IV . 1 ಗೋ ರಕ್ಷಣಾ ವಿವಾದದ ಸಂವೈಧಾನಿಕ, ಭಾವನಾತ್ಮಕ ಮತ್ತು ಶಾಸ್ತ್ರೀಯ ಅವಲೋಕನ
ಕಾಮಧೇನು ಕಲ್ಪವೃಕ್ಷ ಅಂತ ಸ್ವರ್ಗಲೋಕದ ಕಥೆಗಳನ್ನು ಅಜ್ಜಿ ಹೇಳುವಾಗ ನಾವೆಲ್ಲ ನಿಬ್ಬೆರಗಾಗಿ ಕೇಳುವ ದಿನಗಳು ದಶಕಗಳ ಹಿಂದೆಯೇ ಸರಿದುಹೋದವು. ಅದಾಗ್ಯೂ ಈಗಲೂ ಮೊಮ್ಮಗಳು ಒಮ್ಮೆ ಕೇಳಿಸಿಕೊಂಡು ಮತ್ತೆ ಪುಣ್ಯಕೋಟಿ ಕಥೆ ಹೇಳು ಅಂತ ದುಂಬಾಲು ಬಿದ್ದಾಗ ಬಾಲ್ಯದ ಆ ಮುಗ್ಧ ಧನ್ಯತಾ ಭಾವ ಮರುಕಳಿಸುತ್ತದೆ. ಅಣಕಿಸುತ್ತದೆ. ಆದರೆ ಇದೀಗ ಬರೀ ಭಾರತೀಯರೇಕೆ ಇಡೀ ಮನುಜ ಕುಲ ತಲೆ ತಗ್ಗಿಸುವಂಥ ನಡು ಬೀದಿಯಲ್ಲೇ ಕತ್ತರಿಸುವ, ಭಕ್ಷಿಸುವ ಘೋರ ರಾಕ್ಷಸೀ ದೃಶ್ಯಗಳು ನಡೆದು ಹೋಗುತ್ತಿವೆ. ಇದೊಂದು ಪ್ರತಿಭಟನೆಯ ಸ್ವರೂಪವೇ ? ಒಂದು ನಾಗರೀಕ ಪ್ರದರ್ಶನವೇ? ಬೌಧ್ಧಿಕ, ತಾರ್ಕಿಕ ಚರ್ಚಾತ್ಮಕ ಶಕ್ತಿಗಳು, ವಿಧಾನಗಳು ಬತ್ತಿ ಹೋದವೇ? ಜಗತ್ತಿಗೇ ಗುರು ಸ್ಥಾನದಲ್ಲಿದ್ದುಕೊಂಡು ಶಾಂತಿ, ಅಹಿಂಸೆ, ಜೀವಿ ದಯೆ, ಸತ್ಯ, ನ್ಯಾಯಗಳ ಪಾಠ ಹೇಳಿದ ಭರತವರ್ಷ ‘ರಾಜಕಾರಣ’ ಎಂಬ ಕೊಳಚೆ ನೀರಿನಲ್ಲಿ ಕೊಚ್ಚಿ ಹೋಯಿತೇ ?
ಗೋ ರಕ್ಷಣೆಯ ವಿಷಯದಲ್ಲಿ ಸಂವಿಧಾನದ ಮೂಲಾಧಾರ ಗೋಹತ್ಯೆ ಮತ್ತು ನರಹತ್ಯೆ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂಬ ಗಾಂಧೀಜಿಯವರ ಹೇಳಿಕೆಯನ್ನು ಮುಂದುವರಿಸಿಕೊಂಡೇ ಭಾರತದ ಸಂವಿಧಾನದ 48 ನೆಯ ಕಲಮು ವಿಧಿಸಿದ್ದು ಹೀಗೆ : “ಸರಕಾರ ಕೃಷಿ ಮತ್ತು ಪಶು ಸಂಗೋಪನೆಗಳನ್ನು ಆಧುನಿಕ ಮತ್ತು ಶಾಸ್ತ್ರೀಯ ರೀತಿಯಲ್ಲಿ ಸಂಘಟಿಸಬೇಕು; ವಿಶೇಷವಾಗಿ ತಳಿಗಳ ಬೆಳವಣಿಗೆ ಮತ್ತು ಸಂರಕ್ಷಣೆಯ ವಿಧಾನಗಳನ್ನು ಕೈಗೊಳಬೇಕಲ್ಲದೆ ಗೋವು,ಕರುಗಳು ಮತ್ತು ಇತರ ಹಾಲು ಹಿಂಡುವ ಮತ್ತು ಹೊಲ ಉಳುವ ಜಾನುವಾರಗಳ ಹತ್ಯೆಯನ್ನು ನಿಷೇಧಿಸಬೇಕು .”
ಕರಡು ರಚನೆಯ ಹಂತದಲ್ಲಿ ಈ ಸಾಂವಿಧಾನಿಕ ವಿಧಿಯನ್ನು ಸಮರ್ಥಿಸುತ್ತ ಮುಂದುವರಿಸಿದ ವಾದ ಹೀಗಿತ್ತು: “ಹಸು ಹಾಲು ಕೊಡುವದೇ ಆಗಿರಲಿ ಅಥವಾ ಇಲ್ಲದಿರಲಿ, ಅದೊಂದು ಗೊಬ್ಬರ ಉತ್ಪಾದಿಸುವ ಸಾಧನವಾಗಿರುವದರಿಂದ ಅದರ ಉಪಯುಕ್ತತೆ ನಿರುಪಯುಕ್ತತೆಯ ಪ್ರಶ್ನೆಯೇ ಏಳುವದಿಲ್ಲ. ಅದು ಎಂದಿಗೂ ಉಪಯೋಗಕರವೆ.” ಇದಕ್ಕೊಂದು ಮರು ಸವಾಲು, ಅಡ್ಡ ವಾದ. “ಎಲ್ಲಾ ಹಂತದ, ಅವಸ್ಥೆಗಳ ಹಸುಗಳ, ಇತರ ಜಾನುವಾರಗಳ ಹತ್ಯೆ ನಿಷೇಧವಾದಲ್ಲಿ ಇಡೀ ದೇಶ ಉಪಯುಕ್ತತೆ ನಿಂತ ಮತ್ತು ರೋಗಿಷ್ಠ ಜಾನುವಾರುಗಳಿಂದ ತುಂಬಿ ಹೋಗಿ ಅವುಗಳನ್ನು ಸಾಕುವದೇ ಸರಕಾರಗಳ ಮೇಲಿನ ದೊಡ್ಡ ಭಾರವಾಗಿಬಿಡುತ್ತದೆ. ಕಟುಕರ ಉದ್ಯೋಗದ ವಿಷಯದಲ್ಲಿನ ಮೂಲಭೂತ ಸ್ವಾತಂತ್ರ್ಯ , ಇನ್ನು ಕೆಲವರ ಆಹಾರದ ಆಯ್ಕೆಯ ಸ್ವಾತಂತ್ರ್ಯಗಳ ಹನನವಾಗುತ್ತದೆ.”
ಗೊಡ್ಡು ತಾರ್ಕಿಕ ವಾದಗಳಿಗೆ ಕೊರತೆಯೇ ಇಲ್ಲ. ಹಿಂದಿರುವ ಮೂಲ ಪ್ರಾಮಾಣಿಕ ಉದ್ದೇಶವನ್ನು ತಿಳಿದುಕೊಳ್ಳುವ ಇಚ್ಛೆ , ತಾಳ್ಮೆ ಮತ್ತು ವಿವೇಚನೆಗಳು ಇಲ್ಲವೆ ಇಲ್ಲ. ಭಾರತದ ವಿಭಜನೆಯ ಸಂದರ್ಭದಲ್ಲಿ ಮುಂದುವರಿಯದೆ ಮಧ್ಯದಲ್ಲೇ ಸ್ಥಗಿತವಾದ ಚರ್ಚೆ, ಆ ಹಂತದಲ್ಲಿ ಹಾಗೇ ಬಿಟ್ಟ ಕರಡೇ ಕಾನೂನು ಆದ ಹಾಗೆ ಈ ವಿಷಯದಲ್ಲೂ ಆಯಿತು. ಸಂವಿಧಾನದ 48 ನೆ ಕಲಮನ್ನು ಕೇವಲ ಒಂದು ನಿರ್ದೇಶಕ ತತ್ವದಂತೆ ಅನುಸರಿಸಿ ವಿವಿಧ ರಾಜ್ಯಗಳು ತಮ್ಮದೇ ಆದ ವಿವಿಧ ಕಾನೂನುಗಳನ್ನು ರೂಪಿಸಿಕೊಂಡುಬಿಟ್ಟವು. ಮುಂದೆ ಅನೇಕ ಕೋರ್ಟುಗಳಲ್ಲಿ ಪ್ರಶ್ನಿಸಲ್ಪಟ್ಟರೂ ಕೇವಲ ಹಾಲು ಹಿಂಡುವ ಮತ್ತು ನೊಗ ಹೊರುವಂಥ ಜಾನುವಾರಗಳು ಮಾತ್ರವಲ್ಲದೆ ಆವುಗಳು ಆ ಸೇವೆ ಕೊಡುವ ವರೆಗೆ ಮಾತ್ರ ರಕ್ಷಣೆಗೆ ಪಾತ್ರ ಎಂಬ ಅಡ್ಡ ಗೋಡೆಯ ಮೇಲೆ ದೀಪದ ಬೆಳಕಿನಲ್ಲೇ ಶುಭಂ ಎಂದು ಕಾನೂನಿನ ಪರದೆ ಕೆಳಗಿಳಿಯಿತು. ಗೋ / ಜಾನುವಾರುಗಳ ಪ್ರಕಾರಗಳು , ಸಾಗಾಣಿಕೆ, ಹತ್ಯೆ , ಮಾಂಸಗಳ ಮಾರಾಟ, ಮಾರಾಟಕ್ಕೆ ಪ್ರದರ್ಶನ, ರಫ್ತು ಇತ್ಯಾದಿ ವಿವಿಧ ವಿಷಯಗಳ ಬಗ್ಗೆ ವಿವಿಧ ರಾಜ್ಯಗಳಲ್ಲಿ ವಿವಿಧ ಕಾನೂನುಗಳಿವೆ.
ಭಾರತದಲ್ಲಿ ಹಿಂದುತ್ವದ ಪ್ರಕಾರ ಗೋವಿಗೆ ಪಾರಂಪಾರಿಕವಾಗಿ ಒಂದು ದೈವಿಕ ಮತ್ತು ಗೌರವಾನ್ವಿತ ಜೀವದ ಸ್ಥಾನ ಇರುವದರಿಂದ ಗೋ ಹತ್ಯೆ ಒಂದು ಧಾರ್ಮಿಕ ಸೂಕ್ಷ್ಮದ ವಿಷಯವಾಗುತ್ತದೆ. ದುಗ್ಧ ಉತ್ಪನ್ನಗಳು ಭಾರತೀಯರ ಆಹಾರದ ಮುಖ್ಯ ಪೌಷ್ಟಿಕಾಂಶದ ಆವಶ್ಯಕ ಭಾಗಗಳಾಗಿವೆ. ೧೯೫೪ರಲ್ಲಿ ಲಿಖಿತ ಭಾರತದ ಸಂವಿಧಾನದ ೪೮ ನೆಯ ಸಂಹಿತೆಯಂತೆ ಗೋವು , ಕರು ಮತ್ತು ಇತರ ಹಾಲು ಕೊಡುವ ಮತ್ತು ಕೃಷಿಯಲ್ಲಿ ನೇಗಿಲು ಎಳೆಯುವ ಪ್ರಾಣಿಗಳ ವಧೆ ಕಾನೂನು ರೀತ್ಯಾ ನಿಷೇಧಿಸಲ್ಪಟ್ಟಿದೆ. ಹಾಲು, ಗೋಮೂತ್ರ, ಗೋಮಯ ಮತ್ತು ಕೃಷಿಕ ಸೇವೆಗಳನ್ನು ಅಮೂಲ್ಯ ರಾಷ್ಟ್ರೀಯ ಉತ್ಪನ್ನ ಎಂದು ಪರಿಗಣಿಸಲಾಗಿದೆ. ಈ ಪ್ರಾಣಿಗಳಿಗೆ ವಯಸ್ಸಾದಾಗ ಈ ಪ್ರಯೋಜಕತೆಗಳು ನಿಂತು ಹೋದ ಮೇಲೆ ಈ ಕಾನೂನು ಹೇಗೆ ಸಮರ್ಪಕವಾದೀತು ಎಂಬ ಕಾನೂನಿನ ಆಕ್ಷೇಪಣೆಗಳು ಮೊದಲಿನಿಂದಲೂ ಬರುತ್ತಿದ್ದವು. ಮುದಿ ದನಗಳು ನಿಷ್ಪ್ರಯೋಜಕವಾಗಿ ಸಮಾಜಕ್ಕೆ ಭಾರವಾಗುವದಿಲ್ಲವೆ ಎಂಬ ಆತಂಕವನ್ನು ವ್ಯಕ್ತ ಪಡಿಸಲಾಗುತ್ತಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯ ಅಕ್ಟೋಬರ್ ೨೬, ೨೦೦೫ ರಂದು ತನ್ನ ಐತಿಹಾಸಿಕ ತೀರ್ಪಿನಲ್ಲಿ ಈ ಗೋಹತ್ಯೆ ವಿರೋಧದ ಕಾನೂನಿನ ಸಂವೈಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಿತು. ೨೪ ರಾಜ್ಯಗಳಲ್ಲಿ ಈ ಗೋರಕ್ಷಣೆ ಕಾನೂನು ವಿವಿಧ ರೀತಿಗಳಲ್ಲಿ ಜಾರಿಯಲ್ಲಿದೆ. ಕೇರಳ, ಪಶ್ಚಿಮ ಬಂಗಾಲ್ ಮತ್ತು ಕೆಲವು ಉತ್ತರಪೂರ್ವ ರಾಜ್ಯಗಳಲ್ಲಿ ಜಾರಿಯಲ್ಲಿಲ್ಲ. ಗೋವು ಮುಂತಾದ ಜಾನುವಾರಗಳನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಾಗಿಸುವದಕ್ಕೂ ಕೆಲವು ರಾಜ್ಯಗಳಲ್ಲಿ ನಿರ್ಬಂಧವಿದೆ. ಮಹಾರಾಷ್ಟ್ರದಲ್ಲಿ ೧೯೭೬ರ ಗೋ ರಕ್ಷಣೆಯ ಕಾನೂನು ಜೊತೆಗೆ ಆಮದು ಮಾಡಿದ ಗೋಮಾಂಸವನ್ನು ಶೇಖರಿಸಲು ಮತ್ತು ಭಕ್ಷಿಸಲು ಕೂಡ ಪ್ರತಿಬಂಧವಿತ್ತು. ಈ ಪ್ರತಿಬಂಧದ ವಿರುಧ್ಧ ಖಾಸಗಿತನದ ಹಕ್ಕು ಮತ್ತು ಸಂವಿಧಾನದ ೨೧ ನೆಯ ಸಂಹಿತೆಯ ಪ್ರಕಾರ ಇರುವ ಆಹಾರದ ಆಯ್ಕೆಯ ಹಕ್ಕುಗಳ ಸಂರಕ್ಷಣೆಯ ವಾದ ಮಂಡಿಸಿದಾಗ ಮುಂಬೈ ಹೈಕೋರ್ಟು ಮೇ ೬, ೨೦೧೬ ರಂದು ಈ ಆಮದಿನ ಪ್ರತಿಬಂಧತೆಯನ್ನು ತೆಗೆದುಹಾಕಿತು.
ಹೀಗಾಗಿ ಗೋರಕ್ಷಣೆಯ ಏಕಪ್ರಕಾರದ ಕಾನೂನು ಭಾರತದ ಎಲ್ಲ ರಾಜ್ಯಗಳಲ್ಲಿ ಇಲ್ಲದಿರುವದು, ಜಾರಿ ಇರುವ ಕಡೆಯೂ ಕೂಡ ಕಟ್ಟುನಿಟ್ಟಿನ ಜಾರಿ ಇಲ್ಲದಿರುವದು , ಹಸುಗಳನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸ್ಥಾನಪಲ್ಲಟ ಮಾಡಿ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ , ಆಹಾರ ಸ್ವಾತಂತ್ರ್ಯದ ಪ್ರತಿಪಾದನೆ ಮುಂತಾದ ಸಂಭಾವ್ಯತೆಗಳ ಜೊತೆಗೆ ಆಯಾ ರಾಜ್ಯದಲ್ಲಿ ಆಳುವ ಪಕ್ಷಗಳ ಅಲ್ಪಸಂಖ್ಯಾತರ ಓಲೈಕೆಯ ರಾಜಕೀಯ ಲಾಭ ಪಡೆಯಲು ಈ ಕಾನೂನಿನ ಉಲ್ಲಂಘನೆ ಸುಲಭ ಸಾಧ್ಯವಾಗಿದೆ. ಸರ್ವೇ ಸಾಮಾನ್ಯವಾಗಿದೆ.
ಗೋಮಾಂಸ ಮುಸ್ಲೀಮರಿಗೆ , ಕ್ರಿಶ್ಚಿಯನ್ಸ್ ಗೆ, ದಲಿತರಿಗೆ ಮತ್ತು ಬಡವರಿಗೆ ಪ್ರಧಾನ ಆಹಾರವಾಗಿದ್ದಲ್ಲದೆ ಅದು ಕೋಳಿ ಮತ್ತು ಮೀನುಗಳಿಗಿಂತ ಕಡಿಮೆ ಬೆಲೆಗೆ ದೊರೆಯುತ್ತದೆ. ಅದೂ ಅಲ್ಲದೆ ಗೋಹತ್ಯೆ ನಿಷೇಧದಿಂದ ಮುಸ್ಲಿಮ್ಸ್ ಮತ್ತು ದಲಿತರ ಮುಖ್ಯ ವೃತ್ತಿ ಮಾಡಿಕೊಂಡ ಕಟುಕರ ಮತ್ತು ಚರ್ಮ ಉದ್ಯೋಗಗಳು ನಿಂತು ಹೋಗುವ ಸಾಧ್ಯತೆ ಆಕ್ಷೇಪಾರ್ಹವಾಗುತ್ತದೆ. ಅಂಕಿ ಸಂಖ್ಯೆಗಳ ಪ್ರಕಾರ ಭಾರತ ಗೋಮಾಂಸ ಉತ್ಪಾದನೆಯಲ್ಲಿ ಜಗತ್ತಿನ ಐದನೇ ಸ್ಥಾನ ಹಾಗೂ ನಿರ್ಯಾತದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಅದು ಗೋಮಾಂಸವಲ್ಲ , ಕಾಡೆಮ್ಮೆಯ ಮಾಂಸ ಎಂಬ ಹೇಳಿಕೆಯೂ ಇದೆ. ಸಕಾರಾತ್ಮಕ ಉದ್ದೇಶದ ಧ್ಯೇಯ ಮತ್ತು ರಾಜಕೀಯ ಸಂಕಲ್ಪಗಳ ಕೊರತೆಯಿಂದಾಗಿ ಈ ಪರಿಸ್ಥಿತಿಗೆ ಒಂದು ಕಾನೂನಿನ ಪರಿಹಾರ ಕಷ್ಟಸಾಧ್ಯವಾಗಿಬಿಡುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ಸಾಮಾನ್ಯ ಸಾಮಾಜಿಕ ಸಮಸ್ಯೆಯನ್ನು ಅದರ ವಸ್ತುನಿಷ್ಥತೆಯ ಸಾರಾಸಾರಗಳನ್ನು ಬಿಟ್ಟು ಭಾರತವನ್ನು ಧಾರ್ಮಿಕ ಪಾತಳಿಯಲ್ಲಿ ಒಡೆಯುವ ಆತಂಕದಲ್ಲೇ ನೋಡಲಾಗುತ್ತಿದೆ. ವೋಟುಗಳಿಗೋಸ್ಕರ ತಾವೇ ಸ್ವಂತ ಅಲ್ಪಸಂಖ್ಯಾತ ಪರವಾದ, ಆದ್ದರಿಂದ ಕೋಮುವಾದಿಯಾದ ಎಡಪಕ್ಷಗಳು ತಮಗೆ ತಾವೇ ಜಾತ್ಯತೀತ ಎಂಬ ಹಣೆಪಟ್ಟಿ ಸಿಕ್ಕಿಸಿಕೊಂಡು ಪರಂಪರೆ, ಸಂಸ್ಕೃತಿಗಳ ಮತ್ತು ಹಿಂದುತ್ವದ ಶಿಸ್ತನ್ನು ಪ್ರತಿಪಾದಿಸಲು ಹೊರಡುವ ಬಲಪಕ್ಷವನ್ನು ಕೋಮುವಾದಿ ಎಂದು ಜರೆಯುತ್ತವೆ. ಈ ಗೋರಾಜಕೀಯದಲ್ಲಿಯಂತೂ ಎಡ ಪಕ್ಷಗಳು, ಬುಧ್ಧಿಜೀವಿಗಳು ಮತ್ತು ಮಾಧ್ಯಮಗಳು ಅನಾವಶ್ಯಕ ಹುಯಿಲೆಬ್ಬಿಸುವದಕ್ಕೆ ಸದಾ ಸಿಧ್ಧವಾಗಿರುತ್ತವೆ. ಮತಾಂಧತೆಗೆ ಪ್ರಚೋದಿಸುವ ಘಟನೆ ನಿಜವಾಗಿ ನಡೆದಿರುತ್ತೋ ಅಥವಾ ಕೃತ್ರಿಮವಾಗಿ ಸ್ವಯಂ ಸೃಷ್ಟಿತವಾಗಿರುತ್ತೋ ಅಂತೂ ನಾಟಕೀಯವಾಗಿ ಫೋಟೋ ಆಪ್ ಗಳನ್ನು ಮಾಡಿ ಮಾಧ್ಯಮದಲ್ಲಿ ಬಿತ್ತರಿಸಲಾಗುತ್ತದೆ.
ಗೋ ರಕ್ಷಣೆಯ ವಿಷಯ ಎಲ್ಲ ನಾಗರಿಕರ ಆಹಾರ, ಆರೋಗ್ಯ, ಜೀವನೋಪಾಯ ಮತ್ತು ಧಾರ್ಮಿಕ ನಂಬಿಕೆಯ ವಸ್ತುವಾಗಿದ್ದರಿಂದ ಅದನ್ನು ಸಾಮಾಜಿಕ ಮತ್ತು ಧಾರ್ಮಿಕ ಸೌಹಾರ್ದತೆಯ ಪಾತಳಿಯಲ್ಲೇ ಬಗೆಹರಿಸುವದಕ್ಕೆ ಒಂದು ರಾಜಿ ಸೂತ್ರ ಸೂಕ್ತ. ಪೂರ್ವಾಗ್ರಹಗಳನ್ನು ತೊರೆದು ಒಂದು ನಿಷ್ಪಕ್ಷಪಾತದ ಮತ್ತು ವ್ಯವಹಾರಿಕ ಯಥಾರ್ಥತೆಯ ದೃಷ್ಟಿಯಿಂದ ನೋಡಬೇಕಾಗುತ್ತದೆ. ಇದಕ್ಕೆ ಸಕಲ ನಾಗರಿಕರ, ರಾಜಕೀಯ ಪಕ್ಷಗಳ , ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮಗಳ ವಿವೇಚನೆ ಮತ್ತು ಸಹಕಾರಗಳು ಬೇಕಾಗುತ್ತವೆ. ಅದು ಸಾಧ್ಯವಾಗುವ ವರೆಗೆ ನಕಾರಾತ್ಮಕ ರಾಜಕೀಯ ಮುಂದುವರಿಯುತ್ತದೆ.
ಭಾರತ ಸರ್ಕಾರದ ಪರಿಸರ ಮಂತ್ರಾಲಯ ಶುಕ್ರವಾರ 26 05 2017 ರಂದು ಪ್ರಾಣಿಗಳ ಮಾರುಕಟ್ಟೆಗಳನ್ನು ನಿಯಂತ್ರಿಸಲು ಹೊಸ ಕಾನೂನು ಜಾರಿಗೊಳಿಸಿತು. ಗೋವು, ಎತ್ತು, ಎಮ್ಮೆ ಮತ್ತು ಒಂಟೆಗಳನ್ನು ಮಾಂಸಕ್ಕಾಗಿ ಹತ್ಯೆ ಮಾಡಲು ಈ ಮಾರುಕಟ್ಟೆಗಳಿಗೆ ಮಾರುವಂತಿಲ್ಲ. ಪ್ರತಿ ಜಿಲ್ಹೆಯಲ್ಲಿ ಪ್ರಾಣಿಗಳ ಮಾರುಕಟ್ಟೆ ಸಮಿತಿಯನ್ನು ನೇಮಿಸಿ ಆ ಸಮಿತಿಯು ಪ್ರತಿಯೊಂದು ಪ್ರಾಣಿಯ ಮಾರಾಟದ ಉದ್ದೇಶದ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಆದೇಶಿಸಿದೆ. ಈ ಸಮಿತಿ ಕೊಂಡ ಗ್ರಾಹಕನು ಆ ಪ್ರಾಣಿಯನ್ನು ಕೃಷಿಗೆ ಬಳಸಲು ಕೊಂಡಿರುವನೇ ಹೊರತು ಕಟುಕರ ಮನೆಗೆ ಮಾರುವದಿಲ್ಲ ಎಂಬುದನ್ನು ಧೃಡಪಡಿಸಿಕೊಳ್ಳಬೇಕು ಎಂತಲೂ ಹೇಳಿದೆ. ಇದರ ಹಿಂದಿನ ಉದ್ದೇಶ ಆರೋಗ್ಯಕರ ಮತ್ತು ಇನ್ನೂ ಕೃಷಿ ಮತ್ತು ಹಾಲಿನ ಉದ್ಯೋಗಕ್ಕೆ ಸಾಮರ್ಥ್ಯ ಇರುವ ಜಾನುವಾರುಗಳು ಕಟುಕರ ಮನೆಗಳಿಗೆ ಹೋಗುವದನ್ನು ತಡೆಯುವದೇ ಆಗಿದೆ. ಗೋ ರಕ್ಷಣೆಯ ಇನ್ಯಾವ ಕಾನೂನುಗಳನ್ನೂ ಬದಲಾವಣೆ ಮಾಡಿಲ್ಲ.
ಇದಿಷ್ಟು ಕಾನೂನಿನ ರಾಜಕೀಯವಾಯಿತು. ಇನ್ನು ಗೋವನ್ನು ಭಾವನಾತ್ಮಕವಾಗಿ ಮತ್ತು ಶಾಸ್ತ್ರೀಯವಾಗಿ ನೋಡೋಣ.
ಮೊದಲನೆಯದಾಗಿ ಶ್ರೀ ಬಾಲಾಜಿ ವಿಶ್ವನಾಥನ್ ಅವರು ಹೇಳುವಂತೆ ದಶಕಗಳ ಹಿಂದೆ ಪಾರಂಪಾರಿಕ ಹಿಂದೂ ಮನೆಗಳ ಹಿತ್ತಲಿನಲ್ಲಿ ಹಸು ಕುಟುಂಬದ ಸದಸ್ಯನಂತೆ ಇದ್ದೇ ಇರುತ್ತಿತ್ತು. ಹಸು ಆ ಕುಟುಂಬದ ಈ ಕೆಳಗಿನ ದೈನಂದಿಕ ಆವಶ್ಯಕತೆಗಳನ್ನು ಪೂರೈಸುತ್ತಿತ್ತು. * ಸಾತ್ವಿಕ ಆಹಾರ : (ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ ಮತ್ತು ತುಪ್ಪ.) * ಪೂಜಾ ವಿಧಾನದ ಸಾಮಗ್ರಿ : ತುಪ್ಪ (ದೀಪ ಹಚ್ಚಲು ಮತ್ತು ಯಜ್ಞದಲ್ಲಿ ಅಗ್ನಿಗೆ ಆಹಾರವಾಗಿ ) , ಗೋಮೂತ್ರ ಪಂಚಗವ್ಯ (ಹಾಲು, ಮೊಸರು, ತುಪ್ಪ, ಗೋಮೂತ್ರ,ಗೋಮಯಗಳ ಮಿಶ್ರಣ) * ಅಡಿಗೆ ಮನೆಗೆ ಇಂಧನ : ಗೋಮಯದ ಬೆರಣಿ * ಮನೆಯ ನೆಲಗಟ್ಟಿಗೆ ನಂಜು ನಿರೋಧಕ, ಸೋಂಕು ನಿವಾರಕ ಮಾಧ್ಯಮ(ಗೋ ಮೂತ್ರ ಮತ್ತು ಗೋಮಯ) ) * ಬಿತ್ತನೆಯ ಮೊದಲು ಹೊಲದಲ್ಲಿ ಬೆಳೆದ ಕಳೆ ತೆಗೆಯಲು * ಹೊಲಕ್ಕೆ ಗೊಬ್ಬರ (ಗೋಮಯ)
ಹಿಂದುತ್ವದಲ್ಲಿ ಪ್ರಯೋಜಕತೆಗೆ ಕೃತಜ್ಞತೆಯ ರೂಪದಲ್ಲಿ ದೈವಿಕ ಗೌರವ ಕೊಡುವ ಪ್ರಥೆ ಇದೆ. ಇದೇ ತಾಯಿ ಮತ್ತು ಗುರುಗಳನ್ನು ದೇವರ ಸಮಾನ ಎಂದು ಹೇಳುವ ಪರಿ. ಆ ಗೌರವದ ಸ್ಥಾನಗಳಲ್ಲಿ ತದ ನಂತರದ್ದೇ ಹಸುವಿನದು.
ಎರಡನೆಯದಾಗಿ ಮಿಸ್ಸೌರಿ ಸೈನ್ಸ್ ಮತ್ತು ಟೆಕ್ನಾಲಜಿ ವಿಶ್ವ ವಿದ್ಯಾಲಯ, ಕ್ಯಾಲಿಫೋರ್ನಿಯಾ ದ ಶ್ರೀ. ಲಕ್ಷ್ಮೀಕಾಂತ್ ದೊರೈ ಅವರು ಹೇಳುವಂತೆ ಭಾರತ ಕೃಷಿ ಪ್ರಧಾನ ದೇಶ. ಪ್ರಾಚೀನ ಕಾಲದಲ್ಲಿ ಹಸುಗಳಿಂದ ಹೊಲಗಳನ್ನು ಉಳಲಾಗುತ್ತಿತ್ತು. ಸುಗ್ಗಿಯ ಆಹಾರವಲ್ಲದೆ ಹಸುಗಳು ಈ ಮೇಲಿನಂತೆ ದುಗ್ಧಮೂಲದ ಆಹಾರ ಒದಗಿಸುತ್ತಿದ್ದವು. ಜೊತೆಗೆ ಆಗಿನ ಧಾರ್ಮಿಕ ಭಾವನೆಯ ಜನರಿಗೆ ಹಸುಗಳಲ್ಲಿ ಕಂಡ ಪರೋಪಕಾರಿ ಮತ್ತು ಕರುಣಾಳು ಗುಣದ ಆನುವಂಶಿಕ ರೂಪದಲ್ಲಿ ಒಂದು ರೀತಿಯ ದೈವತ್ವ ಕಾಣಿಸಿರಲಿಕ್ಕೂ ಸಾಕು. ಧರ್ಮ, ದೇವರು ಎಂಬ ವಾದವನ್ನು ಬದಿಗಿಟ್ಟರೂ ಪ್ರಾಯೋಜಕತೆಗೆ ಪ್ರತಿಯಾಗಿ ಬರುವ ಕೃತಜ್ಞತೆ ಪವಿತ್ರತೆಯ ಭಾವ ತಳೆದಿದ್ದರೆ ಆಶ್ಚರ್ಯವೇನಿಲ್ಲ.
ಹಸುಗಳಿಗೆ ದಿನ ನಿತ್ಯ ಆಹಾರ ಹಾಕುವ ಕೃಷಿಕನ ಅನುಭವ ನನಗಿಲ್ಲ. ನನ್ನ ಅನುಭವವನ್ನೇ ಹೇಳ್ತೀನಿ. ನಾವು ಎಂದಾದರೊಮ್ಮೆ ಹಬ್ಬಗಳಲ್ಲಿ ಹಣ್ಣು ಬೆಲ್ಲ ಹಸುವಿಗೆ ನೀಡಿದಾಗ ಹಸುವಿನಿಂದ ಬರುವ ಪ್ರತಿಕ್ರಿಯೆ ದೈವಿಕವಾಗಿರುತ್ತೋ ಗೊತ್ತಿಲ್ಲ, ಅಂತೂ ಮಾನವೀಯವಾಗಿರುತ್ತದೆ. ಬೆಕ್ಕು, ನಾಯಿ, ಕೋತಿ ,ಎಮ್ಮೆ ಗಳಿಗಿಂತ ಖಂಡಿತ ಭಿನ್ನವಾಗಿರುತ್ತದೆ. ವರ್ತಮಾನದ ವೈಜ್ಞಾನಿಕ ಮಾಹಿತಿಯ ಯುಗದಲ್ಲೂ ಕೂಡ ಗೋವಿನ ಮೌಲ್ಯವನ್ನು ತಿಳಿಹೇಳುವದೂ ಮತ್ತು ಅರ್ಥ ಮಾಡಿಕೊಳ್ಳುವದೂ ಕಬ್ಬಿಣದ ಕಡಲೆಯಾಗಿರುವಾಗ ಪುರಾತನ ಯುಗದಲ್ಲಂತೂ ಅದು ಅಸಾಧ್ಯವಾಗಿರಲಿಕ್ಕೆ ಸಾಕು. ಅದಕ್ಕೆಂದೇ ಒಂದು ಸಾಕುಪ್ರಾಣಿಯ ಉಪಯುಕ್ತತೆಯ ಮೌಲ್ಯವನ್ನು ಪ್ರತಿಪಾದಿಸುವದಕ್ಕೆ ದೈವತ್ವದ ಕೋನವನ್ನು ವಿಧಿಸಿರಬಹುದು. ಈ ದೈವತ್ವವನ್ನು ಬಿಂಬಿಸುವ ನಮ್ಮ ಪುರಾತನರ ಪರಿ ಉತ್ಪ್ರೇಕ್ಷೆಯಿಂದ ಕೂಡಿರಬಹುದು. ಹಸುವಿನ ಚಿತ್ರದಲ್ಲಿ ಅಸಂಖ್ಯ ದೇವತೆಗಳ ರೂಪ , ಕಾಮಧೇನು ಎಂಬ ಹೆಸರು ಎಲ್ಲ ಬಂದಿರಬಹುದು. ಅದು ನಮ್ಮಗಳ ನಂಬಿಕೆ , ಒಪ್ಪಿಗೆಗಳಿಗೆ ಹೊರತಾಗಿರಬಹುದು. ಆದರೆ ನಾವು ಕಣ್ಣಾರೆ ಕಂಡಿದ್ದನ್ನು , ಅನುಭವಿಸಿದ್ದನ್ನು ಅದರ ಮೂಲ ಸ್ವಾಭಾವಿಕ ರೂಪದಲ್ಲಿ ಒಪ್ಪಿಕೊಳ್ಳಲು ಅಭ್ಯಂತರವೇನಿಲ್ಲವಲ್ಲ ! ಪ್ರಾಣಿಗಳಲ್ಲೇ ಹಸುವಿಗೆ ಆಗ್ರಸ್ಥಾನ ಸಂದರೆ ತಪ್ಪೇನಿಲ್ಲವಲ್ಲ. ಹಿಂದುತ್ವದಲ್ಲಿ ದೇವರು ಸರ್ವಾಂತರ್ಯಾಮಿ , ಎಲ್ಲ ಜೀವಗಳಲ್ಲೂ ಒಂದು ಆತ್ಮ ಇರುತ್ತದೆ ಎಂಬ ನಂಬಿಗೆ ಇದೆ. ಹಾಗಾಗಿ ಹಸುವಿನಂಥ ಒಳ್ಳೆಯ ಪ್ರಾಣಿಗಳು ದೈವಿಕತೆಗೆ ಹತ್ತಿರವಾಗುತ್ತವೆ. ಯಾವುದೇ ಪ್ರಾಣಿಹತ್ಯೆ ಒಂದು ಪಾಪವಾಗುತ್ತದೆ. ಆ ಪ್ರಾಣಿಯ ಹುಟ್ಟು ಸಾವುಗಳ ನೈಸರ್ಗಿಕ ಚಕ್ರಕ್ಕೆ ತಡೆ ಹಿಡಿದ ಹಾಗಾಗುತ್ತದೆ. ಅಸ್ವಾಭಾವಿಕ ಮೃತ್ಯುವಿನಿಂದಾಗಿ ಆ ಪ್ರಾಣಿಗೆ ಮುಕ್ತಿ ಸಿಕ್ಕದೆ ಅದೇ ರೂಪದಲ್ಲಿ ಮರುಜನ್ಮ ಪಡೆಯಬೇಕಾಗುತ್ತದೆ.
ಅದೇ ನ್ಯಾಶನಲ್ ಹಿಂದೂ ಸ್ಟೂಡೆಂಟ್ಸ್ ಫೋರಮ್ (ಯೂ ಕೇ) ಹೇಳುವದೇನೆಂದರೆ ನಾವು ಹಿಂದೂಗಳು ಗೋವುಗಳನ್ನ ಮನ್ನಿಸಿ ಗೌರವಿಸಿ ಆರಾಧಿಸುತ್ತೇವೆಯೇ ಹೊರತು ದೇವರಂತೆ ಪೂಜಿಸುವದಿಲ್ಲ. ಕೊಳ್ಳುವದಕ್ಕಿಂತ ಜಾಸ್ತಿ ವಾಪಸು ಕೊಡುವ ಸೌಮ್ಯ ಪ್ರಾಣಿ ಗೋವನ್ನು ಆರಾಧಿಸುವ ಮೂಲಕ ನಾವು ಎಲ್ಲಾ ಪ್ರಾಣಿಗಳನ್ನೂ ಗೌರವಿಸುತ್ತೇವೆ. ಹಿಂದೂಗಳು ಸಸ್ತನಿಗಳು, ಮೀನು ಮತ್ತು ಹಕ್ಕಿಗಳು ಮುಂತಾದ ಎಲ್ಲಾ ಜೀವಿಗಳನ್ನು ಪವಿತ್ರವೆಂದು ತಿಳಿಯುತ್ತೇವೆ. ಇಲ್ಲಿ ಗೋವು ಎಲ್ಲ ಪ್ರಾಣಿಗಳ ಪ್ರತಿನಿಧಿಯಾಗುತ್ತದೆ. ಗೋವು ಭೂಮಿಯ ಸಂಕೇತ; ಪೋಷಿಸುವ, ಸದಾ ಕೊಡುವ , ಯಾವ ಅಪೇಕ್ಷೆಯೂ ಇಲ್ಲದೆ ಬರಿಯೇ ಒದಗಿಸುವ ಪ್ರಾಣಿ. ಬರಿಯೇ ಹುಲ್ಲು ಮತ್ತು ನೀರು ಸೇವಿಸಿ ಹಾಲು, ಕೆನೆ, ಮೊಸರು, ಮಜ್ಜಿಗೆ , ಬೆಣ್ಣೆ, ತುಪ್ಪ, ಯೋಗುರತ್, ಐಸ್ ಕ್ರೀಮ್ ಮತ್ತು ಚೀಸು ಮುಂತಾದ ಎಂಥ ಒಳ್ಳೆಯ ಪೌಷ್ಟಿಕ ಮತ್ತು ಸಾತ್ವಿಕ ಆಹಾರ ಪ್ರಕಾರಗಳನ್ನು ಕೊಡುತ್ತದೆ! ಗೋವಿನ ಭಕ್ತಿ ಮಾನವನಲ್ಲಿ ಸೌಮ್ಯತೆಯ, ಗ್ರಹಿಸುವಿಕೆಯ ಮತ್ತು ನಿಸರ್ಗದ ಜೊತೆಗಿನ ಬಾಂಧವ್ಯದ ಸದ್ಗುಣಗಳನ್ನು ಪ್ರೇರೇಪಿಸುತ್ತದೆ. ತನ್ನ ಶಿಸ್ತಿನ ಪಳಗುವಿಕೆಯಿಂದ, ಆಕ್ರಮಣಶೀಲವಲ್ಲದ, ಸಹನೆಯ ಸ್ವಭಾವದ ಮೂಲಕ ಹಿಂದೂ ಧರ್ಮದ ಪ್ರಮುಖ ವೈಶಿಷ್ಟ್ಯಗಳಾದ ಶಿಸ್ತು, ಸಂಯಮ, ಅಹಿಂಸೆ, ಘನತೆ, ಸತ್ವ, ಸಹಿಷ್ಣುತೆ, ಮಾತೃತ್ವ ಮತ್ತು ನಿಸ್ವಾರ್ಥ ಸೇವೆಗಳನ್ನು ಪ್ರತಿನಿಧಿಸುತ್ತದೆ. ಶ್ರೀ ಅಜಯ್ ಬನ್ಸೋಡ ಅವರು ಹೇಳುವಂತೆ ಹಿಂದೂ ಧರ್ಮದ ಪ್ರಕಾರ ಬೇರೆ ಎಲ್ಲ ಜೀವಿಗಳ ಏಳಿಗೆಗೆ ನೇರವಾಗಿ ಇಲ್ಲವೆ ಪರೋಕ್ಷವಾಗಿ ಸಹಾಯ ಒದಗಿಸುವ ಯಾವುದೇ ವ್ಯಕ್ತಿ ಅಥವ ಪ್ರಾಣಿ ದೈವತ್ವದ ಮಟ್ಟಕ್ಕೆ ಅರ್ಹವಾಗುತ್ತದೆ.
ದೇಸಿ ಹಸುವಿನ ಹಾಲು ಮತ್ತು ತುಪ್ಪದ ಪ್ರಯೋಜನಗಳು
* ಹಸುವಿನ ತುಪ್ಪ ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ಅಭಿವ್ರಿಧ್ಧಿಗೆ ಸಹಾಯಕಾರಿಯಾಗುತ್ತದೆ.
* ನಿತ್ಯ ಸೇವನೆಯಿಂದ ಒಳ್ಳೆಯ HDL ಕೊಲೇಸ್ಟ್ರೋಲ್ ನ್ನು ಹೆಚ್ಚಿಸುತ್ತದೆ .
* ಪಚನಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಕೊಬ್ಬನ್ನು ಕರಗಿಸುವ ಜೀವಸತ್ವಗಳನ್ನು (ವಿಟಾಮಿನ್ಸ್) ಹೀರಿಕೊಳ್ಳಲು ಸಹಾಯ ಮಾಡುತ್ತದೆ.
* ಶ್ರೇಷ್ಠವಾದ ಬಹುಮುಖ ಸಾಮರ್ಥ್ಯದ ಮುದಿನಿವಾರಕ ಸಸ್ಯಾಹಾರಿ ಆಹಾರ,
ಅಮೃತದ ಪ್ರತೀಕವಾದ ದೇಸಿ ಹಸುವಿನ ಹಾಲಿನ ಲಾಭಕರ ಅಂಶಗಳು
* ಇದರಲ್ಲಿ ಇರುವ ಅಮಿನೋ ಆಸಿಡ್ ಗಳು ಇತರ ಪ್ರೋಟೀನಿನ ಜೀರ್ಣಕ್ಕೆ ಸಹಾಯಕಾರಿ
* ಇದರಲ್ಲಿ A, B2, B3 ಜೀವಸತ್ವಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ
* ಇದು ಮೂತ್ರಪಿಂಡಕ್ಕೆ ಹಿತಕಾರಿ.
* ಇದು ಉದರದ ಆಮ್ಲತೆಯನ್ನು ಕಡಿಮೆ ಮಾಡುತ್ತದೆ .
* ಇದು ಜಠರದ ಹುಣ್ಣಿನ ಸಾಧ್ಯತೆಯನ್ನು ನಿವಾರಿಸುತ್ತದೆ.
* ಇದು ದೊಡ್ಡ ಕರುಳಿನ, ಸ್ಥನದ, ತ್ವಚೆಯ ಕ್ಯಾನ್ಸರ್ ಗಳ ಸಂಭಾವ್ಯತೆಯನ್ನು ಕಡಿಮೆ ಮಾಡುತ್ತದೆ.
* ಇದು ಸೆರಮ್ ಕೊಲೇಸ್ಟ್ರೋಲ್ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ.
* ಇದು ಅತಿ ಶ್ರೇಷ್ಠ ನೈಸರ್ಗಿಕ ಉತ್ಕರ್ಶಣ ನಿರೋಧಕ ( ಆಂಟಿ- ಆಕ್ಸಿಡಾಂಟ್ಟ )
ತಾಯಿಯ ಹಾಲಿನ ನಂತರ , ಗೋವಿನ ಹಾಲೇ ಅತ್ಯಂತ ಪುಷ್ಟಿದಾಯಕ, ರೋಗನಿರೋಧಕ ಮತ್ತು ಸುಲಭ ಜೀರ್ಣವಾಗುವಂಥದು.
100 ಗ್ರಾಂ ಹಸುವಿನ ಹಾಲಿನಲ್ಲಿ ಈ ಕೆಳಗಿನ ಅಂಶಗಳು ಇರುತ್ತವೆ.
ರಂಜಕ (ಫೋಸ್ಫೋರೌಸ್ ) 0.93 ಗ್ರಾಂ ; ಮೆಟಾಬಾಲಿಕ್ ಮತ್ತು ದೈಹಿಕ ಚಟುವಟಿಕೆಗಳಿಗೆ ಪುಷ್ಟಿ ಕ್ಯಾಲ್ಸಿಯಂ 1.20 ಗ್ರಾಂ : ಆರೋಗ್ಯಕರ ಎಲುಬುಗಳು ಮತ್ತು ಹಲ್ಲುಗಳು
ಕಬ್ಬಿಣ ( ಆಯರ್ನ್) 0.00೨ ಗ್ರಾಂ
ಮೆಗ್ನೀಷಿಯಂ ಲೋಹ ಮಾಂಸಖಂಡ ಪುಷ್ಟಿ
ಮತ್ತು ಇತರ ಲೋಹಗಳಾದ ವೆನೆಡಿಎಮ್, ಕ್ರೋಮಿಎಮ್ , ತವರು ( ಟಿನ್ ) , ಅಲ್ಯೂಮಿನಿಯಂ, ಅಭ್ರಕ, ಸೀಸ
ಹಸುವಿನ ಹಾಲಿನಲ್ಲಿ ಈ ಕೆಳಗಿನ 25 ಪ್ರಕಾರಗಳ ಖನಿಜಗಳು ( ಮಿನರಲ್ಸ್ ) ಮತ್ತು ಜೀವಸತ್ವಗಳು (ವಿಟಾಮಿನ್ಸ್) ಇರುತ್ತವೆ .
ವಿಟಾಮಿನ್ಸ್ B 12 : ಜೀವಕೋಶಗಳ ಉತ್ಪಾದನೆಗಾಗಿ
ವಿಟಾಮಿನ್ A : ಒಳ್ಳೆಯ ದೃಷ್ಟಿ ಮತ್ತು ರೋಗ ನಿರೋಧಕ ಶಕ್ತಿಗಾಗಿ
ಸತುವು (ಝಿಂಕ್) : ರೋಗ ನಿರೋಧಕ ಶಕ್ತಿಗಾಗಿ
ರಿಬೋಫ್ಲಾವಿನ್ : ಆರೋಗ್ಯಕರ ತ್ವಚೆಗಾಗಿ
ಫೊಲೇಟ್ : ಆರೋಗ್ಯಕರ ಜೀವಕೋಶಗಳ ಉತ್ಪಾದನೆಗಾಗಿ
ವಿಟಮಿನ್ C : ಆರೋಗ್ಯಕರ ಸಂಯೋಜಕ ಅಂಗಾಂಶಗಳು (ಕನೆಕ್ಟಿವ್ ಟಿಸ್ಸ್ಯೂಸ್ )
ಅಯೋಡಿನ್ : ದೇಹದ ಮೆಟಬೋಲಿಸ್ಮ್ ನ ಉತ್ಪಾದನ ಗತಿಯನ್ನು ನಿಯಂತ್ರಿಸಲು
ರಾಸಾಯನಿಕ ಗೊಬ್ಬರ ಮತ್ತು ಪ್ಲಾಸ್ಟಿಕ್ ಬಳಸದಂಥ ಹುಲ್ಲು ತಿನ್ನುವ ಭಾರತದ ಗೋವಿನ ಹಾಲಿನ ಪೌಷ್ಟಿಕಾಂಶದ ಮೌಲ್ಯ ವು ಅತ್ಯಂತ ಅಧಿಕವಾಗಿದ್ದು ಥರಾವರಿ ರೋಗಗಳ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಹೀಗಾಗಿ ಭಾರತೀಯರು ವೇದಕಾಲದಿಂದ ಗೋವನ್ನು ಸ್ವರ್ಗದಿಂದ ಇಳಿದುಬಂದ ಕಾಮಧೇನುವಿನ ರೂಪ ಎಂಬ ನಂಬಿಕೆಯ ಬಲದ ಮೇಲೆ ಗೋಮೂತ್ರ ಮತ್ತು ಗೋಮಯವನ್ನು ಔಷಧಿಯ ಅಂಶಗಳಾಗಿ ಉಪಯೋಗಿಸುತ್ತಿದ್ದರು. ಈಗಲೂ ಕೂಡ ಶಾಸ್ತ್ರೀಯ ಆಧಾರದ ಮೇಲೆ ಗೋಮೂತ್ರ, ಗೋಮಯ ಔಷಧಿಗಳಾಗಿ ಉಪಯೋಗಿಸಲ್ಪಡುತ್ತಿವೆ.
ಗೋಮೂತ್ರದ ಲಾಭಕಾರಿ ಅಂಶಗಳು.
ಅಂತರರಾಷ್ಟ್ರೀಯ ಜರ್ನಲ್ (International Journal of Pharmacy and Pharmaceutical Sciences ISSN- 0975-1491 Vol 6, Issue 3, 2014 ) ಪ್ರಕಾರ ಗೋ ಮೂತ್ರ ಅನೇಕ ರೋಗಗಳಿಗೆ ಮದ್ದು ಆಗಿದೆ. ಗೋಮೂತ್ರ ಮಾನವ ಶರೀರದಲ್ಲಿನ ಎಲ್ಲ ಸ್ವಾಭಾವಿಕ ಜೀವನಾಧಾರ ಮೂಲವಸ್ತುಗಳನ್ನು ಹೊಂದಿರುತ್ತದೆ. ಗೋಮೂತ್ರ ಸ್ವಾಭಾವಿಕ, ಪರಿಸರ ಸ್ನೇಹಿ ಮತ್ತು ಅಡ್ಡ ಪರಿಣಾಮರಹಿತ, ಸುಲಭ ಲಭ್ಯ, ಕಡಿಮೆ ಬೆಲೆಯದ್ದಾಗಿರುವದರಿಂದ ಒಂದು ಔಷಧಿಯ ಘಟಕಾಂಶವಾಗಿ ಉಪಯೋಗಿಸುವ ಸಾಧ್ಯತೆ ಪಡೆದಿರುತ್ತದೆ . ಒಂದು ಚಿಕಿತ್ಸಾ ಪಧ್ಧತಿಯಲ್ಲಿ ಗೋಮೂತ್ರ ಈ ಕೆಳಗಿನ ರೋಗಗಳ ಚಿಕಿತ್ಸೆಗಾಗಿ ಈಗಾಗಲೇ ಉಪಯೋಗಿಸಲ್ಪಡುತ್ತಿದೆ. ಮಧುಮೇಹ, ರಕ್ತದೊತ್ತಡ, ಹೃದಯಾಘಾತ, ಅಸ್ಥಮಾ, ಚರ್ಮರೋಗ (psoriasis), ಇಸಬು, ಕ್ಯಾನ್ಸರ್, ಏಡ್ಸ್, ಮೂಲವ್ಯಾಧಿ , ಸಂಧಿವಾತ, ಅರೆತಲೆನೋವು, ಥೈರಾಯ್ಡ್, ಕರುಳಿನ ಹುಣ್ಣು, ಆಮ್ಲತೆ, ಮಲಬಧ್ಧತೆ, ಪ್ರಸವರೋಗ. ಅಲ್ಲದೆ ಭೂಮಿಯ ಜೈವಿಕ ವರ್ಧಕ, ಮಣ್ಣಿನ ಸಾರಜನಕ ಅಂಶದ ವರ್ಧಕ, ಜೇನುಸಾಕಣೆಯ ವರ್ಧಕ, ಮೇವು ಬೆಳೆಗಳಿಗೆ ಕೀಟನಾಶಕವಾಗಿ ಉಪಯೋಗಿಸಲ್ಪಡುತ್ತಿದೆ.
ಗೋಮಯದ ಹಸಿರು ಕ್ರಾಂತಿ
ತನ್ನ ಸೋಂಕು ನಿವಾರಕ ಗುಣಗಳಿಂದಾಗಿ ಗೋಮಯವನ್ನು (ಹಸುವಿನ ಸಗಣಿ ) ಹಳೆಯ ಕಾಲದಲ್ಲಿ ಮತ್ತು ಹಳ್ಳಿಗಳಲ್ಲಿ ಈಗಲೂ ಕೂಡ ಮಣ್ಣಿನ ನೆಲ ಮತ್ತು ಗೋಡೆಗಳನ್ನು ಸಾರಿಸಲು ಉಪಯೋಗಿಸುವದನ್ನು ನೋಡಿದ್ದೇವೆ. ಆಯುರ್ವೇದ ಪಧ್ಧತಿಯಲ್ಲಿ ಗೋಮಯವನ್ನು ಬಾಡಿ ಪ್ಯಾಕ್ ಅಂತ ಕೂಡ ಉಪಯೋಗಿಸುತ್ತಾರೆ.
ಗೋಮೂತ್ರ , ಗೋಮಯಗಳನ್ನು ಶಾಸ್ತ್ರೋಕ್ತವಾಗಿ ಉಪಯೋಗೀ ಪ್ರಸಾಧನಗಳು ಮತ್ತು ಔಷಧಿಗಳಾಗಿ ಅಭಿವ್ರುಧ್ಧೀಕರಿಸಿ ಮಾರಾಟ ಮಾಡುತ್ತಿರುವ ಸಂಸ್ಥೆಗಳ ಹೆಸರುಗಳು ಈ ರೀತಿ ಇವೆ.
- ಗೋವರ್ಧನ್ ಇಕೋ ವಿಲ್ಲೇಜ್ , contactus@ecovillage.org.in
Source : http://www.ecovillage.org.in/ecopedia/land-cow-iv-the-green-miracle
- ಗೌಕ್ರಾಂತಿ ಪರಿವಾರ GAUKRANTI PARIVAR ,C-727 GF, JVTS GARDEN, CHHATARPUR EXTENSION, NEW DELHI-110074 http://www.gaukranti.org/ info@gaukranti.org
– ಬೀ. ಎನ್. ಯಳಮಳ್ಳಿ. ಬೆಂಗಳೂರು
Leave a Reply