1.1 ಪೀಠಿಕೆ

ಸ್ವಾತಂತ್ರ್ಯ ಪೂರ್ವ ಕಾಲದಿಂದ ತೀರ ಇತ್ತೀಚಿನ ವರೆಗೆ ಭಾರತದ ಸಾಮಾನ್ಯ ನಾಗರಿಕ ದೇಶದ ರಾಜಕೀಯ ನಾಯಕ ದೇವರುಗಳ ಒಬ್ಬ ಭಕ್ತನಾಗಿದ್ದ. ನಮ್ಮ ದೇವರು ನಮ್ಮ ಕೈ ಬಿಡುವದಿಲ್ಲ , ಅವರು ಮಾಡುವದೆಲ್ಲ ದೇಶದ , ಜನರ ಒಳಿತಿಗೇನೇ ಅಂತ ಮುಗ್ಧನಾಗಿ ಧೃಢವಾಗಿ ನಂಬಿದ್ದ.  ಮೂಕ ಪ್ರೇಕ್ಷಕನಾಗಿದ್ದ. ಪಾಲಿಗೆ ಬಂದದ್ದು ಪಂಚಾಮೃತವೆಂದು ಸ್ವೀಕರಿಸುವವನಾಗಿದ್ದ. ಸುಶಿಕ್ಷಿತ ನಗರವಾಸಿ ಮಿಸ್ಟರ್ ಇಂಡಿಯಾ ಅನ್ನಿಸಿಕೊಳ್ಳುವವ ನನ್ನ ಕುಟುಂಬ, ಮನೆ, ನೌಕರಿ, ಸಂಬಳ, ಇನ್ಕ್ರಿಮೆಂಟು, ಪ್ರಮೋಷನ್ನು, ಈ ಎಮ್ ಐ, ಇನ್ಕಮ್ ಟ್ಯಾಕ್ಸುಗಳು ಒಂದು ಸಹಿಸುವಂಥ ಮಟ್ಟದಲ್ಲಿ ಇರುವ ವರೆಗೆ ನನಗ್ಯಾಕಪ್ಪ ದೇಶದ ರಾಜಕೀಯದ  ಉಸಾಬರಿ ಅಂತ ಅಲ್ಪತೃಪ್ತನಾಗಿ ಟೈಮ್ಸ್ ಆಫ್ ಇಂಡಿಯಾ ಪೇಪರ್ ಹಾಕಿಸಿಕೊಂಡು ಓದದೇ ಹಾಯಾಗಿ ಇದ್ದ. 2004 ರಿಂದ 2014 ಅವಧಿಯ ಭಾರತ ದೇಶದ ಆಳ್ವಿಕೆ ಯಾವ ಮಟ್ಟದ ಅಧೋಗತಿಗೆ ಇಳಿಯಿತೆಂದರೆ ರಾಜಕೀಯ ಕುರುಡನಿಗೂ ಕಾಣಿಸುವ , ಕಿವುಡನಿಗೂ ಕೇಳಿಸುವ ಮತ್ತು ಮೂಗನಿಗೂ ಮಾತನಾಡುವ ಸಾಧ್ಯತೆಯ ಪವಾಡಗಳನ್ನು ತಂದಿತು. ಸುಮಾರಾಗಿ ಅದೇ ಅವಧಿಯಲ್ಲಿ ಡಿಜಿಟಲ್ ತಾಂತ್ರಿಕತೆ ಭಾರತ ಪ್ರವೇಶ ಮಾಡಿ, 2010, 2011, 2012 ರ ಹೊತ್ತಿಗೆ ಪ್ರತಿಯೊಬ್ಬ ಸುಶಿಕ್ಷಿತ ವ್ಯಕ್ತಿ ಸಾಮಾಜಿಕ ಜಾಲತಾಣದ ಸದಸ್ಯನಾದ. ಒಂದು ಶಾಂತಿಯುತ ಕ್ರಾಂತಿ ನಡೆದು 2014 ರಲ್ಲಿ  ದೇಶದಲ್ಲಿ ಬದಲಾವಣೆ ಬಂತು. ಸದೈವಶಾತ್ ಭಾರತ ಈಗ ರಾಜಕೀಯವಾಗಿ ಜಾಗೃತ ದೇಶ.

ಈ ಸಂಧಿ ಕಾಲದಲ್ಲಿ ಆಂತರಿಕವಾಗಿ ಭಾರತೀಯತೆಯ ಪರಂಪರೆಯ ವಿರುಧ್ಧ ಮತ್ತು ಪರ ವಾದಗಳು ಜಾಗೃತವಾದವು .ಎಡ ಬಲ ಪಂಥಗಳು ಜಾಲತಾಣದಲ್ಲಿ ಬೀದಿಗಿಳಿದವು. ಗೋ ಕಳುವು, ಹತ್ಯೆ, ಭಕ್ಷಣಗಳ ನಾಟಕ ಪ್ರದರ್ಶನಗಳು, ತತ್ಕಾರಣವಾಗಿ ಮನುಷ್ಯರ ಜೀವಹರಣ, ಮಾಕ್ ರೇಪ್ ಗಳು ನಡೆದವು, ಎಲ್ಲದರಲ್ಲೂ ರಾಜಕೀಯ ಬೇಟೆಯಾಡುವವರ ಫೋಟೋ ಶೂಟ್ ಎಲ್ಲಾ ನಡೆದವು. ಒಂದು ಕಡೆಯಿಂದ ಸೋನಿಯಾಳನ್ನು ಸೋಲಿಸಿ ಪಕ್ಕಕ್ಕೆ ತಳ್ಳಿದ ಮೋದಿ ವಿರುಧ್ಧ ಕುರುಡು ದ್ವೇಷದಿಂದಾಗಿ ಭಾರತದ ರಾಷ್ಟ್ರೀಯತೆ, ಪರಂಪರೆ, ಸಂಸ್ಕೃತಿ, ಹಿಂದುತ್ವ, ಪುರಾಣಗಳು, ಸಾಮಾಜಿಕ ನೀತಿ ನ್ಯಾಯಗಳು, ಭಾರತೀಯರ ಅಸಹಿಷ್ಣುತೆ ಇವೆಲ್ಲವುಗಳ ಮೇಲೆ  ಭರ್ತ್ಸನೆಗಳ ಸುರಿಮಳೆ ಆಯ್ತು. ಪ್ರತ್ಯುತ್ತರ ಬಂದರೂ ಪರಂಪರೆಯ ವಿರೋಧಿಗಳದ್ದೇ ಆರ್ಭಟ ಜಾಸ್ತಿ ಆಯ್ತು. ಈ ಬ್ಲಾಗ್ ನ ಸ್ಥೂಲವಾದ ಉದ್ದೇಶ ಇಷ್ಟೇ. ಭಾರತ ಪ್ರಗತಿಪರವಾಗಿ ಮುಂದುವರಿಯಬೇಕಾದಲ್ಲಿ ವಾಸ್ತವಿಕ, ವೃತ್ತಿಪರ ಮತ್ತು ವಿಶ್ವಾಸಾರ್ಹ ನಾಯಕತ್ವ ಬೇಕು. ಅಂಧಾಭಿಮಾನ ಈವತ್ತು ಅಪ್ರಸ್ತುತ. ದೀರ್ಘಕಾಲದ ಸಕಾರಾತ್ಮಕ ಪ್ರಯೋಜಕತೆ ಒದಗಿಸದೇ  ಬದಲಿಗೆ ಋಣಾತ್ಮಕ ಶಾಪಗಳನ್ನು ಬಿಟ್ಟು ಹೋದ  ಆದರೂ ಇಂದಿಗೂ ಪೂಜೆಗೊಳ್ಳುತ್ತಿರುವ  ಗಾಂಧೀ, ನೆಹರು ದೇವರುಗಳನ್ನು ಜಗುಲಿಯಿಂದ ಇಂದು ಇಳಿಸಬೇಕಾಗಿದೆ. ಅಧಿಕಾರಪ್ರವೃತ್ತಿಯ ಇಂದಿರಾ, ಭೃಷ್ಟ ರಾಜೀವ, ವಿದೇಶೀ ಕುತಂತ್ರದ ಸೋನಿಯಾ ಈಗ ಇಲ್ಲಿ ಸಲ್ಲಬೇಕಿಲ್ಲ . ಈಗ ಏನಿದ್ದರೂ ಮೋದಿ, ಯೋಗಿ ಅಂಥ ರಾಜರ್ಷಿಗಳು , ಫಕೀರರು, ಪ್ರಾಮಾಣಿಕ, ಧರ್ಮದರ್ಶಿ, ಕಾರ್ಯಶೀಲ ಮತ್ತು ಫಲಪ್ರದಾಯಿ ನಾಯಕರೇ ಆತ್ಯವಶ್ಯಕ. ಇವರಿಬ್ಬರನ್ನು ನಾವು ಒಂದೆರಡು ಮೂರು ಅವಧಿಗೆ ಆಳುವದಕ್ಕೆ ಬಿಟ್ಟರೆ ಇಂಥ ನಾಯಕತ್ವವೇ ಭಾರತಕ್ಕೆ ಅಭ್ಯಾಸವಾದೀತು ; ಇಂಥ ನಾಯಕರೇ ಇನ್ನೂ ಹುಟ್ಟಿಕೊಂಡಾರು. ಪರಿವಾರ ತೊಲಗಿ ಕಾಂಗ್ರೆಸ್ಸು ಒಂದು ಪ್ರಜಾಪ್ರಭುತ್ವದ ಪರ್ಯಾಯ ಪಕ್ಷವಾಗಿ ಮರುಜನ್ಮ ಪಡೆದೀತು. ಹಾಗಾಗಿ ಇದು ಭಾರತಕ್ಕೆ ಸಂಕ್ರಮಣ ಕಾಲ.

ಅಧಿಕಾರ ಕೈ ಬಿಟ್ಟ ಮೇಲೆ ಸಕಾರಾತ್ಮಕವಾಗಿ ಯೋಚಿಸಿ  ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯ ಮಾಡುವಂಥ ಸಂಸ್ಕೃತಿ, ಪ್ರಬುಧ್ಧತೆಗಳು ಸೋನಿಯಾ ಅವರಿಗೆ ಇದ್ದ ಹಾಗಿಲ್ಲ. ಮೋದಿಯವರ ವಿಕಾಸಶೀಲ ಆಡಳಿತಕ್ಕೆ ಸಂಪೂರ್ಣ ಅಡೆತಡೆಗಳನ್ನು ಒಡ್ಡುತ್ತ ಹೋದರು. ಅಧಿಕಾರ ಕಳೆದು ಕೊಂಡಿದ್ದಕ್ಕಾಗಿ ಅವರ ಹತಾಶ ಭಾವ ಯಾವ ಮಟ್ಟಕ್ಕೆ ಹೋಯಿತೆಂದರೆ  ದೇಶ ವಿರೋಧಿ ನಿಲುವು ತಾಳಲೂ ಹಿಂಜರಿಯಲಿಲ್ಲ. ಈಗ ಮತ್ತೆ 2019 ರ ಸಾರ್ವತ್ರಿಕ ಚುನಾವಣೆ ಬಂದೇ ಬಿಟ್ಟಿತು. ಕಾಂಗ್ರೆಸ್ಸಿನ ಮತ್ತು ಅವರ ಎಡ ಪಕ್ಷಗಳ ಕುತಂತ್ರದ ಆಟ ಮತ್ತು ನಕಲಿ ಸುದ್ದಿಗಳ ಮಹಾಪೂರವೇ ಬರುತ್ತಲಿದೆ. ಅಧಿಕಾರ ಮರಳಿ ಪಡೆಯುವದಕ್ಕೆ ದೇಶದ ಹಿತ ಮಾರಲೂ ಅವರು ಸಿಧ್ಧವಾಗಿದ್ದಾರೆ. ಅವರು ತಮ್ಮ ಅನುಕೂಲಕ್ಕೆ ಸತ್ಯಗಳನ್ನು ಮುಚ್ಚಿಡುತ್ತ ನಿರಾಧಾರವಾದ ಸುಳ್ಳುಗಳನ್ನು ಹೆಣೆಯುತ್ತ ಹೋಗುತ್ತಾರೆ. ಹಾಗೆ ಮಾಡುವದಕ್ಕೆ ಅವರಿಗೆ ಯಾವ ವಿಶೇಷ ಸಿಧ್ಧತೆ ಬೇಕಾಗುವದಿಲ್ಲ. ಅವರ ಬೆನ್ನಿಗೆ ಬಹುತೇಕ  ಆಂಗ್ಲ ಮಾಧ್ಯಮವಿದೆ . ಸ್ವದೇಶ ವಿರೋಧಿ ಆಂತರಿಕ ಮತ್ತು ಭಾರತ ವಿರೋಧಿ ಬಹುದೇಶೀಯ ಶಕ್ತಿಗಳು ಇವೆ. 1947 ರಿಂದ ಏಳು ದಶಕಗಳ ವರೆಗೆ ಜನತೆಯನ್ನು ಲಘುವಾಗಿ  ತೆಗೆದುಕೊಂಡ ನಿಲುವಿನಲ್ಲಿಯೇ ಅವರು ಮುಂದುವರಿಯುತ್ತಾರೆ.  ಇದಕ್ಕೆ ಪ್ರತಿಕ್ರಿಯೆಯಾಗಿ ಮೋದಿಯವರ ಸಮರ್ಥಕರು ಕೂಡ ಆ ಕಾಂಗ್ರೆಸ್ಸ್ ಗುಲಾಮರ  ಒಂದು ಶಬ್ದಕ್ಕೆ ಪ್ರತಿಶಬ್ದ , ಒಂದು ವಾಕ್ಯಕ್ಕೆ ಪ್ರತಿವಾಕ್ಯ ಕೊಡುತ್ತ ಹೋದರೆ ಅವರಿಗೂ ಇವರಿಗೂ  ಏನೂ ಭೇಧವಿರುವದಿಲ್ಲ. ಸತ್ಯಕ್ಕೂ ಕೂಡ ಒಳ್ಳೆಯ ಸಾಕ್ಷಿಯ ಆವಶ್ಯಕತೆ ಇರುತ್ತದೆ. ಜನರಿಗೆ ಮನದಟ್ಟಾಗುವಂತೆ ಬಿಂಬಿಸಬೇಕಾದರೆ  ಹಿನ್ನೆಲೆಯ ಅಧ್ಯಯನ ತುಂಬಾ ಮಹತ್ವದ್ದಾಗಿರುತ್ತದೆ. ಈ ದಿಶೆಯಲ್ಲಿ  ಈ ಬ್ಲಾಗ್ ಒಂದು ಪ್ರಯತ್ನ ಅಷ್ಟೇ .

ಇದು ಒಂದು ಚುನಾವಣೆಗೆ ಮಾತ್ರ ಸೀಮಿತವಾದ ಪ್ರಶ್ನೆ ಅಲ್ಲ. ಇಲ್ಲಿಯ ವರೆಗಿನ  ಭಕ್ತಿಯೋಗ, ಸುಲಭ ನಂಬಿಕೆ, ಭಾವನಾತ್ಮಕ ಅಭಿಮಾನ, ನಿರ್ಲಕ್ಷತೆ ಮತ್ತು ನಿಷ್ಕ್ರೀಯತೆಗಳು ಸಾಕು. ಯಾವ ಪಕ್ಷ, ಯಾವ ನಾಯಕ, ಯಾವ ಆಡಳಿತ ನಮಗೆ, ನಮ್ಮ ದೇಶಕ್ಕೆ ಹಿತಕಾರಿ ಅಂತ ತಿಳಿದುಕೊಂಡು ನಿರ್ಧರಿಸಲು ನಮ್ಮ ರಾಷ್ಟ್ರದ ಅಸ್ಮಿತೆಯನ್ನು ಅರ್ಥ ಮಾಡಿಕೊಳ್ಳುವದು ಅತ್ಯವಶ್ಯಕ. ಭೂತ, ವರ್ತಮಾನ ಮತ್ತು ಭವಿಷ್ಯಗಳ ಜ್ಞಾನ, ತಿಳುವಳಿಕೆಗಳು ಮಹತ್ವದ್ದು. ರಾಹುಲ್ ಗಾಂಧಿಯಂತೆ ಏನನ್ನೂ ತಿಳಿದುಕೊಳ್ಳದೆ ಕೊನೆಗೆ ತನ್ನ ಹಿಂದಿನ ತಲೆಮಾರುಗಳು ದೇಶವನ್ನು ಕೊಳ್ಳೆ ಹೊಡೆದ ವಾಸ್ತವ ತನಗೆ ಗೊತ್ತೇ ಇಲ್ಲ ಎಂದು ನಟಿಸುತ್ತ ಅಂಥದೇ ಅಪವಾದಗಳನ್ನು ನಿರಪರಾಧಿ ವಿರೋಧಿಗಳ ಮೇಲೆ ಹೊರಿಸುತ್ತ ಹೇಳಿದ್ದೇ ಹೇಳುವ ಕಿಸುಬಾಯಿ ದಾಸನಾಗಿ ಉಳಿದರೆ ಪ್ರಯೋಜನವಿಲ್ಲ.

ಬರಿಯೇ ಮೋದಿಯವರ ಮೇಲಿನ ಅಭಿಮಾನದಿಂದ ಕೆಲಸ ಮಾಡದೆ, ಭಾರತವರ್ಷವನ್ನು ನಿಜವಾಗಿ ಅರ್ಥ ಮಾಡಿಕೊಂಡು ಸಮರ್ಥಿಸುವದು ಮುಖ್ಯ . ಯಾಕೆಂದರೆ ನಮ್ಮ ಈ ದೇಶಪ್ರೇಮ ಮತ್ತು ಸೇವೆ ಚುನಾವಣೆಗಳ ಆಚೆ ಹೋಗುವದು ಆವಶ್ಯಕ. ಯಾವ ಪಕ್ಷಕ್ಕೂ ನಾವು ಬಧ್ಧರಾಗಿರಬೇಕಿಲ್ಲ.ಹಾಗಂತ ನಾವು ಪಕ್ಷಕ್ಕೆ ಹೊರತಾಗಿ ಒಳ್ಳೆಯ ಅಭ್ಯರ್ಥಿಗೋ ಅಥವ NOTA ಕ್ಕೊ ವೋಟು ಹಾಕಿ ಜನಪ್ರತಿನಿಧಿ ಸಭೆಗಳನ್ನು ತ್ರಿಶಂಕು ಮಾಡುವಂತೆಯೂ ಇಲ್ಲ.   ನಮಗೆ ದೇಶದಲ್ಲಿ ಆರೋಗ್ಯಕರ ಪ್ರಜಾಪ್ರಭುತ್ವ ಬಂದರೆ ಸಾಕು. ಎಲ್ಲಾ ರಾಜಕೀಯ ಪಕ್ಷಗಳು ನಮ್ಮ ದೇಶಕ್ಕೆ ಬೇಕು ಆದರೆ ಅವುಗಳಲ್ಲಿ ನಮ್ಮ ದೇಶಕ್ಕೆ, ನಮ್ಮ ಜನಕ್ಕೆ ಪ್ರಾಮಾಣಿಕವಾಗುವಂಥ  ಬದಲಾವಣೆ ಬಂದರೆ ಸಾಕು.

ನಾವು,ಭಾರತ ದೇಶದ ಗೌರವ ಕಾರ್ಯಕರ್ತರು, ಭಾರತದ ಪರಂಪರೆ, ಸಂಸ್ಕೃತಿ, ಹಿಂದುತ್ವ, ಇತಿಹಾಸ, ಪುರಾಣದಲ್ಲಿ ಈವತ್ತಿಗೂ ಪ್ರಸಕ್ತವಾಗುವ ನಿತ್ಯ ಸತ್ಯಗಳು, ತತ್ವಜ್ಞಾನ, ಜೀವನ ದೃಷ್ಟಿ , ಸಾಹಿತ್ಯಗಳನ್ನು ಹಂಸಕ್ಷೀರ ರೀತಿಯಲ್ಲಿ ಅಧ್ಯಯನ ಮಾಡಬೇಕು.ಒಳ್ಳೆಯದನ್ನು ಸ್ವೀಕರಿಸಬೇಕು.ಆದರಿಸಬೇಕು. ಹೇಳಿ ಬರೆಯಿಸಿದ್ದ ಆಸತ್ಯಗಳು, ತಿರುಚಿದ ಇತಿಹಾಸಗಳು ನಮಗೆ ಬೇಡ.

ಶತಮಾನಗಳಿಂದ ಮೊಘಲರು, ಬ್ರಿಟಿಷರು, ನಮ್ಮ ಪ್ರಾಚೀನ ಭಾರತದಿಂದ ಸರ್ವ ತರಹದ ಸಂಪತ್ತು ಸೂರೆ ಹೊಡೆದಿದ್ದಾರೆ. ಮಂದಿರ, ಗುರುಕುಲ, ವಿಶ್ವವಿದ್ಯಾಲಯಗಳನ್ನು ನೆಲಸಮ ಮಾಡಿದ್ದಾರೆ. ಕೃಷಿ ಮತ್ತು ಶಿಕ್ಷಣ ಪಧ್ಧತಿಗಳನ್ನು ನಾಶ ಪಡಿಸಿದ್ದಾರೆ. ನಮ್ಮವರೇ ಆಗಿದ್ದವರೂ ಬಹುಕಾಲ ಆಳಿದವರೂ  ಸ್ವಾತಂತ್ರ್ಯ ಹೋರಾಟದ ಸುತ್ತ ಮುತ್ತ ಅಧಿಕಾರಕ್ಕೆ ಹೊಂಚು ಹಾಕಿ ದೇಶದ ಭವಿಷ್ಯವನ್ನೇ ಹಾಳು ಮಾಡಿದ್ದಾರೆ. ಆ ಬಗ್ಗೆ ಸುಳ್ಳು ಇತಿಹಾಸ ಬರೆಸಿದ್ದಾರೆ. ನಮ್ಮ ದೇಶದ ಭಾಗಗಳನ್ನು ವೈರಿ ದೇಶಗಳಿಗೆ ಎತ್ತಿ ಕೊಟ್ಟಿದ್ದಾರೆ. ಉದ್ದೇಶಪೂರ್ವಕವಾಗಿ ಸ್ವಂತ ಕೈಯಾರೆ ಅನಧಿಕೃತ  ಸಂವಿಧಾನ ಬರೆಯಿಸಿ  ಇನ್ನೂ ಕೆಲವು ಆಂತರಿಕ ಪ್ರದೇಶಗಳನ್ನು ಅತಂತ್ರ ಮಾಡಿ ಇಟ್ಟಿದ್ದಾರೆ.  ಧರ್ಮ, ಜಾತಿ, ಭಾಷೆ, ಪ್ರದೇಶಗಳ ಮಟ್ಟದಲ್ಲಿ ಸಮಾಜವನ್ನು ಒಡೆದು ಹಾಕಿದ್ದಾರೆ. ಇತ್ತೀಚಿಗೆ ವೋಟಿನ ಬೇಟೆಯಲ್ಲಿ  ನಮ್ಮ ದೇಶದ ಆಂತರಿಕ ರಕ್ಷಣೆ ಮತ್ತು ಸಾರ್ವಭೌಮತ್ವಗಳ ಜೊತೆಯಲ್ಲೇ ರಾಜಿ ಮಾಡಿಕೊಳ್ಳಲು ಸಿಧ್ಧರಾಗಿದ್ದಾರೆ. ಮೊದಲಿನಿಂದಲೂ ಭಾರತ ಭಂಜನೆ ಎಂಬ ಒಂದೇ ಉದ್ದೇಶ ಇಟ್ಟುಕೊಂಡ ಕಮ್ಯುನಿಸ್ಟರು ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ, ಮಾಧ್ಯಮದಲ್ಲಿ ಕೊನೆಗೆ ನ್ಯಾಯಾಸ್ಥಾನಗಳಲ್ಲೂ ನುಸುಳಿಕೊಂಡು ಹಿತಶತ್ರುಗಳು  ಆಗಿದ್ದಾರೆ. ಕಾಡಿನಲ್ಲಿ, ನಾಡಿನಲ್ಲಿ ನಕ್ಸಲರ, ಮಾವೋವಾದಿಗಳ ಸೈನ್ಯಗಳನ್ನು ಸ್ಥಾಪಿಸಿದ್ದಾರೆ. ಪ್ರಗತಿಪರ, ಉದಾರ  ನೀತಿಯವರು ಎಂದು ಹೇಳಿಕೊಂಡು ಬರಹಗಾರರು, ಕಲಾಕಾರರು ತಮ್ಮನ್ನು ತಾವೇ ಬುಧ್ಧಿಜೀವಿಗಳೆಂದು ಘೋಷಿಸಿಕೊಂಡು ರಾಜಾಶ್ರಯ ಪಡೆದು, ಪರಂಪರೆಯ ಎಲ್ಲ ಸ್ವರೂಪಗಳಿಗೂ ಅಲರ್ಜಿ ಬೆಳೆಸಿಕೊಂಡು ಅದನ್ನೇ ಹೊಸ ಫ್ಯಾಷನ್ ಅಂದುಕೊಂಡು ಅನುಸರಿಸುತ್ತಿದ್ದಾರೆ. ಇವರು ಲಾರ್ಡ್ ಮೆಕಾಲೆಯು ತರಬೇತಿ ಕೊಟ್ಟವರ ಮರಿಮಕ್ಕಳು. ಈ ಮೇಲಿನ ಅಧಿಕಾರ ಪಿಪಾಸು ರಾಜಕೀಯ ಪಕ್ಷಗಳ  ವಿಕ್ಷಿಪ್ತತೆಗೆ ಜೈ ಅಂತಾರೆ. ಅದೇ ರೀತಿಯಲ್ಲಿ ಸಮಾಜ ಸೇವಕರ ವೇಷ ಧರಿಸಿ  NGO ಅಂತ ಬೋರ್ಡ್ ಹಾಕಿಕೊಂಡು ಬಹುರಾಷ್ಟ್ರೀಯರ ಪರವಾಗಿ ಬೇಹುಗಾರಿಕೆ ಮಾಡುವವರೂ ಇದ್ದಾರೆ. ಇಂಥ ಪರಂಪರೆಗಳ ಮತ್ತು ದೇಶದ ವಿರುಧ್ಧದ ಶಕ್ತಿಗಳ ವಿರುಧ್ಧ ಹೋರಾಡಬೇಕಾದರೆ ನಾವುಗಳು ಒಳ್ಳೆಯ ಶಸ್ತ್ರಾಭ್ಯಾಸ ಮಾಡಬೇಕಾಗುತ್ತದೆ. ಸತ್ಯ, ವಾಸ್ತವ ಮತ್ತು ದಾಖಲೆಗಳೇ ನಮ್ಮ ಅಸ್ತ್ರಗಳು. ನಮ್ಮ ಪರಂಪರೆಯ ಬಗೆಗೆ ಯಥಾರ್ಥ್ ಜ್ಞಾನ ನಮ್ಮ ಬತ್ತಳಿಕೆಗಳನ್ನು ತುಂಬಬೇಕಾಗಿದೆ.

ನಮಗೆ ನಮ್ಮ ರಾಷ್ಟ್ರದ ಪರಂಪರೆಯ ಅಲ್ಪಸ್ವಲ್ಪ ಜ್ಞಾನ ಸಿಕ್ಕುವದು ಆ ವಿಷಯಗಳ ಬಗ್ಗೆ ಲಭ್ಯವಿರುವ ಗ್ರಂಥಗಳಿಂದ. ಓದದವರೆ ಜಾಸ್ತಿ. ಓದುವವರು ಕಡಿಮೆ. ಓದುವವರಿಗೆ ಪುಸ್ತಕ ಸಿಕ್ಕುವದೂ ಇಂಥ ಬರೆಯಿಸಿದ ಅಧಿಕೃತ ಇತಿಹಾಸದ್ದೇ. ಇಲ್ಲಾ ಕೆಲವು ರಾಷ್ಟ್ರೀಯ ಸಂಸ್ಥೆಗಳ ಸಮಾರಂಭಗಳಲ್ಲಿ ಭಾಗವಹಿಸಿದಾಗ ಅಲ್ಲಿ ಪ್ರದರ್ಶಿಸಿದ ಪುಸ್ತಕಗಳಿದ್ದರೆ ಯಾವುದೋ ಒಂದನ್ನು ಎತ್ತಿಕೊಳ್ಳುತ್ತೇವೆ . ಅದೇ ನಮಗೆ ಪೂರ್ತಿ ವಿವರದ ಮಾಹಿತಿ ಕೊಡುತ್ತದೆಂದು ಹೇಳಲಿಕ್ಕಾಗುವದಿಲ್ಲ. ಯಾರಾದರೂ ಮೊದಲೇ ಓದಿ ವಿಮರ್ಶಿಸಿ ಇದೊಂದು ನೈಜ ಚಿತ್ರ ಕೊಡುವ ಪುಸ್ತಕ ಅಂತ ಹೇಳಿದರೆ ಈ ಸಂಧಿಗ್ಧತೆ ದೂರವಾಗುತ್ತದೆ. ಆ ಕೊರತೆಯನ್ನು ನೀಗಿಸಬೇಕು ಎಂಬ ಉದ್ದೇಶದಿಂದ ಈ ಬ್ಲಾಗ್ ನ್ನು ಬರೆಯಲು ಉದ್ಯುಕ್ತನಾಗಿದ್ದೇನೆ.

ನಮ್ಮ ಇತಿಹಾಸಕಾರರಲ್ಲಿ ಪಾಶ್ಚಾತ್ಯ ದೃಷ್ಟಿಕೋನದಿಂದ ಬರೆದವರು ಯಾರು, ಸ್ವಂತ ಪರಂಪರೆಯ ದೃಷ್ಟಿಕೋನದಿಂದ ಯಥಾರ್ಥ ಇತಿಹಾಸ ಸೃಷ್ಟಿಸಿದವರು ಯಾರು ಮತ್ತು ಉದ್ದೇಶಪೂರ್ವಕವಾಗಿ ಸುಳ್ಳು ಇತಿಹಾಸ ಸೃಷ್ಟಿಸಿದವರು ಯಾರು ಅಂತ ಲಭ್ಯ ಸಂಶೋಧನೆ ಮಾಧ್ಯಮಗಳ ಸಹಾಯದಿಂದ  ಅಭ್ಯಾಸ ಮಾಡಿ ಈ ವೇದಿಕೆಯ ಮೂಲಕ ಸಂಕ್ಷಿಪ್ತವಾಗಿ  ಹಂಚಿಕೊಳ್ಳಬೇಕು ಎಂದುಕೊಂಡಿದ್ದೇನೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಲೇಖಕರು ಮತ್ತು ಅವರ ಕೃತಿಗಳನ್ನು ಕಲೆ ಹಾಕಿದ್ದೇನೆ.  ಆಯ್ದ ಟೈಟಲ್  ಅಥವಾ ಪುಸ್ತಕಗಳನ್ನು ಒಂದೊಂದಾಗಿ ಓದಿ, ಆ ಬಗ್ಗೆ ಸಂಕ್ಷಿಪ್ತವಾಗಿ ಆದರೂ ಸಾಧ್ಯವಾದಷ್ಟು ಪೂರ್ತಿ ವಿಷಯ ಕವರ್ ಆಗುವಂತೆ ಲೇಖನ ಬರೆದು ಈ ಮಂಚದ ಮೇಲೆ ಹಂಚಿಕೊಳ್ಳಬೇಕೆಂದುಕೊಂಡಿದ್ದೇನೆ.  ಪ್ರತಿ ಲೇಖನದ ಕೊನೆಗೆ ಅನುಸರಿಸಿದ / ಅಭ್ಯಸಿಸಿದ ಮೂಲ ಪುಸ್ತಕದ ಶೀರ್ಷಿಕೆ, ಲೇಖಕ ಮತ್ತು ಪ್ರಕಾಶಕರ ಹೆಸರುಗಳ ಉಲ್ಲೇಖ ಇರುತ್ತದೆ. ಈ ಲೇಖನಗಳ ಓದುಗರಿಗೆ ಯಾವುದೇ ಟೈಟಲ್ ಅಥವಾ  ಪುಸ್ತಕದಲ್ಲಿ ವಿಶೇಷ ಆಸಕ್ತಿ ಹುಟ್ಟಿದರೆ ತಾವೇ ಆ ಪುಸ್ತಕ ಕೊಂಡುಕೊಂಡು ವಿವರವಾಗಿ ಅಧ್ಯಯನ ಮಾಡಬಹುದಾಗಿದೆ.

ಸಂಭಾವ್ಯ ಲೇಖನಗಳ ಪಟ್ಟಿ ಗುರುತು ಹಾಕಿಕೊಂಡಿದ್ದಲ್ಲದೆ ಆ ಪ್ರತಿಯೊಂದು ಲೇಖನಕ್ಕೂ  ರೆಫರೆನ್ಸ್ ಮೆಟೀರಿಯಲ್ ಆಯ್ದುಕೊಂಡಿದ್ದೇನೆ, ನಾನು ಆಯ್ದು ಕೊಂಡದ್ದು ಮುಖ್ಯವಾಗಿ ನಿಷ್ಪಕ್ಷ ಯಥಾರ್ಥವಾದೀ ಪುಸ್ತಕಗಳಲ್ಲದೆ ಇನ್ನೂ ಖ್ಯಾತ ರಾಷ್ಟ್ರೀಯ ಲೇಖಕರ ಕೆಲವು ಪುಸ್ತಕಗಳು. ಮತ್ತು ನೈಜ , ಸ್ವದೇಶೀ ದೃಷ್ಟಿಕೋಣದ, ವಾಸ್ತವಿಕ ಇತಿಹಾಸ ಒಳಗೊಂಡ ಗೂಗಲ್ ನ / ವಿಕಿಪೀಡಿಯಾದ ಬರಹಗಳು.

ಇಲ್ಲಿ ಸ್ಪಷ್ಟಪಡಿಸಬೇಕಾದ ವಿಚಾರ. ಭಾರತ ಒಂದು ಬ್ರಹ್ಮನೆಟ್ಟ ದೊಡ್ಡಾಲದ ಮರ. ಅದರ ಬೇರುಗಳು ಬಿಳಲುಗಳು ವಿಶಾಲ, ದಟ್ಟ ಮತ್ತು ಎತ್ತರ. ಅದರೆದುರು ನನ್ನಂಥವ ತೃಣಸಮಾನ.  ಭಾರತೀಯ ಸಂಪ್ರದಾಯ, ಸಂಸ್ಕೃತಿ, ಧರ್ಮ,ತತ್ವಜ್ಞಾನ ಮತ್ತು ಇತಿಹಾಸ ಒಂದು ಅಪಾರವಾದ ಸಾಗರ. ನಾವು ಹನಿ ಹನಿ  ಕುಡಿದು ಬೆಳೆದವರು. ಆ ಭವ್ಯತೆಯ ಎದುರು ನಾನು ಓದಲು ಬರೆಯಲು ಬರೀ  ಅಕ್ಷರಜ್ನಾನವನ್ನಷ್ಟೇ ಕಲಿತ ಒಬ್ಬ ಎಲ್ ಕೇ ಜೀ ವಿದ್ಯಾರ್ಥಿ ಇದ್ದಂತೆ. ನನ್ನ ಅಧ್ಯಯನ ಗುರುಕುಲಗಳ ಮಟ್ಟಿಗಿನದಲ್ಲ. ಒಂದು ಮೂಲ ಪುಸ್ತಕ ಓದಿ ಸಂಕ್ಷಿಪ್ತವಾಗಿ ಭಟ್ಟಿ ಇಳಿಸಿದ್ದು. ಹಸಿ ಬಿಸಿ ಇದ್ದೀತು. ಉಪ್ಪುಖಾರ ಜಾಸ್ತಿ ಕಮ್ಮಿ ಇದ್ದೀತು. ವಿದ್ವಾಂಸರು ಓದಿ ತಿದ್ದಬೇಕು. ಸಮತಿಳುವಳಿಕೆಯ ಸ್ನೇಹಿತರು ಪ್ರಶ್ನಿಸಿ, ಚರ್ಚಿಸಿ ವಿಷಯವನ್ನು ನಿಖರಗೊಳಿಸಬೇಕು. ಅಂಥ ಸಂದರ್ಭದಲ್ಲಿ ಮಾತ್ರ ಈ ಪ್ರಯತ್ನ ಸಾರ್ಥಕವಾದೀತು. ಆ ಹಿರಿಯರ ಆಶಿರ್ವಾದ, ಓದುಗರ ಸಹಕಾರದ ಆಕಾಂಕ್ಷಿ . ಮತ್ತು ಈ ಮೂಲಕ ನನ್ನ ಜೀವಮಾನದ ಸಾರ್ಥಕತೆಗೆ ಅಭ್ಯರ್ಥಿ.

ಜೈ ಹಿಂದ್ .

Leave a Reply

Discover more from Heritage of Bharat ಭಾರತದ ಪರಂಪರೆ

Subscribe now to keep reading and get access to the full archive.

Continue reading