲಿ ಇರುವವಾಗಿದ್ದರೆ ಶತಮಾನಗಳ ಹಿಂದಿನ ಮುಸ್ಲಿಮ್ ವೈಯಕ್ತಿಕ ಕಾನೂನು ಮುಸ್ಲಿಮ್ ವಿರೋಧವಿದ್ದಾಗ್ಯೂ ಬದಲಾಗುತ್ತಿತ್ತು. ಇದಕ್ಕಿಂತ ಬೇರೆ ಉದಾಹರಣೆ ಬೇಕೇ ಅಲ್ಪಸಂಖ್ಯಾತರ ಮೇಲೆ ಭಾರತದಲ್ಲಿ ದಬ್ಬಾಳಿಕೆ ಇಲ್ಲ ಅನ್ನುವ ವಾಸ್ತವಕ್ಕೆ ?
ಟೀಕೆ 3 ; ಅಲ್ಪಸಂಖ್ಯಾತ ಕ್ರಿಶ್ಚಿಯನ್ಸ್ ಮೇಲೆ ಬಹುಸಂಖ್ಯಾತ ಹಿಂದೂಗಳ ಆಪಾದಿತ ದಬ್ಬಾಳಿಕೆ
ನಾನು ಈ ವಿಷಯದಲ್ಲಿ ವಿದೇಶೀ ಮಹಿಳೆ ಭಾರತವಾಸೀ ಶ್ರೀಮತಿ ಮಾರಿಯಾ ವಿರ್ಥ್ ಅವರು ತಮ್ಮ ಮಾರ್ಚ್ 30, 2015 ರ ಬ್ಲಾಗ್ ನಲ್ಲಿ ಬರೆದದ್ದನ್ನ ಉಧ್ಧರಿಸ ಬಯಸುತ್ತೇನೆ . ಇದಕ್ಕೆ ಅವರ ಅನುಮತಿ ಪಡೆದುಕೊಂಡಿದ್ದೇನೆ.
ಉದ್ಹೃತ : ಭಾರತ ದೇಶಕ್ಕೆ ನಿರಾಶ್ರಿತರಾದ ಪರ ಧರ್ಮೀಯರಿಗೆ ಸುರಕ್ಷಿತ ಆಶ್ರಯ ಕೊಟ್ಟಿರುವ ಪರಂಪರೆ ಇದೆ. ಜ್ಯೂ ಜನ, ಸೀರಿಯಾದ ಕ್ರಿಶ್ಚಿಯನ್ಸ್ , ಪಾರ್ಸಿ ಜನಾಂಗ, ಟಿಬೆಟ್ ನ ಬುಧ್ಧಿಸ್ಟ್ ಜನ ಇವರೆಲ್ಲ ಆ ಆಶ್ರಯದ ಫಲಾನುಭವಿಗಳು.
ಹಾಗಿದ್ದಲ್ಲಿ ಈ 2015 ರಲ್ಲಿ ಏಕೆ ಭಾರತದಲ್ಲಿ ಕ್ರಿಶ್ಚಿಯನ್ಸ್ ಮೇಲೆ ದಾಳಿ ಆಗುತ್ತಿದೆ ಎಂಬ ಹುಯಿಲೆದ್ದಿದೆ ? ಏನು ಇದ್ದಕ್ಕಿದ್ದ ಹಾಗೆ ಹಿಂದೂಗಳು ಅಸಹಿಷ್ಣುಗಳಾದರೆ? ಇಲ್ಲ. ಈ ‘ಚರ್ಚುಗಳ ಮೇಲೆ ದಾಳಿ’ ಅನ್ನುವ ಟೀವೀ ಸುದ್ದಿ ವಾಹಿನಿಗಳ ಹುಯಿಲುಗಳನ್ನು ವಿಚಾರಣೆ ಮಾಡಿ ನೋಡಲಾಗಿ ತಿಳಿದು ಬಂದದ್ದು ಇವು ಹಿಂದೂಗಳ ಯಾವ ಪಾತ್ರವೂ ಇಲ್ಲದ ಕೆಲವು ಸಣ್ಣ ಪುಟ್ಟ ಘಟನೆಗಳಾಗಿದ್ದವು ಎಂಬುದು. ಇಂಥವು ವಿದೇಶಗಳಲ್ಲಿ ನಡೆದಿದ್ದರೆ ಸ್ಥಾನೀಯ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವಂಥ ಸುದ್ದಿಗಳು. ಆದರೆ ಭಾರತದ ಟೀವೀ ಸುದ್ದಿ ವಾಹಿನಿಗಳಲ್ಲಿ ಹಲವಾರು ದಿನಗಳ ವರೆಗೆ ಬಿತ್ತರಗೊಂಡವು. ಕ್ರಿಶ್ಚಿಯನ್ನರ ವಕ್ತಾರರಿಗೆ ಈ ಘಟನೆಗಳನ್ನು ಹಿಂದೂಗಳ ಮೇಲೆ ಅಪವಾದ ಹೊರಿಸೋಕ್ಕೆ ಧಂಡಿಯಾಗಿ ಅವಕಾಶಗಳು ಸಿಕ್ಕವು. ಇದರಲ್ಲೇನಾದರೂ ಪಟ್ಟಭದ್ರ ಹಿತಾಸಕ್ತಿಗಳ ಪಿತೂರಿ ಇತ್ತಾ?
ಒಂದು ಚರ್ಚಿನ ಹೊರಭಾಗದ ಗಾಜು ಒಡೆದದ್ದು, ಇನ್ನೊಂದು ಚರ್ಚ್ ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬಿದ್ದ ಬೆಂಕಿ, ಒಂದು ಕಾನ್ವೆಂಟ್ ಶಾಲೆಯಲ್ಲಿ 8000 ರೂಪಾಯಿ ಕಳುವಾದ ಸಮಾಚಾರ, ಯಾವುದೋ ಹಿಂದೂ ಮುಸ್ಲಿಮ್ಸ್ ಸೇರಿದ ಗುಂಪೊಂದು ಕಲ್ಲೆಸೆದಿದ್ದು ಟೀವಿ ಮೇಲೆ ಪುನರಾವರ್ತಿತ ಬಿಸಿ ಬಿಸಿ ಸುದ್ದಿ ಆಗಬೇಕಿತ್ತಾ , ಟೀವಿ ಡಿಬೇಟ್ ಗಳ ವಸ್ತು ಆಗಬೇಕಿತ್ತಾ?
ಪಶ್ಚಿಮ್ ಬಂಗಾಳದಿಂದ ಇನ್ನೊಂದು ಸುದ್ದಿ ಕ್ಷಣ ಮಾತ್ರದಲ್ಲಿ ಜಗತ್ತಿನ ಎಲ್ಲ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರ ಗೊಂಡಿತ್ತು. ಹೇಳಿದ್ದು ಒಂದು ಕಾನ್ವೆಂಟ್ ಶಾಲೆಯಲ್ಲಿ ಹನ್ನೆರಡು ಲಕ್ಷ ರೂಪಾಯಿಗಳ ಕಳ್ಳತನ ಅಲ್ಲದೆ 72 ವರ್ಷದ ನನ್ ಒಬ್ಬರ ಅತ್ಯಾಚಾರ. ಆಪಾದನೆಯ ಬೆರಳು ಹಿಂದೂ ಮತಾಂತರದತ್ತ. ವ್ಯಾಟಿಕನ್ ರೇಡಿಯೋ ಕೂಡ ಈ ಅರ್ಥದ ಸುದ್ದಿ ಬಿತ್ತರಿಸಿತು. ಆದದ್ದಿಷ್ಟು. ಯಾವುದೋ ಬಾಂಗ್ಲಾದೇಶಿ ಮುಸ್ಲಿಮರ ಕೈವಾಡ, ಪಾಕಿಸ್ತಾನದ ISI ಕುಮ್ಮಕ್ಕಿನ ಮೇಲೆ. ಅಂತಿಮ ಯಥಾರ್ಥ ಸುದ್ದಿಯ ಬಗ್ಗೆ ವ್ಯಾಟಿಕನ್ ರೇಡಿಯೋ ಮೌನ, BBC ಯ ಮೌನ. ಕ್ಷಮಾಯಾಚನೆಯ ಮಾತೇ ಇಲ್ಲ.
ಈ ದುಷ್ಪ್ರಚಾರಕ್ಕೆ ಅಂತ್ಯವಿರಲಿಕ್ಕಿಲ್ಲ. ಮತ್ತೆ ಮರುಕಳಿಸಬಹುದು. ಸಣ್ಣ ಪುಟ್ಟ ಘಟನೆಗಳು ನಡೆಯಬಹುದು. ಮಾಡಿಸಲ್ಪಡಬಹುದು. ಟೀವೀ ನಿರ್ವಾಹಕರು ಕ್ರಿಶ್ಚಿಯನ್ಸ್ ನ್ನ ಕೂರಿಸಿಕೊಂಡು “ನಿಮಗೆ ಭಾರತದಲ್ಲಿ ಅಸುರಕ್ಷಿತತೆ ಫೀಲ್ ಆಗುತ್ತಾ?” ಅಂತ ಕೇಳಬಹುದು. ಮತ್ತು ಈ ರೀತಿ ಉತ್ತರ ತರಿಸಿಕೊಳ್ಳಬಹುದು . “ಹಾಂ ! ಹೌದು.” ಭಾರತದ ಮಾಧ್ಯಮಕ್ಕೆ ಅಭಿಪ್ರಾಯ ರೂಪಿಸುವ ಅಗಾಧ ಶಕ್ತಿ ಇದೆ. ಚರ್ಚುಗಳಿಗೆ ರಾಜಕೀಯದ ಮತ್ತು ಹಣಕಾಸಿನ ಸಾಮರ್ಥ್ಯಗಳಿವೆ . ಎರಡೂ ಸೇರಿ ಹಿಂದೂಗಳನ್ನು, ವಾಸ್ತವಕ್ಕೆ ವ್ಯತಿರಿಕ್ತವಾಗಿ, ಅಸಹಿಷ್ಣುಗಳು, ಪರಧರ್ಮ ದ್ವೇಷಿಗಳು ಎಂದು ತೋರಿಸಬಹುದು. ಇನ್ನೊಂದು ಮೂರನೆಯ ಮೂಲ, ಪಾಕಿಸ್ತಾನ ಭಾರತವನ್ನು ಜಗತ್ತಿಗೆ ಕೆಟ್ಟ ರೂಪದಲ್ಲಿ , ಕನಿಷ್ಠ ಪಕ್ಷ ತನ್ನಷ್ಟೇ ಕೆಟ್ಟ ರೂಪದಲ್ಲಿ ತೋರಿಸಬಯಸುತ್ತದೆ.
ಒಂದು ವೇಳೆ ಭಾರತದ ಮಾಧ್ಯಮ ನ್ಯಾಯಯುಕ್ತವಾಗಿದ್ದರೆ ಭಾರತದಲ್ಲಿ 2015 ರ ಹತ್ತು ತಿಂಗಳಲ್ಲಿ 160 ದ್ವೇಷದ ಅಪರಾಧಗಳು ನಡೆದವು ಎಂದು ಪ್ರತಿಪಾದಿಸುತ್ತಿರಲಿಲ್ಲ. ಪುಡಿ ಕಳ್ಳತನ, ಕುಡುಕರಿಂದ ಕಲ್ಲೆಸೆತ ಮುಂತಾದ ಮೂರನೆಯ ವ್ಯಕ್ತಿಯ ಅಪರಾಧಗಳನ್ನು ಸೇರಿಸಿಕೊಂಡು ಎಣಿಸಿ “ಕ್ರಿಶ್ಚಿಯನ್ಸ್ ಭಾರತದಲ್ಲಿ ಅಸುರಕ್ಷಿತರು ” ಎಂದು ಕೂಗುವದರಲ್ಲಿ ಯಾವ ಅರ್ಥವಿದೆ? ಹಾಗೆ ಮಾಡುವದರಿಂದ ಭಾರತವನ್ನು ಹೊಡೆಯುವದಕ್ಕೆ ಯಾವಾಗಲೂ ಕಾದು ಕುಳಿತ ಪಾಶ್ಚಿಮಾತ್ಯರ ಕೈಗೆ ಕೋಲು ಕೊಟ್ಟ ಹಾಗೆ ಆಗಲ್ಲವಾ? 2015 ರ ಹಿಂದಿನ ವರ್ಷ ಬ್ರಿಟನ್ನಿನಲ್ಲಿ ಜ್ಯೂ ಜನರ ವಿರುಧ್ಧ 1000 ದ್ವೇಷದ ಅಪರಾಧಗಳು ಮಾಡಲ್ಪಟ್ಟವು.ಎರಡೂ ದೇಶಗಳ ಜನಸಂಖ್ಯೆಯ ದೃಷ್ಟಿಯಿಂದ ಭಾರತದಲ್ಲಿ ಒಂದು ವರ್ಷದಲ್ಲಿ 20,000 ದ್ವೇಷದ ಅಪರಾಧಗಳು ಆದ ಹಾಗೆ ಲೆಕ್ಕ. 160 ಕ್ಕೆ ದೊಡ್ಡ ಗಲಾಟೆ ಎಬ್ಬಿಸಿದ್ದಾರೆ !
ಸುಮಾರು ಉದಾಹರಣೆಗಳಿಂದ ಭಾರತದಲ್ಲಿ ಕ್ರಿಶ್ಚಿಯನ್ಸ್ ಕಿರುಕುಳವಾಗಿಲ್ಲ ಬದಲಿಗೆ ಅತಿಮುದ್ದು ಮಾಡಲಾಗಿದೆ ಎಂದು ತೋರಿಸಬಹುದು. ಕ್ರಿಸ್ಸಚಿಯನ್ಸ್ ಜನಸಂಖ್ಯೆ ಬೆಳೆಯುತ್ತಲೇ ಇದೆ, ಚರ್ಚುಗಳ ಸಂಖ್ಯೆ ಕೂಡ. ಹಿಂದೂ ದೇವಾಲಯಗಳಿಗಿರುವಷ್ಟು ಸರಕಾರೀ ಕಿರಿಕಿರಿ ಚರ್ಚುಗಳಿಗೆ ಇಲ್ಲವೇ ಇಲ್ಲ.ಮಿಷನರಿಗಳು ಧೈರ್ಯವಾಗಿ ಲಕ್ಷ ಚರ್ಚುಗಳನ್ನು ಭಾರತದಲ್ಲಿ ಸ್ಥಾಪಿಸಲು ಇಚ್ಚಿಸುತ್ತೇವೆ ಎಂದು ಹೇಳಿ ಕೊಳ್ಳುತ್ತಾರೆ ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತರ ಎಲ್ಲಾ ಸವಲತ್ತುಗಳೂ ಲಭ್ಯ. ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೈಸ್ತ ಧರ್ಮ ಪ್ರಸಾರ ಮಾಡಬಹುದು ಆದರೆ ಹಿಂದೂ ತತ್ವಶಾಸ್ತ್ರವನ್ನು ಹೇಳಿ ಕೊಡಲಿಕ್ಕೆ ಆಗಲ್ಲ.
ದ್ವೇಷದ ಅಪರಾಧಗಳನ್ನು ವರದಿ ಮಾಡುವಾಗ ಮಾಧ್ಯಮ ಹಿಂಸಿತ ವ್ಯಕ್ತಿಯ ಧರ್ಮ ನೋಡಿಕೊಂಡು ಪ್ರಚಾರ ಮಾಡುತ್ತದೆ. ಕ್ರಿಶ್ಚಿಯನ್ ಅಥವ ಮುಸ್ಲಿಂ ವ್ಯಕ್ತಿ ಹಿಂಸಿಸಲ್ಪಟ್ಟಿದ್ದರೆ ವರದಿ ಹಿಗ್ಗಿಸಲ್ಪಟ್ಟು ಅತಿ ಪ್ರಚಾರ ಪಡೆಯುತ್ತದೆ. ಹಿಂಸಿತ ವ್ಯಕ್ತಿ ಹಿಂದೂ ಆಗಿದ್ದರೆ ವರದಿ ಆಚೆ ಬರುವದೇ ಇಲ್ಲ. ಈ ಸಮಸ್ಯೆಯಿಂದ ಪರಿಹಾರ ಹೇಗೆ? ಸರಕಾರ ಪ್ರಾಮಾಣಿಕವಾಗಿ ಗಟ್ಟಿ ನಿಲುವನ್ನು ತೆಗೆದುಕೊಂಡು “ಎಲ್ಲರಿಗೂ ಸಮನಾದ ನ್ಯಾಯ ; ಓಲೈಕೆ ಯಾರಿಗೂ ಇಲ್ಲ ” ಎಂದು ಘೋಷಿಸಬೇಕು.
ಹಿಂದುತ್ವಕ್ಕೆ ಪರಧರ್ಮಗಳನ್ನು ನಾಶ ಪಡಿಸುವ ಅಥವಾ ಪರಧರ್ಮಿಗಳನ್ನು ಸ್ವಧರ್ಮಕ್ಕೆ ಮತಾಂತರ ಮಾಡಿಕೊಳ್ಳುವ ಗುರಿ ಯಾವ ಕಾಲದಲ್ಲೂ ಇರಲಿಲ್ಲ, ಮುಂದೆಯೂ ಇಲ್ಲ. ಭಾರತದ ಸರಕಾರಗಳ ಮುಖ್ಯ ಕರ್ತವ್ಯ ತಮ್ಮ ಭಾರತೀಯತೆಯನ್ನು, ಹಿಂದುತ್ವವನ್ನು ಗೌರವಿಸಿ ತಮ್ಮ ಜನರಿಗೆ ಮತ್ತು ಇಡೀ ಜಗತ್ತಿಗೆ ಅವುಗಳ ಮಹತ್ವ ತಿಳಿ ಹೇಳುವದಲ್ಲದೆ ಭಾರತೀಯರು ಪರ ಧರ್ಮದವರು ಒಡ್ಡುವ ಆಸೆ ಆಮಿಷಗಳಿಂದ, ಮೋಸದಿಂದ ಅಥವಾ ಬಲವಂತದಿಂದ ತಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳದಿರುವ ಹಾಗೆ ನೋಡಿಕೊಳ್ಳುವದೂ ಆಗಿದೆ. : ಅನುದ್ಹೃತ
By Maria Wirth
ಉಪಸಂಹಾರ
ಈವತ್ತಿನ ಕಾಲದಲ್ಲಿ ನಾವು ಜಾತಿಭೇದ , ಧರ್ಮಭೇದಗಳನ್ನ ಎಷ್ಟು ಆಳವಾಗಿ ಆಚರಿಸ್ತೀವಿ ಅನ್ನೋ ಪ್ರಶ್ನೆಗೆ ನಮಗೆ ನಾವೇ ಪ್ರಾಮಾಣಿಕವಾಗಿ ಉತ್ತರಿಸಿಕೊಳ್ಬೇಕು. ಅವನು ಹೊಲೆಯ, ಇವನು ಕುರುಬ, ಅವನು ಲಿಂಗಾಯತ, ಇವನು ಗೌಡ , ಅವರು ಬ್ರಾಂಬ್ರು, ಇವನು ಸಾಬಿ, ಅವನು ಕಿರಿಸ್ತಾನಿ ಅಂತ ಗುಸ ಗುಸ ಪಿಸ ಪಿಸ ಅಂತ ಮಾತಾಡಕೊಳ್ಳತೀವೇ ಹೊರತು ಬಹಿರಂಗವಾಗಿ , ಆಫಿಸೀಯಲೀ , ನಮ್ಮ ಕಾರ್ಯಕ್ಷೇತ್ರದಲ್ಲಿ ನಾವು ಜಜ್ಜಮೆಂಟ್ ಗೆ ಕೂತಾಗ ಈ ಜಾತಿಭೇದ, ಧರ್ಮಭೇದಗಳನ್ನ ಸ್ವಯಂ ಇಚ್ಚೆಯಿಂದಲೂ ಮಾಡಲ್ಲ, ಒಂದು ವೇಳೆ ಯಾರೋ ಮಾಡಲೇಬೇಕು ಅಂದ್ಕೊಂಡ್ರೆ ಕಾನೂನು, ಸರಕಾರೀ ನಿಯಮಗಳು ಬಿಡುತ್ತಾ ಹೇಳಿ. ಈಗಿನ ಸಾಮಾಜಿಕ, ಆರ್ಥಿಕ ದುಬಾರಿ ಪರಿಸ್ಥಿತಿಗಳಲ್ಲಿ ಒಳ್ಳೇ ಕ್ಲಾಸ್ ಲೈಫ್ ಲೀಡ್ ಮಾಡಕ್ಕೆ ಪತಿ ಪತ್ನಿ ಇಬ್ಬರೂ ಜಾಬ್ ಮಾಡಬೇಕಾಗತ್ತೆ. ಜಾಬ್ ಮಾಡೋ ಕಡೇನೆ ಮದುವೆಗಳೂ ಫಿಕ್ಸ್ ಆಗಿ ಬಿಡುತ್ತವೆ. ಜಾತಿ ,ಧರ್ಮ ಅಂತ ನೋಡ್ತಾ ಕೂತ್ಕೊಳ್ಳೋಕ್ಕೆ ಆಗತ್ತಾ? ನಮ್ಮ ಸಿಟಿ ಲೈಫ್ ನಲ್ಲಿ ಜಾತಿ, ಧರ್ಮ ಎಂದೋ ಸತ್ತು ಹೋಗಿವೆ . ಹಳ್ಳಿ ಜೀವನದ ಬಗ್ಗೆ ನಾವು ನಮ್ಮ ಸಾರಸ್ವತ ಲೋಕದಲ್ಲಿ ಎಷ್ಟು , ಯಾವಾಗ ತಲೆ ಕೆಡಿಸಿಕೊಂಡಿದ್ದೀವಿ ಹೇಳಿ.
ಆಧಾರ : ಅಂತರಜಾಲ ಮತ್ತು ವಿಕಿಪೀಡಿಯ
ಅಂಕಿ ಸಂಖ್ಯೆಗಳು ಮತ್ತು ಮಾಹಿತಿ ಋಣ :
http://www.religioustolerance.org/rath01b.htm
BharatWins.com
Mr. Sanjeev Nayyar.
Capt (IN) J K Sharma www.merinews.com
Mr. Minhaz Merchant. www.dailyo.in/politics 2015 and 2016
Extract from Maria Wirth’s BLOG dated March 30, 2015 with her
CATEGORY I
Leave a Reply