II. 01      ಭಾರತದ ಪರಂಪರೆ, ಸಂಪ್ರದಾಯ ಮತ್ತು ಸಂಸ್ಕೃತಿ

  1. ಪರಂಪರೆ : ಅನಾದಿಕಾಲದಿಂದ  ಹಸ್ತಾಂತರವಾಗಿ ಬಂದ ಜನರ ಅಭ್ಯಾಸಗಳಿಗೆ ಪರಂಪರೆ ಅನ್ನಬಹುದು. ಪುರಾತನರಿಂದ ಆನುವಂಶಿಕವಾದ ರೀತಿಯಲ್ಲಿ ಬಂದ ಯಾವುದೇ ಗುಣಲಕ್ಷಣ ಅಥವಾ ಸ್ವತ್ತು  ಈ ಸಾಲಿಗೆ ಸೇರುತ್ತದೆ. ಭೌತಿಕವಾಗಿ ಭೂಮಿ, ಕಟ್ಟಡ, ಹಕ್ಕು, ಗ್ರಂಥ, ಕಲಾವಸ್ತುಗಳು ಅಥವಾ ಸಾಂಸ್ಕ್ರುತಿಕವಾಗಿ ಜ್ಞಾನ, ಭಾಷೆ, ಜಾನಪದ ಗೀತೆ ಮುಂತಾದವುಗಳನ್ನೂ ಪರಂಪರಾಗತ ಆಸ್ತಿ ಅನ್ನಬಹುದು.
  2. ಸಂಪ್ರದಾಯಗಳು : ಪರಂಪರಾಗತವಾಗಿ ಬಂದ ವಿಚಾರ ಮತ್ತು ಕ್ರಿಯೆಗಳ ಮಾದರಿಗಳಿಗೆ ಸಂಪ್ರದಾಯಗಳು  ಅಂತ ಹೇಳುತ್ತಾರೆ. ದೀರ್ಘಕಾಲ ರೂಢಿಯಲ್ಲಿದ್ದ ಯಾವುದೇ ಆಚರಣೆ ಸಂಪ್ರದಾಯವೆನ್ನಿಸಿಕೊಳ್ಳುತ್ತದೆ. ಒಂದು ಸಮುದಾಯ ಅಥವಾ ಸಮಾಜಕ್ಕೆ ಬಳುವಳಿಯಾಗಿ ಬಂದ ಯಾವುದೇ ನಂಬಿಕೆ ಅಥವಾ ನಡವಳಿಕೆ ಸಂಪ್ರದಾಯವಾಗುತ್ತದೆ. ಪದೇ ಪದೇ ಕೈಗೊಂಡದ್ದಲ್ಲದೆ ಕಾನೂನು ಪ್ರಕಾರ ಸರಿ ಅಂತ ಒಪ್ಪಿತವಾದ ಯಾವುದೇ ಸ್ಥಾಪಿಸಲ್ಪಟ್ಟ ಕ್ರಿಯೆ ಅಥವಾ ಆಚರಣೆಯ ರೂಪರೇಷೆ ಸಂಪ್ರದಾಯವಾಗುತ್ತದೆ
  3. ಸಂಸ್ಕೃತಿ : ಒಂದು ಸಮುದಾಯ ಅಥವಾ ಸಮಾಜಕ್ಕೆ ವಿಶಿಷ್ಟವಾದ ಮಾನಸಿಕ ಒಲವುಗಳು ಮತ್ತು ದೈಹಿಕ ವರ್ತನೆಗಳು ಆ ಗುಂಪಿನ ಸಂಸ್ಕೃತಿ ಎನ್ನಿಸಿಕೊಳ್ಳುತ್ತವೆ. ಒಂದು ಸಮುದಾಯ , ಸಮಾಜದ ಒಂದು ಐತಿಹಾಸಿಕ ಅವಧಿಯಲ್ಲಿನ  ಜೀವನದ ರೀತಿ, ತನ್ನ  ಸಾಮಾನ್ಯ ಕ್ರಿಯಾತ್ಮಕ ಪರಂಪರೆಗಳು ಮತ್ತು ನಂಬಿಕೆಗಳ ಸಹಿತ, ಸಂಸ್ಕೃತಿ ಎಂದು ಕರೆಯಿಸಿಕೊಳ್ಳುತ್ತದೆ.
  4. ಸಂಸ್ಕೃತಿ ಅಂದರೆ ಒಂದು ಸಮುದಾಯದ ಇತಿಹಾಸ, ಧರ್ಮ, ಧರ್ಮಾಚರಣೆ , ಒಳಿತು ಕೆಡುಕಿನ ನಂಬಿಕೆಗಳು, ನೀತಿಶಾಸ್ತ್ರ,ಕಾನೂನು, ಕುಟುಂಬ ಜೀವನದ ರೀತಿ, ಸಂಘಟನೆ, ಸಾಮಾಜಿಕ ವ್ಯವಹಾರ ರೀತಿ ನೀತಿಗಳು, ಸಂಪ್ರದಾಯಗಳು, ಪಧ್ಧತಿಗಳು, ಮದುವೆ, ಹಬ್ಬಗಳು, ಅವುಗಳ ಆಚರಣೆ ಮತ್ತು ಸಂಭ್ರಮ, ಅವರ ಆಹಾರ, ಉಡುಗೆ ತೊಡುಗೆ, ಜ್ಞಾನ, ಭಾಷೆ, ಸಾಹಿತ್ಯ, ವಿಜ್ಞಾನ , ತತ್ವಜ್ಞಾನ, ಕಲೆ. ಒಲವುಗಳು ಎಂದು ಮುಂತಾದ ಹಲವು ನೂರಾರು ವಿಷಯಗಳನ್ನು ಒಳಗೊಂಡ ಒಂದು ಗುಂಪಿನ ಜನರ ಅಸ್ಮಿತೆ, ಗುಣಲಕ್ಷಣಗಳು ಮತ್ತು ವರ್ತನೆಗಳ ಒಟ್ಟು ಮಿಶ್ರಣ  ಎಂದು ಹೇಳಬಹುದು. ಸಂಸ್ಕೃತಿ ಅಂದರೆ ಸಮಾಜೀಕರಣದಿಂದ ಕಲಿತುಕೊಳ್ಳುವ ಸಾಮೂಹಿಕ ಲಕ್ಷಣದ ನಡೆವಳಿಕೆಗಳು, ಪರಸ್ಪರ ಅಭಿವ್ಯಕ್ತಿಗಳು , ಅರಿವಿನಿಂದ ಹುಟ್ಟಿದ ಕ್ರಿಯೆಗಳು ಮತ್ತು ತಿಳುವಳಿಕೆಗಳು. ಒಂದು ಜನರ ಗುಂಪಿನ ವಿಶಿಷ್ಟ ಸಾಮಾಜಿಕ ಹಂದರದಡಿ ಒಂದು ಗುಂಪಿನ ಸ್ವಂತ ಅಸ್ಮಿತೆಯು ರೂಪತಾಳುವ ಮತ್ತು ಕಾಲಕಾಲಕ್ಕೆ ಬೆಳೆಯುತ್ತ ಹೋಗುವ ಕ್ರಿಯೆಯೇ ಸಂಸ್ಕೃತಿ.
  5. ಭಾರತೀಯ ಸಂಸ್ಕೃತಿ ಭಾರತದಲ್ಲಿನ ಎಲ್ಲ ಧರ್ಮಗಳ ಸಮುದಾಯಗಳ ಸಾವಿರಾರು ವಿಭಿನ್ನ ಮತ್ತು ವಿಶಿಷ್ಟ ಸಂಸ್ಕೃತಿಗಳ ಸಮ್ಮಿಳನವೆಂದು ಹೇಳಬಹುದು. ಈ ಮೇಲೆ ಹೇಳಿದ ಸಂಸ್ಕೃತಿಯ ವಿಭಿನ್ನ ಅಂಗಗಳು ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿದ್ದರೂ ಅವುಗಳ ಮಧ್ಯೆ ಒಂದು ಸ್ಥೂಲವಾದ ತಂತು ಇದೆ. ವಿವಿಧತೆಯಲ್ಲಿ ಏಕತೆ ಇದೆ. ಈ ಭಾರತೀಯ ಸಂಸ್ಕೃತಿಯ ಸಮ್ಮಿಶ್ರಣ ಇಡಿಯ ಭಾರತದ ಮೇಲೆ ಅಷ್ಟೇ ಅಲ್ಲದೆ ಇಡೀ  ಜಗತ್ತಿನ ಮೇಲೆ ಕೂಡ ಪ್ರಭಾವ ಬೀರುತ್ತದೆ.
  6. ಈ ಲೇಖನದ ಸೀಮಾವೃತ್ತದಲ್ಲಿ ಈ ಮೇಲಿನವುಗಳಲ್ಲಿ  ಕೆಲವು ಸಾಮಾನ್ಯ ವಿಷಯಗಳ ಬಗ್ಗೆ ಚರ್ಚಿಸಿಲ್ಲ. ಇನ್ನು ಕೆಲವು ವಿಷಯಗಳನ್ನು ಇದೇ ಬ್ಲಾಗ್ ನಲ್ಲಿ ಬೇರೆ ಕಡೆಗೆ ವಿವರವಾಗಿ  ಚರ್ಚಿಸಲಾಗುವದು.
  7. ಭಾರತದ ಸಂಕ್ಷಿಪ್ತ ಇತಿಹಾಸ
  8. ಭಾರತದ ಇತಿಹಾಸ ಸಾವಿರಾರು ವರ್ಷಗಳದ್ದು ಮತ್ತು ಪೂರ್ವೇತಿಹಾಸ ನೂರಾರು ಸಾವಿರ ವರ್ಷಗಳದ್ದು. ಒಂದು ದೀರ್ಘ ಕಾಲದ ಶಿಲಾಯುಗದ ಬೇಟೆಯಾಡಿ ಆಹಾರ ಅರಸಿ ಜೀವಿಸುವ ಜನಾಂಗಗಳ ನಂತರದಲ್ಲಿ ಈಗಿನಿಂದ  ಎಂಟು ಹತ್ತು ಸಾವಿರ ವರ್ಷಗಳಿಗೆ ಮುಂಚೆ ಕೃಷಿಪ್ರಧಾನ ವಸತಿಯ ಸಮುದಾಯಗಳು ರೂಪಗೊಂಡವು.
  9. 2700 B.C.E ಕಾಲಕ್ಕೆ ಮೊದಲ ನಾಗರೀಕತೆ ಪಶ್ಚಿಮ ಭಾರತದಲ್ಲಿ ಸಿಂಧೂ ಕೊಳ್ಳದ ಸಂಸ್ಕೃತಿಯಾಗಿ ಕಾಣಿಸಿಕೊಂಡಿತು.  ಅದು 1500B.C.E ನಲ್ಲಿ ಕಣ್ಮರೆಯಾಗಿ ಇಡಿಯ ಭಾರತದ ತುಂಬಾ ಚಿಕ್ಕ ಪುಟ್ಟ ಸಂಸ್ಥಾನಗಳು , ರಾಜ್ಯಗಳು ಹುಟ್ಟಿಕೊಂಡವು, ಇದು ಚಿಕ್ಕ ಪುಟ್ಟ ಕದನಗಳು ಮತ್ತು ಘೋರ ಯುಧ್ಧಗಳ ಪರಂಪರೆಯ ಒಂದು ದೀರ್ಘ ಇತಿಹಾಸವನ್ನೇ ಆರಂಭಿಸಿತು. ವಿಶ್ವದಲ್ಲೇ ವಿಶಾಲ ಧರ್ಮಗಳಾದ ಹಿಂದೂ, ಬೌಧ್ಧ, ಜೈನ ಮತ್ತು ಸಿಖ್ ಧರ್ಮಗಳು ಸ್ಥಾಪಿತಗೊಂಡವು. 272–232B.C.E. ಕಾಲಮಾನದ ಅಶೋಕನ ಸಾಮ್ರಾಜ್ಯ ಮತ್ತು 1526–1707 ರ ಮೊಘಲ್ ಸಾಮ್ರಾಜ್ಯ ಇವುಗಳನ್ನು ಬಿಟ್ಟರೆ ಮುಂದಿನ ಶತಮಾನವೆಲ್ಲ ಬ್ರಿಟಿಶ್ ಸಾಮ್ರಾಜ್ಯದ ಅಧಿಪತ್ಯದಲ್ಲಿ ಇಡಿಯ ಭಾರತ ದೇಶ ಬಂದಿತು.
  10. 2. ಭಾರತೀಯ ಧರ್ಮಗಳು
  11. ಭಾರತದ ಮುಖ್ಯ ಧರ್ಮಗಳಾದ ಹಿಂದೂ, ಜೈನ, ಬೌಧ್ಧ ಮತ್ತು ಸಿಖ್ಖ್ ಎಲ್ಲವೂ  ಧರ್ಮ ಮತ್ತು ಕರ್ಮಗಳ ಪರಿಕಲ್ಪನೆಗಳ ಮೇಲೆ ನಿಂತವುಗಳು. ಅಹಿಂಸೆ ಈ ಧರ್ಮಗಳ ಮೂಲತತ್ವ. ವಿದೇಶೀ ಮೂಲದ ಯೆಹೂದಿ, ಕ್ರಿಶ್ಚಿಯನ್, ಇಸ್ಲಾಂ, ಪಾರಸೀ ಮತ್ತು ಬಹಾಯೀ ಧರ್ಮಗಳೂ ಭಾರತದಲ್ಲಿ ಅಸ್ತಿತ್ವದಲ್ಲಿವೆ. ಆರನೆಯ ಶತಮಾನದ (BCE) ಚಾರ್ವಾಕ ಮಹರ್ಷಿಯ ನಾಸ್ತಿಕತೆ ಕೂಡ ಒಂದು ಧರ್ಮದ ಮಾನ್ಯತೆ ಪಡೆದಿದೆ. ಕೆಲವು ಬುಧ್ಧ ಮತ್ತು ಜೈನ ಪಂಗಡಗಳು ದೇವರ ಸೃಷ್ಟಿ , ಧರ್ಮಾಚರಣೆ ಮತ್ತು ಮೂಢನಂಬಿಕೆಗಳ ಪರಿಕಲ್ಪನೆಗಳನ್ನು ಒಪ್ಪುವದಿಲ್ಲ. 2012ರ  WIN Gallup ಸಂಸ್ಥೆಯ ಜಾಗತಿಕ ಸಮೀಕ್ಷೆಯ ಪ್ರಕಾರ ಭಾರತದಲ್ಲಿ  81 % ಆಸ್ತಿಕರು, 13% ಧರ್ಮದಲ್ಲಿ ನಂಬಿಕೆ ಇಲ್ಲದವರು, 3 % ಘೋಷಿತ ನಾಸ್ತಿಕರು ಮತ್ತು 3% ಪ್ರತಿಕ್ರಿಯೆ ವ್ಯಕ್ತಪಡಿಸದವರೂ ಇದ್ದರು.
  12. ಧಾರ್ಮಿಕ ಚಿನ್ಹೆಗಳು 
  13. ಸ್ವಸ್ತಿಕ ಚಿನ್ಹೆ ಸ್ವಸ್ತಿ ಶಬ್ದದಿಂದ ಬಂದಿದ್ದು ಶುಭ. ಕ್ಷೇಮ ಗಳ ಪ್ರತೀಕ. ದೈವತ್ವ ಮತ್ತು ಆಧ್ಯಾತ್ಮಿಕತೆಯನ್ನು ಪ್ರತಿನಿಧಿಸುತ್ತದೆ. ಸೂರ್ಯನನ್ನು ಪೂಜಿಸುವ ಸಂಕೇತವಾಗಿದೆ. ಸಮೃಧ್ಧಿ ಮತ್ತು ಒಳ್ಳೆಯ ಅದೃಷ್ಟ ಸೂಚಿಸುತ್ತದೆ, ನಾಲ್ಕು ವೇದಗಳನ್ನು ಮತ್ತು ನಾಲ್ಕು ನಕ್ಷತ್ರಪುಂಜಗಳನ್ನು ಸೂಚಿಸುತ್ತದೆ.
  14. ಓಂ ಕಾರ  ಒಂದು ಸನಾತನ ಕಾಲದ ಮಂತ್ರವಾಗಿದ್ದು ಇಡೀ ಬ್ರಹ್ಮಾಂಡವನ್ನು ಪ್ರತಿನಿಧಿಸುತ್ತದೆ. ಇದು ಚಿನ್ಹೆ ಮತ್ತು ಮಂತ್ರವಾಗಿ ಉಪಯೋಗಿಸಲ್ಪಡುತ್ತದೆ. ಇದು ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ಧ್ವನಿ ಎಂದು ಗುರುತಿಸಲ್ಪಡುತ್ತದೆ. ಓಂ ಇದು ಸರ್ವೋಚ್ಚ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ, ಇದು ಸರ್ವವ್ಯಾಪೀ ಸರ್ವ ಶಕ್ತ ಬ್ರಹ್ಮಾಂಡದ ಧ್ವನಿಯಾಗಿದೆ.
  15. ಶ್ರೀ ಕಾರ ಇದು ಪವಿತ್ರತೆ, ಶಕ್ತಿ ಮತ್ತು ಮಾತೃ ದೇವತೆಯನ್ನು ಪ್ರತಿನಿಧಿಸುತ್ತದೆ. ಸಂಪತ್ತು . ಸಂರುಧ್ಧಿಗಳ ಪ್ರತೀಕವಾದ ಶ್ರೀ ಲಕ್ಷ್ಮೀ ದೇವಿಯನ್ನು ಪ್ರತಿನಿಧಿಸುತ್ತದೆ.
  16. 3. ಧರ್ಮಶಾಸ್ತ್ರಗಳು :
  17. ಧರ್ಮಶಾಸ್ತ್ರಗಳು ಅಂದರೆ ಸಂಸ್ಕೃತ ಭಾಷೆಯಲ್ಲಿರುವ ಧರ್ಮದ ಬಗೆಗಿನ ಹಿಂದುತ್ವದ ಶಾಸ್ತ್ರಗಳು. ವೇದ ಕಾಲದಲ್ಲಿ ವೇದಾಂಗ ಎಂಬ ಅಧ್ಯಯನಗಳಿಂದ ಹುಟ್ಟಿಕೊಂಡ ಈ  ಶಾಸ್ತ್ರಗಳು ಸಂಖ್ಯೆಯಲ್ಲಿ ಸುಮಾರು ಹದಿನೆಂಟರಿಂದ ಒಂದು ನೂರರ ವರೆಗೂ ಇವೆ. ಇವುಗಳ ಕಾಲಮಾನ ಸುಮಾರಾಗಿ 1 ನೇ ಸಹಸ್ರಮಾನ BCE. ಪದ್ಯ ರೂಪದಲ್ಲಿರುವ ಹಿಂದೂ ಸ್ಮೃತಿಗಳು ವ್ಯಕ್ತಿಯ ಕರ್ತವ್ಯಗಳು, ಹೊಣೆಗಾರಿಕೆಗಳು, ವೈಯಕ್ತಿಕ, ಕುಟುಂಬ ಮತ್ತು ಸಮಾಜದ ಪ್ರತಿ ಪಾಲಿಸಬೇಕಾದ ನೀತಿ ಸಂಹಿತೆಗಳ ಬಗ್ಗೆ ವಿವರವಾಗಿ ಹೇಳುತ್ತವೆ. ಅಲ್ಲದೆ ಮನುಷ್ಯನ ಜೀವನ ಚಕ್ರದ ಆಶ್ರಮಗಳು, ಸಮಾಜದಲ್ಲಿನ ವರ್ಣ ಪಧ್ಧತಿ, ಜೀವನದ ಗುರಿಯಾದ ಪುರುಷಾರ್ಥ, ವೈಯಕ್ತಿಕ ಗುಣಗಳು, ಕರ್ತವ್ಯಗಳು ಮತ್ತು ಜೀವಿಗಳ ಪ್ರತಿ ಅಹಿಂಸಾಪಾಲನೆ, ಧರ್ಮಯುಧ್ಧ  ಮುಂತಾದವುಗಳ ಬಗ್ಗೆ ನಿರ್ದೇಶಿಸುತ್ತವೆ.  ಭಾರತದ ಚತುರ್ವೆದಗಳಾದ ಋಗ್ವೇದ, ಯಜುರ್ವೇದ,ಸಾಮವೇದ ಮತ್ತು ಅಥರ್ವ ವೇದಗಳಿಂದ ನಿರೂಪಿಸಲ್ಪಟ್ಟ ಧರ್ಮಸೂತ್ರಗಳ ಆಧಾರದ ಮೇಲಿಂದ ಈ ಧರ್ಮಶಾಸ್ತ್ರಗಳನ್ನು ಬರೆಯಲಾಗಿದೆ. ವೇದಗಳಲ್ಲಿ ಪದ್ಯ ರೂಪದಲ್ಲಿರುವದನ್ನು ಗದ್ಯರೂಪದಲ್ಲಿ ಅರ್ಥವಿವರಣೆ ಮಾಡಿ ಉಪನಿಷತ್ ಗಳನ್ನು ಬರೆಯಲಾಗಿದೆ. ಧರ್ಮಸೂತ್ರಗಳು ವೈಯಕ್ತಿಕ ಮತ್ತು ಸಾಮಾಜಿಕ ನಡತೆ,ನೀತಿಕ್ರಮಗಳು ,ವೈಯಕ್ತಿಕ ಕಾನೂನು, ನಾಗರಿಕ ಕಾನೂನು ಮತ್ತು ಅಪರಾಧ ಕಾನೂನಿನ ಮಾರ್ಗದರ್ಶಿ ಪುಸ್ತಕಗಳೆಂದು ಹೇಳಬಹುದು. ವಿವಾಹ ಕಾನೂನು, ಆಸ್ತಿಯ ಉತ್ತರಾಧಿಕಾರ, ರಾಜ್ಯಾಂಗ ಮತ್ತು ನ್ಯಾಯಾಂಗ ಪಧ್ಧತಿಗಳ ಬಗೆಗೆ ಚರ್ಚಿಸುತ್ತವೆ. ಆಚಾರ, ವ್ಯವಹಾರ ಮತ್ತು ಪ್ರಾಯಶ್ಚಿತ್ತಗಳ ಬಗ್ಗೆ ವಿಶದೀಕರಿಸುತ್ತ ಮುಂದುವರಿದು ತನಿಖೆಗಳು, ಕಾನೂನಿನ ಪ್ರಕ್ರಿಯಗಳು ಮತ್ತು ದಂಡ, ಶಿಕ್ಷಾ ಪ್ರಮಾಣಗಳ ಬಗ್ಗೆಯೂ ಹೇಳುತ್ತವೆ.
  18. ಧರ್ಮಶಾಸ್ತ್ರಗಳು ಬ್ರಿಟಿಶ ಆಡಳಿತದ ಭಾರತದಲ್ಲಿ ಬ್ರಿಟಿಶ್ ಅಧಿಕಾರಿಗಳಿಂದ ದೇಶದ ಕಾನೂನು ಎಂದು ಅಂಗೀಕೃತವಾಗಿದ್ದವು. ಅದೇ ರೀತಿ ಶಾರಿಯಾ ಕಾನೂನು ಮುಸ್ಲಿಮ್ಸ್ ಗೆ ಅಧಿಕೃತ ಕಾನೂನು ಆಗಿತ್ತು.
  19. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಹಿಂದೂ ಮತ್ತು ಮುಸ್ಲಿಮೇತರ ಧರ್ಮಗಳಿಗೆ ಧರ್ಮಸಾಸ್ತ್ರಗಳಿಂದ ಹುಟ್ಟಿದ ಕಾನೂನು ರದ್ದು ಮಾಡಲ್ಪಟ್ಟು ಧರ್ಮಾತೀತ ಯುನಿಫಾರ್ಮ್ ಸಿವಿಲ್ ಕೋಡ್ ಎಂಬ ಏಕರೂಪ ನಾಗರಿಕ ಸಂಹಿತೆಯನ್ನೂ, ಆದರೆ ಅದೇ ಮುಸ್ಲಿಮ್ಸ್ ಗೆ ಇಂಡಿಯನ್ ಮುಸ್ಲಿಂ ಪರ್ಸನಲ್ ಲಾ (ಶಾರಿಯಾ) ಆಕ್ಟ್ 1937 ನ್ನೂ ಮುಂದುವರಿಸುವ ನಿರ್ಣಯವನ್ನು 1950 ರಲ್ಲಿ ಭಾರತದ ಪಾರ್ಲಿಮೆಂಟ ಸ್ವೀಕರಿಸಿತು. ಇಂದಿನ ವರೆಗೆ ಇದೇ ಸ್ಥಿತಿ ಮುಂದುವರೆದಿದೆ.
  20. 4. ಕರ್ಮ ಸಿಧ್ಧಾಂತ ಮತ್ತು ನಂಬುಗೆ
  21. ಇಲ್ಲಿ ನಾವು ಕರ್ಮ ಶಬ್ದದ ಅರ್ಥವನ್ನು ಆಧ್ಯಾತ್ಮಿಕ ತಳಹದಿಯಲ್ಲಿ ನೋಡಬೇಕು. ಮೂಲ ಕ್ರಿಯೆ ಮತ್ತು ಅದರ ಪರಿಣಾಮ ಎಂಬ ಸಿಧ್ಧಾಂತದಡಿ, ಒಬ್ಬ ವ್ಯಕ್ತಿಯ ಉದ್ದೇಶ ಅಥವಾ ಆಶಯವೂ ಮತ್ತು ಕ್ರಿಯೆಯೂ ಸೇರಿ ಆ ವ್ಯಕ್ತಿಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಗಣಿಸಬೇಕು. ಸಾಧು ಉದ್ದೇಶ ಮತ್ತು ಸತ್ಕಾರ್ಯಗಳು ಸೇರಿ ಸತ್ಕರ್ಮ ಉಂಟಾಗಿ ಭವಿಷ್ಯದಲ್ಲಿ ಸುಖ, ಸಂತೋಷ ನೀಡುತ್ತವೆ ಅನ್ನುವದೇ ಆ ಸಿಧ್ಧಾಂತ. ಇದಕ್ಕೆ ವಿರುಧ್ಧವಾಗಿ ದುಷ್ಟ ಬುಧ್ಧಿ ಮತ್ತು ದುಷ್ಕಾರ್ಯಗಳು ಭವಿಷ್ಯದಲ್ಲಿ ಕಷ್ಟದಾಯಿ ಆಗುತ್ತವೆ. ಇದೇ ಮುಂದುವರೆದು ಪುನರ್ಜನ್ಮದ ನಂಬಿಕೆಯನ್ನೂ ಪೋಷಿಸುತ್ತದೆ. ಈ ಜನ್ಮದಲ್ಲಿ ಮಾಡಿದ ಕರ್ಮಗಳು ಮುಂದಿನ ಜನ್ಮದಲ್ಲಿ ತಕ್ಕ ಫಲ ನೀಡುತ್ತವೆ ಎಂಬುದೇ ಅದು. ಇದುವೇ ಪುಣ್ಯ ಪಾಪಗಳ ಕಲ್ಪನೆ. ಪುನರ್ಜನ್ಮದ ನಂಬಿಕೆಗೂ ದಾರಿ ಮಾರಿ ಕೊಡುತ್ತದೆ. ಸತ್ಕರ್ಮ ಮಾಡಿದ ವ್ಯಕ್ತಿ ಮತ್ತೆ ಜನ್ಮವೆತ್ತದೆ ಮೋಕ್ಷ ಪಡೆಯುತ್ತದೆ. ದುಷ್ಕರ್ಮದ ಫಲ ತೊಳೆಯುವ ವರೆಗೂ ಜನ್ಮವೆತ್ತುತ್ತಲೇ ಇರಬೇಕು ಅನ್ನುವ ತತ್ವ.
  22. 5. ಭಾರತೀಯ ತತ್ವಶಾಸ್ತ್ರ
  23. ಭಾರತೀಯ ತತ್ವಶಾಸ್ತ್ರದಲ್ಲಿ  ಮುಖ್ಯವಾಗಿ ಎರಡು ಶಾಖೆಗಳು ಇರುತ್ತವೆ. ಒಂದು ಸಾಂಪ್ರದಾಯಿಕ , ಇನ್ನೊಂದು ವಿರೋಧಾಭಾಸ. ಅಥವ ಆಸ್ತಿಕ , ನಾಸ್ತಿಕ ಅಂತಲೂ ಹೇಳಬಹುದು. ಈ ಭೇದಗಳು ಈ ಕೆಳಗಿನ ಸಂಗತಿಗಳ ಮೇಲೆ ಅವಲಂಬಿಸಿವೆ. ೧. ವೇದಗಳು ಜ್ಞಾನಕ್ಕೆಸೂಕ್ತವಾದ ಮೂಲಾಧಾರ ಅಹುದೋ ಅಲ್ಲವೋ? ೨. ಬ್ರಹ್ಮ ಮತ್ತು ಆತ್ಮ ಗಳ ಮೇಲಿನ  ನಂಬಿಕೆ ೩. ದೇವರು ಮತ್ತು ಪುನರ್ಜನ್ಮಗಳ ನಂಬಿಕೆ
  24. ಸಾಂಪ್ರದಾಯಿಕ ತತ್ವಶಾಸ್ತ್ರದಲ್ಲಿ ನ್ಯಾಯ, ವೈಶೇಷಿಕ ,ಸಾಂಖ್ಯ ,ಯೋಗ, ಮೀಮಾಂಸ ಮತ್ತು ವೇದಾಂತ ಎಂಬ ಶಾಖೆಗಳಿವೆ. ವಿರೋಧಾಭಾಸದಲ್ಲಿ ಜೈನ , ಬೌಧ್ಧ, ಅಜೀವಿಕಾ, ಅಜ್ಞಾನ ಮತ್ತು ಚಾರ್ವಾಕ ಎಂಬ ಶಾಖೆಗಳಿವೆ.
  25. ಭಾರತೀಯ ತತ್ವಶಾಸ್ತ್ರಗಳು ಸಮಾನ ಮನಸ್ಕತೆಯಿಂದ ನಂಬುವದು ಧರ್ಮ, ಕರ್ಮ, ಸಂಸಾರ, ಮರುಜನ್ಮ ,ದುಃಖ, ಸನ್ಯಾಸ ಧ್ಯಾನ, ಮೋಕ್ಷ ಮತ್ತು ನಿರ್ವಾಣ ಗಳಲ್ಲಿ. ಭೇದ ಇರುವದು ಅಸ್ತಿತ್ವದ ಸ್ವರೂಪ ಮತ್ತು ಅಂತಿಮ ವಿಮೋಚನೆಯ ಮಾರ್ಗದ ಬಗ್ಗೆ.
  26. 6. ಭಾರತೀಯ ಹಬ್ಬಗಳು
  27. ಭಾರತೀಯರು ಮೂರು ತರಹದ ಹಬ್ಬಗಳನ್ನು ಆಚರಿಸುತ್ತಾರೆ.
  28. ರಾಷ್ಟ್ರೀಯ ಹಬ್ಬಗಳು : ಗಣತಂತ್ರ ದಿವಸ 26 ಜನೆವರಿ, ಸ್ವಾತಂತ್ರ್ಯೋತ್ಸವ ದಿವಸ 15 ಅಗಸ್ಟ್ ಮತ್ತು ಗಾಂಧೀ ಜಯಂತಿ ಅಕ್ಟೋಬರ್ 2
  29. ಧಾರ್ಮಿಕ ಹಬ್ಬಗಳು :
  30. ಮಹಾಶಿವರಾತ್ರಿ, ಹಬ್ಬ ಶಿವಪಾರ್ವತಿಯರ ವಿವಾಹದ ದ್ಯೋತಕವಾಗಿ ಆಚರಿಸಲ್ಪಡುತ್ತದೆ. ಈಶ್ವರ ಲಿಂಗಕ್ಕೆ ಅಭಿಷೇಕ ಸ್ನಾನ ಮಾಡಿಸಉವದಲ್ಲದೆ ಇಡೀ ದಿನ ಉಪವಾಸ ಮಾಡಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
  31. ಹೋಳಿ ಹಬ್ಬ, ವಸ೦ತ ಋತುವಿನ ಆಗಮನ ಸೂಚಿಸುತ್ತೆ. ದುಷ್ಟ ಶಕ್ತಿಗಳ ಮೇಲೆ ಶಿಷ್ಟ ಶಕ್ತಿಯ ವಿಜಯವೆಂದು ಈ ಹಬ್ಬ ಆಚರಿಸಲಾಗುತ್ತದೆ, ಮೊದಲ ದಿನ ಕಾಮನನ್ನು ಸುಡುವ ಮತ್ತು ಮರುದಿನ ಬಣ್ಣವಾಡುವ ಹಬ್ಬ.
  32. ಚಾಂದ್ರಮಾನ ಯುಗಾದಿ ಹಿಂದೂ ಹೊಸವರ್ಷದ ಮೊದಲ ದಿನವಾಗಿ ಆಚರಿಸಲ್ಪಡುತ್ತದೆ.
  33. ಮಹಾವೀರ ಜಯಂತಿ, ಬಸವ ಜಯಂತಿ, ಮತ್ತು ಬುಧ್ಧ ಪೂರ್ಣಿಮಾ ಹಬ್ಬಗಳಂದು ಕ್ರಮವಾಗಿ ಮಹಾವೀರ, ಬಸವ ಮತ್ತು ಬುಧ್ಧರ ಜಯಂತಿಗಳನ್ನೂ ಆಚರಿಸಲಾಗುತ್ತದೆ.
  34. ರಕ್ಷಾಬಂಧನ ಸಹೋದರ ಸಹೋದರಿಯರ ಮಧ್ಯೆ ಪ್ರೀತಿಯ ಸಂಕೇತದ ಹಬ್ಬವಾಗಿದ್ದು ಸಹೋದರಿ ಸಹೋದರನ ಕಂಕಣಕ್ಕೆ ರಕ್ಷದಾರವನ್ನು ಕಟ್ಟುತ್ತಾಳೆ ಮತ್ತು ಸಹೋದರ ಆಕೆಯ ರಕ್ಷೆಯ ಪಣ ತೊಡುತ್ತಾನೆ.
  35. ಕೃಷ್ಣ ಜನ್ಮಾಷ್ಟಮಿ ಹಬ್ಬವು ಕೃಷ್ಣನ ಹುಟ್ಟಿದ ಹಬ್ಬವಾಗಿ ಆಚರಿಸಲ್ಪಡುತ್ತದೆ ಮತ್ತು ಈ ದಿನ ಮೊಸರು ಕುಡಿಕೆ ಎಂಬ ವಿಶೇಷವಾದ ಸಾಹಸೀ ಆಟವನ್ನು ಆಡಲಾಗುತ್ತದೆ.
  36. ಗಣೇಶ ಚತುರ್ಥಿಯಾ ಹಬ್ಬದಡಿ ಮೊದಲ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ಮಾರನೆ ದಿನವೇ ಗಣೇಶನ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ.
  37. ಸಾಮಾನ್ಯವಾಗಿ ಈ ಹಬ್ಬ ಭಾದ್ರಪದ ಚೌತಿಯ ದಿನದಂದು ಬರುತ್ತದೆ. ಆ ದಿನ ಯಾರೂ ಚಂದ್ರನನ್ನು ನೋಡಬಾರದು ಎಂಬ ಪರಿಪಾಠವಿದೆ
  38. ದಸರಾ ಇದು ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಆಚರಿಸುವ ಹಬ್ಬ, ದೇವಿ ಪೂಜೆಯ ನವರಾತ್ರಿಯ ಹಬ್ಬ. ಸರಸ್ವತಿ ಪೂಜೆ, ದುರ್ಗಾಷ್ಟಮಿ, ಮಹಾನವಮಿ ಮತ್ತು ವಿಜಯದಶಮಿ ಮುಂತಾದ ಪೂಜೆಗಳನ್ನೊಳಗೊಂಡ ದೀರ್ಘ ಹಬ್ಬ. ಇದನ್ನೇ ಉತ್ತರಭಾರತದಲ್ಲಿ ವಿಶೇಷವಾಗಿ ಬಂಗಾಳದಲ್ಲಿ ದುರ್ಗಾಪೂಜಾ ಎಂದು ಆಚರಿಸುತ್ತಾರೆ.
  39. ದೀಪಾವಳಿ ಹಬ್ಬ ನರಕಾಸುರನು ಲೋಕಕಂಟಕನಾದಾಗ ಅವನ ಸಂಹಾರವನ್ನು ಆಚರಿಸುವ ಹಬ್ಬ . ನೀರು ತುಂಬುವ ಹಬ್ಬ, ಅಭ್ಯಂಜನ ಸ್ನಾನದ ನರಕಚತುರ್ದಶಿ, ಲಕ್ಷ್ಮಿ ಪೂಜೆಯ ಅಮಾವಾಸ್ಯೆ , ಬಲೀ ಮಾಹಾರಾಜ ಬಂದು ಆಶಿರ್ವಾದ ಮಾಡುವ ಪ್ರತೀಕವಾದ ಬಲಿಪಾಡ್ಯಮಿಯನ್ನೊಳಗೊಂಡ ಕತ್ತಲೆಯನ್ನೋಡಿಸಿ ಬೆಳಕು ಮಾಡಿಕೊಳ್ಳುವ ಹಬ್ಬ.
  40. ಕುತಬ್ ಎ ರಮ್ಜಾನ್, ಬಕ್ರೀದ್, ಇವು ಭಾರತದಲ್ಲಿ ಆಚರಿಸಲ್ಪಡುವ ಮುಖ್ಯ ಮುಸ್ಲಿಂ ಹಬ್ಬಗಳು.  ಪ್ರವಾದಿ ಮುಹಮ್ಮದ್ ರವರ ಮೇಲೆ ರಮದಾನ್ ತಿಂಗಳಲ್ಲಿ  ಪವಿತ್ರ ಕುರಾನ್  ಅವತೀರ್ಣಗೊಂಡಿತು. ಇದರ ಗೌರವಾರ್ಥ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತದವರೆಗೆ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ.
  41. ಬಕ್ರೀದ್ ಸಂದರ್ಭದಲ್ಲಿ ಶಕ್ತ ಮುಸ್ಲಿಮರು, ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಾರೆ. ಪ್ರವಾದಿ ಮಹಮ್ಮದರ ಕರ್ಮಭೂಮಿಯಾಗಿದ್ದ ಸೌದಿ ಅರೆಬಿಯಾದ ಮೆಕ್ಕಾ ಮತ್ತು ಮದೀನ ಪಟ್ಟಣಗಳಲ್ಲಿರುವ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಪಡೆದು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಬರುತ್ತಾರೆ. ಈ ಪೈಕಿ ಪವಿತ್ರ ಯಾತ್ರಾ ಸ್ಥಳವಾದ ಕಾಬಾದ ದರ್ಶನ ಹಾಗೂ ಕೆಟ್ಟಗುಣಗಳ ಸಂಕೇತವಾದ ಸೈತಾನನಿಗೆ ಸಾಂಕೇತಿಕವಾಗಿ ಕಲ್ಲು ಹೊಡೆಯುವ ಸಂಪ್ರದಾಯ ಅತ್ಯಂತ ಪ್ರಮುಖವಾದದ್ದು.
  42. ಕ್ರಿಸ್ಮಸ್ ಹಬ್ಬ :ಯೇಸು ಕ್ರಿಸ್ತನ ಜನ್ಮದಿನವಾದ 25 ಡಿಸಂಬರ್ ನಂದು ಆಚರಿಸಲ್ಪಡುತ್ತದೆ. ಆವತ್ತು ಮನೆಗಳನ್ನು ಸಿಂಗರಿಸಿ ದೀಪಗಳನ್ನೂ ಕ್ರಿಸ್ಮಸ್ ಟ್ರೀ ಯನ್ನು ಮಾಡಿ ಸಂಭ್ರಮಿಸುತ್ತಾರೆ.ಆವತ್ತಿನ ರಾತ್ರಿ ಸಾಂಟಾ ಕ್ಲಾಉಸ್ ಎಂಬ ಕೆಂಪು ಡ್ರೆಸ್ ಧರಿಸಿದ ವ್ಯಕ್ತಿ ಗುಟ್ಟಾಗಿ ಬಂದು ಆವಶ್ಯಕತೆ ಇರುವವರಿಗೆ ಗಿಫ್ಟ್ ಗಳನ್ನೂ ಬಿಟ್ಟು ಹೋಗುತ್ತಾನೆ ಎಂಬ ನಂಬಿಕೆ ಇದೆ.
  43. ಗುಡ್ ಫ್ರೈಡೆ , ಈಸ್ಟರ್ ಹಬ್ಬಕ್ಕೂ ಮುಂಚೆ ಬರುವ ಗುಡ್ ಫ್ರೈಡೆ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರಿಗೂ ಅನ್ವಯಿಸುವಂಥದ್ದು. ದೇವರ ಒಬ್ಬನೇ ಮಗನಾದ ಯೇಸುಕ್ರಿಸ್ತನು ಭೂಮಿಗೆ ಮನುಷ್ಯಕುಮಾರನಾಗಿ ಬಂದನು. ತಂದೆಯಾದ ದೇವರ ಚಿತ್ತವನ್ನು ನೆರವೇರಿಸಲೆಂದೇ ತನ್ನ ಪರಿಶುದ್ಧವಾದ ರಕ್ತವನ್ನು ಕಲ್ವಾರಿ ಶಿಲುಬೆಯಲ್ಲಿ ಸುರಿಸಿ ತನ್ನನ್ನು ಮರಣಕ್ಕೆ ಒಪ್ಪಿಸಿದನು. ಅಂದು ನಡೆದ ಈ ಕಾರ್ಯದಿಂದ ಮನು‍ಷ್ಯ ಪಾಪದಿಂದ ವಿಮೋಚನೆ ಹೊಂದಿದ್ದಾನೆ. ಆದ್ದರಿಂದಲೇ ಈ ದಿನವನ್ನು ಗುಡ್ ಫ್ರೈಡೆ (ಶುಭ ಶುಕ್ರವಾರ) ಎನ್ನಲಾಗಿದೆ.
  44. ಈಸ್ಟರ ಕ್ರೈಸ್ತ ಮತೀಯರ ಮುಖ್ಯ ಹಬ್ಬ. ಕ್ರಿಸ್ತನ ಪುನರುತ್ಥಾನದ ವಾರ್ಷಿಕ ಸ್ಮರಣೆಗಾಗಿ ಇದನ್ನು ಆಚರಿಸುತ್ತಾರೆ. ಹಬ್ಬ ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ 22ರಿಂದ ಏಪ್ರಿಲ್ 25ರ ಒಳಗೆ ಬರುತ್ತದೆ. ಹಬ್ಬಕ್ಕೆ ಮುನ್ನ 40 ದಿನಗಳು ಉಪವಾಸ ಮಾಡುತ್ತಾರೆ. ಶುಭ ಶುಕ್ರವಾರದ ಅನಂತರ ಬರುವ ಭಾನುವಾರವೇ ಈಸ್ಟರ್ ಹಬ್ಬ. ಆ ದಿನ ಮೇಣದಬತ್ತಿಗಳನ್ನು ಹಚ್ಚಿ, ಸಂತೋಷದಿಂದ ನಲಿಯುತ್ತಾರೆ. ವಿವಿಧ ರೀತಿಯಲ್ಲಿ ಅಲಂಕರಣಗೊಂಡ ಮೊಟ್ಟೆಗಳನ್ನು ಪರಸ್ಪರ ವಿನಿಮಯ ಮಾಡುವುದು ಒಂದು ರೂಢಿ.
  45. ಋತುಮಾನದ / ಸುಗ್ಗಿಯ ಹಬ್ಬಗಳು :
  46. ಭಾರತದ ಇತರೆಡೆ ಮಕರ ಸಂಕ್ರಾಂತಿ, ತಮಿಳುನಾಡಿನಲ್ಲಿ  ಪೊಂಗಲ್, ಉತ್ತರ ಭಾರತದಲ್ಲಿ ಲೋಹರಿ, ಬೈಸಾಖಿ ಮತ್ತು ಆಸ್ಸಾಮ್ ನಲ್ಲಿ ಭೋಗಾಳಿ ಬಿಹು ಈ ಹಬ್ಬಗಳು ಜನೆವರಿಯಲ್ಲಿ ಸುಗ್ಗಿಯ ಸುತ್ತ ಆಚರಿಸುವ ಹಬ್ಬಗಳು. ಸಮೃಧ್ಧಿಯನ್ನು ಸಂಭ್ರಮಿಸುವ ಹಬ್ಬ.ಸುಗ್ಗಿಯ ಹೊಸ ಫಸಲುಗಳಿಂದ ಅಡಿಗೆ ಮಾಡಿ ಸೂರ್ಯ ದೇವರನ್ನು ಪೂಜಿಸುವ ಹಬ್ಬ.
  47. ಬಸಂತ ಪಂಚಮಿ ಪ್ರತಿ ವರ್ಷ ಫೆಬ್ರುವರಿಯಲ್ಲಿ ವಸಂತ ಋತುವಿನ ಆರಂಭದಲ್ಲಿ ಆಚರಿಸುವ ಹಬ್ಬ. ಆ ದಿನ ಸಂಸ್ಕೃತಿ, ವಿದ್ಯೆ ಮತ್ತು ಸಂಗೀತಗಳ ದೇವತೆಯಾದ ಸರಸ್ವತಿಯ ಪೂಜೆಯನ್ನು ಮಾಡುತ್ತಾರೆ.
  48. ಓಣಂ  ಹಬ್ಬವನ್ನು ಕೇರಳದಲ್ಲಿ ಸಾಮಾನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ಗಳ ಮಧ್ಯೆ ಆಚರಿಸುತ್ತಾರೆ. ಹಾವಿನ ಆಕಾರದ ದೋಣಿಗಳ ರೇಸ್ ಈ ಹಬ್ಬದ ವೈಶಿಷ್ಟ್ಯ.
  49. ಭಾರತದಲ್ಲಿ ಸದಾ ಹಬ್ಬದ ಸಂಭ್ರಮ . ಭಾರತದಲ್ಲಿ ಸಂಭ್ರಮವನ್ನಾಚರಿಸಲು ಯಾವಾಗಲೂ ಹಬ್ಬ ಹರಿದಿನಗಳ , ಹಿರಿಯರ ಜಯಂತಿಗಳ , ಸೃಷ್ಟಿಯ ಸುಗ್ಗಿಯ ಅವಕಾಶಗಳು ಇದ್ದೇ ಇರುತ್ತವೆ. ಸಂಭ್ರಮ ಸಕಾರಾತ್ಮಕವಲ್ಲವೆ?
  50. 7. ಭಾರತೀಯರ ವಿಶೇಷ ನಂಬಿಕೆಗಳು, ಪಧ್ಧತಿಗಳು ಮತ್ತು ಸಂಪ್ರದಾಯಗಳು
  51. ಧರ್ಮಾಚರಣೆಗಳು ಅಸಂಖ್ಯ. ಹಿಂದೂಗಳಿಗೆ ದೊಡ್ಡ ತೀರ್ಥ ಯಾತ್ರಾ ಕ್ಷೇತ್ರಗಳ ದರ್ಶನ ಅತ್ಯಮೌಲ್ಯ. ಮುಸ್ಲಿಮ್ಸ್ ಗೆ ಸಂತರ ಸಮಾಧಿಗಳು, ಬೌಧ್ಧರಿಗೆ ಬುಧ್ಧನಿಗೆ ಸಂಬಂಧಪಟ್ಟ ಸ್ಥಳಗಳು ಪೂಜ್ಯ. ಮುಸ್ಲಿಮ್ಸ್ ಮತ್ತು ಕ್ರಿಶ್ಚಿಯನ್ಸ್ ರ ನಂಬಿಕೆಯಂತೆ , ಪ್ರಾರ್ಥನೆಯಂತೆ ಮೃತ್ಯುವಿನ ನಂತರ ಪ್ರತಿಯೊಬ್ಬ ವ್ಯಕ್ತಿಯ ಆತ್ಮ ಸ್ವರ್ಗಕ್ಕೆ ಹೋಗಬೇಕು. ಹಿಂದೂಗಳ ನಂಬಿಕೆ ಬೇರೆ. ಸಂಪ್ರದಾಯವಾದೀ ಹಿಂದೂಗಳು ಪುನರ್ಜನ್ಮದಲ್ಲಿ ವಿಶ್ವಾಸ ಇಡುತ್ತಾರೆ. ಒಬ್ಬ ಹಿಂದೂ ಗತಜನ್ಮದಲ್ಲಿ ತಾನು ಮಾಡಿದ ಪುಣ್ಯ ಮತ್ತು ಪಾಪದ ಜಮಾಖರ್ಚಿನ ಮೇಲೆ ಅವಲಂಬಿಸಿ ಪುನರ್ಜನ್ಮಗಳನ್ನು ಪಡೆಯಬೇಕಾಗುತ್ತದೆ.
  52. ಇಡೀ ಜಗತ್ತಿನಲ್ಲೇ ತುಲನಾತ್ಮಕವಲ್ಲದ ವಿಶೇಷ ಪಧ್ಧತಿ ಮತ್ತು ಸಂಪ್ರದಾಯಗಳನ್ನು ಭಾರತೀಯ ಹಿಂದೂಗಳು ಪಾಲಿಸುತ್ತಾರೆ. ಇವು ಸನಾತನ ಗ್ರಂಥಗಳಲ್ಲಿ ವಿಧಿಸಿದ ಜೀವನ ಪಧ್ಧತಿಗಳಾಗಿದ್ದು ಮುಖ್ಯವಾದ ಹನ್ನೊಂದು ಈ ರೀತಿ ಇರುತ್ತವೆ
  53. 7.1 ನಮಸ್ತೆ    ನಮಸ್ತೆ ಅಥವಾ ನಮಸ್ಕಾರ ಇದು ವೇದಗಳಲ್ಲಿ ಹೇಳಿದಂತೆ ಭೆಟ್ಟಿಯಾದ ತಕ್ಷಣ  ಸ್ವಾಗತಿಸಿ ಅಭಿವಂದನೆ ಮಾಡಿ ಸ್ವಾಗತಿಸುವ ಪಧ್ಧತಿ. ಇದರ ಶಾಬ್ದಿಕ ಅರ್ಥ ‘ ನಾನು ನಿನಗೆ ಬಾಗುತ್ತೇನೆ ‘  ಕೈ ಜೋಡಿಸಿ ಎದೆಯೆದುರು ಹಿಡಿಯುವದು ‘ ನಮ್ಮ ಮನಸ್ಸುಗಳು ಒಂದಾಗಲಿ’ ಎನ್ನುವದರ ಪ್ರತೀಕ.
  54. ನಮಹದಲ್ಲಿನ  ‘ ನ ಮ ‘ ಅಕ್ಷರಗಳ ಅರ್ಥ ‘ನಾನು ನಿಮ್ಮ ಸಮ್ಮುಖದಲ್ಲಿ ನನ್ನ ಅಹಂ ನ್ನು ತ್ಯಜಿಸಿದ್ದೇನೆ.’ಎಂದು. ಇದು ಇತ್ತೀಚಿಗೆ ಇಡೀ ಜಗತ್ತಿನಲ್ಲಿ ಪ್ರಸಿಧ್ಧವಾಗಿ ಅನುಕರಿಸಲ್ಪದುತ್ತಿದೆ. ಯಾಕೆಂದರೆ ಇದು ಕೈ ಕುಲುಕುವದೂ ಮತ್ತು ಅಪ್ಪಿಕೊಳ್ಳುವದಕ್ಕೆ ಹೋಲಿಸಿದರೆ ನೇರ ಸ್ಪರ್ಶವಿರದ್ದರಿಂದ ಹೆಚ್ಚು ಸ್ವಚ್ಚ ಮತ್ತು ಆರೋಗ್ಯಕರವೆಂದು ಹೇಳಬಹುದು.
  55. ಅತಿಥಿ ದೇವೋ ಭವ ಭಾರತೀಯರು ಅತಿಥಿಸತ್ಕಾರಕ್ಕೆ ಹೆಸರಾದವರು. ಆಭ್ಯಾಗತರನ್ನು ಸಂತೋಷಪಡಿಸಲು ಯಾವ ಮಟ್ಟಿಗೆ ಹೋಗಲೂ ಹಿಂಜರಿಯರು. ಬಡತನ ಇದಕ್ಕೆ ಅಡ್ಡಿ ಬಾರದು. ಅತಿಥಿ ದೇವೋ ಭವ ಇದು ಸತ್ಕಾರದ ಮೂಲ ಮಂತ್ರ.
  56. ಪವಿತ್ರ ಗೋವು ಭಾರತದಲ್ಲಿ ಗೋವು ಧರ್ಮ ಮತ್ತು ಸಂಸ್ಕೃತಿಯ ದೃಷ್ಟಿಯಲ್ಲಿ ತುಂಬಾ ಪವಿತ್ರವಾದುದು. ಇದಕ್ಕೆ ಕಾರಣ ಅದರ ಸೌಮ್ಯ ಸ್ವಭಾವ , ಹಾಲು ಹೈನಿನ, ಗೋಮಯ , ಗೊಮೂತ್ರಗಳ ಮತ್ತು ಕೃಷಿಗೆ ಹೀಗೆ ಅನೇಕ ಉಪಯುಕ್ತತೆಗಳಿಂದಾಗಿ ಗೋವು ಪೂಜಿಸಲ್ಪದುತ್ತದೆ. ಇಲ್ಲಿ ಗೋವಿನ ಪೂಜೆ ಕೃತಜ್ಞತೆಯ ಪ್ರತೀಕ.
  57. ದೇವಸ್ಥಾನ ದರ್ಶನದ ಹಿಂದಡಗಿದ ವಿಜ್ಞಾನ ಶಾಸ್ತ್ರ: ದೇವಸ್ಥಾನಗಳನ್ನು ಭೂಮಿಯ ಆಯಸ್ಕಾಂತ  ತರಂಗ ರೇಖೆಗಳಗುಂಟ ಕಟ್ಟಿರುತ್ತಾರೆ . ಇದರಿದ ಆವರಣದಲ್ಲಿ ಸಕಾರಾತ್ಮಕ ಶಕ್ತಿ ಗರಿಷ್ಠವಾಗಿರುತ್ತದೆ. ಗರ್ಭಗೃಹದಲ್ಲಿ ಮೂರ್ತಿಯಡಿ ಹೂಳಲ್ಪಟ್ಟ ತಾಮ್ರದ ಪಟ್ಟಿ ಸಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು ಸುತ್ತಲೂ ತರಂಗಗಳ ರೂಪದಲ್ಲಿ ಹರಡುತ್ತದೆ. ಹಾಗಾಗಿ ಆಗಾಗ ದೇವಸ್ಥಾನದ ದರ್ಶನಕ್ಕೆ ಹೋಗುವದರಿಂದ ಸಕಾರಾತ್ಮಕ ಯೋಚನೆಗಳು ಬರುತ್ತವೆ. ಈ ಸ್ವಚ್ಚ ಮತ್ತು ಪರಿಶುಧ್ಧ  ಪರಿಸರಕ್ಕೆ ಮತ್ತೆ ಕೊಳೆ ತೆಗೆದುಕೊಂಡು ಹೋಗುವದನ್ನು ತಪ್ಪಿಸುವದಕ್ಕೆ ಪಾದರಕ್ಷೆಗಳನ್ನು ಹೊರಗೆಯೇ ಬಿಟ್ಟು ಪ್ರವೇಶಿಸಬೇಕಾಗುತ್ತದೆ.
  58. ಉಪವಾಸ . ಮಧ್ಯೆ ಮಧ್ಯೆ ಆಹಾರ ತ್ಯಜಿಸುವದು ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ಇದಕ್ಕೆ ಆರೋಗ್ಯದ ಹಿನ್ನೆಲೆಯಲ್ಲದೆ ಧಾರ್ಮಿಕ ಸ್ವರೂಪವೂ ಸೇರಿಕೊಳ್ಳುತ್ತದೆ. ವೃತ ಉಪವಾಸಗಳು ಒಬ್ಬ ವ್ಯಕ್ತಿಯ ಪ್ರಾಮಾಣಿಕತೆ, ಪ್ರತಿಜ್ಞೆ, ಅನ್ನದಾತನಿಗೆ ತೋರಿಸುವ ಕೃತಜ್ಞತೆಗಳ ಪ್ರತೀಕಗಳಾಗುತ್ತವೆ. ದೇಹವನ್ನು ದಂಡಿಸಿ ಶಿಸ್ತು ಸಂಯಮ ಬೆಳೆಸಿಕೊಳ್ಳುವ ಉದ್ದೇಶ ವ್ಯಕ್ತವಾಗುತ್ತದೆ.
  59. 8.  ಭಾರತೀಯ ಕುಟುಂಬ ಜೀವನ
  60. ಸಂಯುಕ್ತ ಕುಟುಂಬ
  61. ಭಾರತ ತಲೆಮಾರುಗಳಿಂದ ಜಂಟಿ ಕುಟುಂಬ ಪಧ್ಧತಿಯನ್ನು ಆಳವಡಿಸಿಕೊಂಡಿತ್ತು. ತಂದೆ ತಾಯಿ , ಮಕ್ಕಳು , ಸೊಸೆಯಂದಿರು ಮತ್ತು ಮೊಮ್ಮಕ್ಕಳು ಒಟ್ಟಿಗೆ ಒಂದೇ ಮನೆಯಲ್ಲಿ ಸಂಸಾರ ಮಾಡಿಕೊಂಡು ಇರುತ್ತಿದ್ದರು.ಮನೆಯ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿ ಈ ಸಂಯುಕ್ತ ಕುಟುಂಬ ಯಜಮಾನರಾಗಿ ಎಲ್ಲ ನಿಯಮಗಳನ್ನೂ ನೇಮಿಸಿ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಿದ್ದರು. ಸುಮಾರು 1951 ರ ವರೆಗೂ ಇದ್ದ ಈ ವ್ಯವಸ್ಥೆ ಆರ್ಥಿಕ ಅಭಿವೃಧ್ಧಿ ಮತ್ತು ನಗರೀಕರಣಗಳಿಂದಾಗಿ ಕ್ರಮೇಣವಾಗಿ ಚಿಕ್ಕ ಚಿಕ್ಕ ಕುಟುಂಬಗಳಾಗಿ ಮಾರ್ಪಾಡು ಹೊಂದಿದವು. ಈ ಕುಟುಂಬದ ವೈವಿಧ್ಯತೆ ಸಾಮಾಜಿಕ ಪರಿಸರ, ಪರಂಪರೆ ಮತ್ತು ಕುಟುಂಬ ಸದಸ್ಯರ ಆರ್ಥಿಕ ಗಳಿಕೆಗಳ ಮೇಲೆ ಅವಲಂಬಿಸಿದವು. ಹಿರಿಯರ ಪಾಲನೆಯ ರೀತಿ ಕೂಡ ಗ್ರಾಮೀಣ ಮತ್ತು ನಗರ ಪರಿಸರಗಳಲ್ಲಿ ವಿಭಿನ್ನವಾಗಿದ್ದು ಅವಲಂಬನ, ಆಧೀನತೆ ಮತ್ತು ನಿಯಂತ್ರಣಗಳ ಮಟ್ಟ ಯುವ ಸಂಸಾರಿಗಳನ್ನು ನಿರ್ಧಾರ ತೆಗೆದುಕೊಳ್ಳಲು ಎಡೆ ಮಾಡಿಕೊಡುತ್ತಿತ್ತು. ಶಿಕ್ಷಣ ಮತ್ತು ಗಳಿಕೆಗಳು ಬೆಳೆದಾಗ ಸ್ವಾವಲಂಬನ ಮಿಶ್ರಿತ ಸ್ವಾತಂತ್ರ್ಯ ರೂಪ ತಳೆಯುತ್ತ ಹೋಯಿತು. ಜೀವನಾಧಾರದ  ವೆಚ್ಚಗಳು ಬೆಳೆದ ಹಾಗೆ ಆವಶ್ಯಕತೆ ಸ್ತ್ರೀ ಉದ್ಯೋಗದ ಬಗೆಗೆ ತನ್ನ ದೃಷ್ಟಿ ಮತ್ತು ಮನೋವೃತ್ತಿ ಬದಲಿಸಬೇಕಾಯಿತು.
  62. ಭಾರತವೆಂದರೆ ಸಂಯುಕ್ತ ಕುಟುಂಬ , ತುಂಬಿದ ಕುಟುಂಬ ಭಾರತೀಯ ಸಮಾಜದ ಸಂಘಟನಾತ್ಮಕ , ಹೊಂದಿಕೆಯ, ಒಂದುಗೂಡಿ ಬಾಳುವ, ಪರಸ್ಪರರಿಗೆ ಆಧಾರವಾಗುವ ಸ್ವಾಭಾವಿಕ ಸ್ವಭಾವದ ಪ್ರತೀಕ. ಭಾರತೀಯನಿಗೆ ಕುಟುಂಬ ಮೊದಲು. ಅದೇ ರೀತಿಯಾಗಿ ಬಾರತೀಯ ಸಮಾಜ ಮತ್ತು ಸಂಸ್ಕೃತಿಗಳ ಮುಖ್ಯ ಅಂಶಗಳು  ಶಿಷ್ಟ ನಡತೆ, ಸಭ್ಯತೆ
  63. ವಿನಮ್ರತೆ, ಇತರರನ್ನು ಗೌರವಿಸುವದು ಮತ್ತು ಒಟ್ಟಿಗೆ ಪ್ರಗತಿ ಸಾಧಿಸುವದೆ ಆಗಿವೆ.
  64. 9. ಭಾರತೀಯ ಮದುವೆಗಳು
  65. ಭಾರತೀಯ ಸಮಾಜದಲ್ಲಿ ಹಿರಿಯರು ನೋಡಿ ಸಾಂಗಗೊಳಿಸಿದ ಮದುವೆ ಸಾಮಾನ್ಯವಾಗಿತ್ತು. ಆಗಿನ ಕಾಲದಲ್ಲಿ ಮದುವೆಯ ವಯಸ್ಸು ಕೂಡ ಚಿಕ್ಕದಾಗಿತ್ತು. ರಕ್ಷಣೆ, ಆರ್ಥಿಕ ಭದ್ರತೆ , ಹೊಂದಾಣಿಕೆ ಮತ್ತು ಸುಖೀ ಸಂಸಾರ ಇವು ಆಯ್ಕೆಯ ಕ್ರಮಗಳಾಗಿದ್ದವು. ಹೆಣ್ಣುಮಕ್ಕಳ ಆರ್ಥಿಕ ಭದ್ರತೆಗಾಗಿ , ಸಾಂಸಾರಿಕ ಮನೆಯನ್ನು ಸ್ಥಾಪಿಸಲಿಕ್ಕಾಗಿ ಹೆಣ್ಣಿನ ಪಾಲಕರು ವರದಕ್ಷಿಣೆ ಮುಂತಾದವನ್ನು ಕೊಡುವ ಪರಿಪಾಠ ಬಂದಿತ್ತು. ಮೊದಮೊದಲು ಇದು ಸ್ವಯಂಪ್ರೇರಿತವಾಗಿದ್ದು ಕ್ರಮೇಣ ಶರತ್ತುಬಧ್ಧ ಬೇಡಿಕೆಗೆ ತಿರುಗಿರಬಹುದು. ಶಿಕ್ಷಣ , ದಾಕ್ಷಿಣ್ಯಗಳ ಪರಿಣಾಮವಾಗಿ ಇದು ಮತ್ತೆ ಐಚ್ಚಿಕ ಸ್ಥಿತಿಗೆ ಬಂದಿದೆ. ಸಹಶಿಕ್ಷಣ, ಸಹೋದ್ಯೋಗ ಮತ್ತು ಸ್ವ ಇಚ್ಚೆಗಳು ಸ್ವಂತ ನಿಶ್ಚಯಿಸಿದ ಅಥವ ಪ್ರೇಮವಿವಾಹಗಳು ಬರು ಬರುತ್ತಾ ಜಾಸ್ತಿ ಸಂಖ್ಯೆಯಲ್ಲಿ ಆಗುತ್ತಿವೆ. ಸುಮಾರಾಗಿ ಪಾಲಕರೂ ಇದಕ್ಕೆ ಒಪ್ಪಿಗೆ ಕೊಡುತ್ತ ಇವೆರಡು ಭಿನ್ನ ಪ್ರಕಾರದ ಮದುವೆಗಳು ಒಂದೇ ರೀತಿಗೆ ಬದಲಾಯಿಸುತ್ತಿವೆ.
  66. ಹಿರಿಯರಾಯ್ಕೆಯ ಮದುವೆಯ ಪಧ್ಧತಿ:
  67. ಹಿರಿಯರಾಯ್ಕೆಯ ಮದುವೆ ಗೊತ್ತು ಮಾಡುವದು ಒಂದು ದೀರ್ಘ ಕ್ರಮವಾಗಿದೆ.  ಭಾವೀ ವರ ಕನ್ಯೆಯರ ಜಾತಕಗಳ ಹೊಂದಾಣಿಕೆಯನ್ನು ಪರೀಕ್ಷಿಸುವದು, ಧರ್ಮ, ಜಾತಿ , ಸಂಸ್ಕೃತಿ ,ಉದ್ಯೋಗ, ಅಂತಸ್ತು ,ದೈಹಿಕ ಸೌಂದರ್ಯ ಇವೆಲ್ಲವುಗಳ ಹೊಂದಾಣಿಕೆಯ ಪರೀಕ್ಷಣೆ ಮಾಡುವದೇ ಆಗಿದೆ. ಈ ಕ್ರಮವೆಲ್ಲ ಆದ ಮೇಲೆ ಹೊಂದಾನಿಕೆಯಾಗಿದ್ದಲ್ಲಿ ಎರಡೂ ಕುಟುಂಬಗಳ ಹಿರಿಯರು ಸಮಕ್ಷಮ ಕುಳಿತು ಮಾತುಕತೆ ನಡೆಸುವರು. ಎಲ್ಲ ಒಪ್ಪಿಗೆಯಾದಲ್ಲಿ ಮದುವೆಗೆ ಒಂದು ಪ್ರಶಸ್ತವಾದ ಮುಹೂರ್ತ ಹುಡುಕಿ , ಮದುವೆಯ ತಯಾರಿಗೆ ತೊಡಗುವರು.
  68. ಮದುವೆಯ ಆಚರಣೆ
  69. ಭಾರತದಲ್ಲಿ ಮದುವೆ ಒಂದು ಅತ್ಯಂತ ಸಂಭ್ರಮದ ಗಳಿಗೆ. ಹಾಗಾಗಿ ಅಲ್ಲಿ ಸುದೀರ್ಘ ಅಲಂಕಾರ, ಬಣ್ಣ, ಅಧ್ಧೂರಿ ವಸ್ತ್ರ , ಚಿನ್ನಾಭರಣ, ಸಂಗೀತ ನೃತ್ಯಗಳಿಂದ ಕೂಡಿದ ವೈಭವ ಅಲ್ಲದೆ ಧರ್ಮದ ಆಚರಣೆಗಳಿಂದ ಕೂಡಿದ ಪವಿತ್ರತೆಯನ್ನು ಕಾಣಬಹುದು. ಪ್ರತಿವರ್ಷ ಸುಮಾರಾಗಿ ಒಂದು ಕೋಟಿ ಮದುವೆಗಳು ಸಾಂಗವಾಗುತ್ತವೆ. ಅದರಲ್ಲಿ 80% ಹಿಂದೂ ವಿವಾಹಗಳು ಜರುಗುತ್ತವೆ. ಭಾರತದಲ್ಲಿ ಧರ್ಮಕ್ಕೆ ಸಂಬಂಧಪಟ್ಟ ಹಲವಾರು ಸಾಮೂಹಿಕ ಧರ್ಮಾಚರಣೆಗಳು ಇದ್ದಾಗ್ಯೂ ವಿವಾಹವೆನ್ನುವದು ವೈಯಕ್ತಿಕವಾಗಿ ಸ್ತ್ರೀ ಮತ್ತು ಪುರುಷನಿಗೆ ಅತ್ಯಂತ ಪವಿತ್ರ ಮತ್ತು ಮಹತ್ವದ ಆಚರಣೆ ಆಗಿದೆ. ಹಿಂದೂ ಕುಟುಂಬಗಳು ವಿಶೇಷ ಶ್ರಮ ವಹಿಸಿ ವೆಚ್ಚಗಳನ್ನು ಭರಿಸಿ ಮಾಡುವೆ ಆಚರಿಸುತ್ತವೆ. ಈ ಮದುವೆಯ ಆಚರಣೆಗಳು ಮತ್ತು ಕಾರ್ಯಕ್ರಮಗಳು ಆಯಾ ಪ್ರದೇಶದ , ಸಮುದಾಯಗಳ ಪಧ್ಧತಿಗಳು, ಕುಟುಂಬಗಳ ಆರ್ಥಿಕ ಸ್ಥಿತಿಗಳ ಮೇಲೆ ಅವಲಂಬಿಸಿರುತ್ತವೆ. ಆದರೆ ಪ್ರತಿ ಹಿಂದೂ ವಿವಾಹದಲ್ಲಿ ಸಾಮಾನ್ಯ ಆಚರಣೆಗಳಲ್ಲಿ ಮುಖ್ಯವಾದವುಗಳೆಂದರೆ ಕನ್ಯಾದಾನ, ಪಾಣಿಗ್ರಹಣ, ಮತ್ತು ಸಪ್ತಪದಿ ಇವೇ ಆಗಿವೆ. ತಂದೆಯಿಂದ ಮಗಳ ಅನುದಾನ, ಅಗ್ನಿಯ ಸಮಕ್ಷಮದಲ್ಲಿ ಅಗ್ನಿ ಸಾಕ್ಷಿಯಾಗಿ ಹೊಸ ದಂಪತಿಗಳು ಒಬ್ಬರೊಬ್ಬರ ಕೈ ಹಿಡಿಯುವದು ಮತ್ತು ಅಗ್ನಿಯ ಸುತ್ತ ಒಟ್ಟಿಗೆ ಏಳು ಹೆಜ್ಜೆ ಇಡುವದು ಇವುಗಳೇ ಸಾಂಕೇತಿಕ ಮತ್ತು ಅರ್ಥಗರ್ಭಿತ ಕ್ರಿಯೆಗಳು. ಬಾಲ್ಯ, ಬ್ರಹ್ಮಚರ್ಯಗಳನ್ನು ದಾಟಿದ ಮೇಲೆ ಯೋಗ್ಯ ಸಂಗಾತಿಯನ್ನು ಆರಿಸಿಕೊಂಡು ಮುಂದಿನ ಇಡೀ ಆಯುಷ್ಯವನ್ನು ಕಳೆಯುವ ವಿವಾಹದಲ್ಲಿ ವಧುವರರು ದಂಪತಿಗಳಾಗಿ ಒಬ್ಬರಿಗೊಬ್ಬರು ಅನೇಕ ವಿಧವಾದ ವಚನ, ಪ್ರಮಾಣಗಳನ್ನಿತ್ತು ಆ ಮೂಲಕ ಸ್ಥಿರ ಹಾಗೂ ಸುಖೀ ಸಹಜೀವನಕ್ಕೆ ನಾಂದಿ ಹಾಡುತ್ತಾರೆ. ವಿವಾಹವು ಹಿರಿಯರ ಆಶೀರ್ವಾದ, ಅಕ್ಷತೆಯ ಆಶೀರ್ವಾದ, ಐದು ಪಂಚಭೂತಗಳ ಸಾಕ್ಷಿ, ಏಳು ಹೆಜ್ಜೆಗಳ ಸಾಕ್ಷಿಯಾಗಿ ನೆರವೇರುತ್ತದೆ. ಏಳು ಹೆಜ್ಜೆ  ಏಳೇಳು ಜನ್ಮಗಳ ಪ್ರತೀಕ.. ಈ ಕೂಡಿ ಇಡುವ ಏಳು ಹೆಜ್ಜೆಗಳಲ್ಲಿ ಒಂದೊಂದು ಹೆಜ್ಜೆಗೂ ಒಂದೊಂದು ಪ್ರಮಾಣ ತೆಗೆದುಕೊಳ್ಳುತ್ತಾ ಏಳನೆಯ ಹೆಜ್ಜೆ ಇಟ್ಟಾಗ ಇಬ್ಬರೂ ಅಧಿಕೃತವಾಗಿ ಸತಿ ಪತಿಗಳಾದ ಹಾಗೆ. ಮೊದಲನೇ ಹೆಜ್ಜೆ : ಅನ್ನ ವೃದ್ಧಿಗೆ. ವರ ವಧು ಆಹಾರ, ಸಮೃಧ್ಧಿಗಳ ಬಗ್ಗೆ ಪರಸ್ಪರ ವಚನಬಧ್ಧರಾಗುವದು, ಎರಡನೆ ಹೆಜ್ಜೆ : ಬಲ ವೃದ್ಧಿಗೆ. ವರ, ವಧು ಸಂಯುಕ್ತ ಬಲದ , ಪರಸ್ಪರ ರಕ್ಷಣೆಯ ಬಗ್ಗೆ ವಚನಬಧ್ಧರಾಗುವದು. ಮೂರನೇ ಹೆಜ್ಜೆ : ಧನ ಪ್ರಾಪ್ತಿಯಾಗಲೆಂದು. ವರ- ವಧು ಸೇರಿ ಸಂಯುಕ್ತ ಸಂಪತ್ತಿನ ವೃಧ್ಧಿಗೆ ಒಪ್ಪಂದ ಮಾಡಿಕೊಳ್ಳುವದು. ನಾಲ್ಕನೇ ಹೆಜ್ಜೆ : ಗಂಡ ಹೆಂಡತಿ ನಡುವೆ ಸುಖ ಸಂತೋಷಗಳು ಸದಾಕಾಲ ತುಂಬಿ ತುಳುಕಲೆಂದು. ಐದನೇ ಹೆಜ್ಜೆ : ಇತರರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿ. ಆರನೇ ಹೆಜ್ಜೆ : ದಾಂಪತ್ಯ ಜೀವನದಲ್ಲಿ ಕಲಹಗಳು, ಅನುಮಾನಗಳು ಬಾರದೆ ಸುಗಮವಾಗಿ ಸಾಗಲೆಂದು. ಏಳನೇ ಹೆಜ್ಜೆ : ಶಾರೀರಕವಾಗಿ, ಮಾನಸಿಕವಾಗಿ ಸದೃಢವಾದ ಸಂತಾನವನ್ನು ಕರುಣಿಸೆಂದು ಅಗ್ನಿ ದೇವರನ್ನು ಪ್ರಾರ್ಥಿಸುತ್ತಾ ಹಾಕುವ ಹೆಜ್ಜೆ.
  70. 10. ಭಾರತೀಯ ಭಾಷೆಗಳು
  71. ಋಗ್ವೇದದಲ್ಲಿ ಬಳಸಿದ ಸಂಸ್ಕೃತ ಭಾಷೆ ಭಾರತದ ಅತೀ ಪ್ರಾಚೀನ ಭಾಷೆ ಅಂತ ಹೇಳಬಹುದು. ಹದಿನೆಂಟನೆಯ ಶತಮಾನದ ಯುರೋಪಿಯನ್ ಪರಿಶೋಧಕರು ಭಾರತದಲ್ಲಿ ಸಂಸ್ಕೃತ ಭಾಷೆಯನ್ನು  ಕಂಡು ಹಿಡಿದಾಗ ತುಲನಾತ್ಮಕ ಭಾಷಾಶಾಸ್ತ್ರ ಎಂಬ ವಿಷಯವೇ ಹುಟ್ಟಿ ಅಭಿವ್ರುಧ್ಧಿಗೊಲ್ಲತೊಡಗಿತು. ಅವರ ದೃಷ್ಟಿಯಲ್ಲಿ ಸಂಸ್ಕೃತ ಭಾಷೆ ವ್ಯಾಕರಣದಲ್ಲೂ  ಶಬ್ದ ಕೋಶದಲ್ಲೂ ಯೂರೋಪಿನ ಶಾಸ್ತ್ರೀಯ ಭಾಷೆಗಳಿಗೆ ಸಮಸಮನಕ್ಕೆ ನಿಲ್ಲುವಂಥದು ಎಂದು ಗುರುತಿಸಲ್ಪಟ್ಟಿತುಈ ಸಂಸ್ಕೃತ ಭಾಷೆಯಿಂದ ಹುಟ್ಟಿಕೊಂಡ ಇತರ ಭಾರತೀಯ ಭಾಷೆಗಳು ಪಾಶ್ಚಿಮಾತ್ಯ ಭಾಷೆಗಳಾದ ಇಂಗ್ಲಿಷ್,ಫ್ರೆಂಚ್, ಇಟಾಲಿಯನ್,ಸ್ಪ್ಯಾನಿಷ್,ಗ್ರೀಕ್. ಪರ್ಸಿಯನ್ ಭಾಷೆಗಳ ಜತೆ ಸಾಮ್ಯವನ್ನು ಹೊಂದಿದ್ದವು ಎಂಬುದನ್ನು ಆ ಭಾಷಾ ಶಾಸ್ತ್ರಿಗಳು ಕಂಡುಕೊಂಡರು..
  72. ಭಾರತದ ಇನ್ನೊಂದು  ಶಾಸ್ತ್ರೀಯ ಭಾಷೆಯಾದ ತಮಿಳು, ದಕ್ಷಿಣ  ಭಾರತದಲ್ಲಿ ಕ್ರಿಸ್ತಪೂರ್ವ ಮೂರನೆಯ ಸಹಸ್ರಮಾನದ ಅವಧಿಯಲ್ಲಿ ಮಾತನಾಡುವ ದ್ರಾವಿಡ ಭಾಷೆಗಳಿಂದ ಬಂದದ್ದು ಎಂತಲೂ  ತಮಿಳು ಸಾಹಿತ್ಯವು ಸುಮಾರು ಎರಡು ಸಾವಿರ ವರ್ಷಗಳವರೆಗೆ ಅಸ್ತಿತ್ವದಲ್ಲಿತ್ತು ಎಂತಲೂ ಹೇಳುತ್ತಾರೆ.
  73. ಭಾರತದೊಳಗಿನ ಭಾಷೆಯ ವಿಕಸನವು ಮೂರು ಅವಧಿಗಳಲ್ಲಿ ಆಯಿತು. ಹಳೆಯ, ಮಧ್ಯ ಮತ್ತು ಆಧುನಿಕ. ಹಳೆಯ ಇಂಡೋ-ಆರ್ಯನ್ನ ಶಾಸ್ತ್ರೀಯ ರೂಪವೇ ಸಂಸ್ಕೃತವಾಗಿದೆ. ಇದು ನಯಗೊಳಿಸಿ ಬೆಳೆಸಿದ ಮತ್ತು ಸರಿಯಾದ
  74. ಭಾಷೆ.ಇದಕ್ಕೆ ಹೋಲಿಸಿದಲ್ಲಿ ಪ್ರಾಕೃತ ಭಾಷೆ ವಲಸಿಗ ಜನಸಾಮಾನ್ಯರ ಸರಿಯಾದ ಉಚ್ಚಾರಣೆ ಮತ್ತು ವ್ಯಾಕರಣಕ್ಕೆ ಮಹತ್ವ ಕೊಡದ ಸುಲಭ ಬಳಕೆಗಾಗಿ ವಿವಿಧ ಪ್ರದೇಶ , ಜನಾಂಗಗಳಿಂದ ಮಿಶ್ರಿತವಾದ ಭಾಷೆ ಅಂತ ಹೇಳಬಹುದು,  ಈ ಪ್ರಾಕೃತದಿಂದ ಮುಂದೆ ಬಂದದ್ದು  ಪಾಲಿ (ಆರಂಭಿಕ ಬೌದ್ಧರ ಮತ್ತು 200-300 BCE ಯಲ್ಲಿ ಅಶೋಕ ಯುಗದ ಭಾಷೆ), ಪ್ರಾಕೃತ (ಜೈನ ತತ್ವಜ್ಞಾನಿಗಳ ಭಾಷೆ) ಮತ್ತು ಅಪಭ್ರಂಶ (ಅಂತಿಮ ಹಂತದ ಭಾಷಾ ಮಿಶ್ರಣ) ಗೆ ಮಧ್ಯಮ ಕಾರಣವಾಯಿತು. ಭಾಷಾಶಾಸ್ತ್ರಿಗಳು ಹೇಳುವಂತೆ ಈ ಅಪಭ್ರಂಶವೇ ವಿಕಸಿತಗೊಂಡು ಈಗ ಬಳಕೆಯಲ್ಲಿರುವ ಹಿಂದಿ, ಗುಜರಾತಿ,ಬೆಂಗಾಲಿ ಪಂಜಾಬಿ ಮುಂತಾದ ಭಾಷೆಗಳ ರೂಪ ಪಡೆಯಿತು. ಇವೆಲ್ಲ ಭಾಷೆಗಳಿಗೂ ಸಂಸ್ಕೃತದ ಬೇರುಗಳು ಮತ್ತು ಕಾಂಡರಚನೆಗಳೇ ಇವೆ. ಹೀಗಾಗಿ ಭಾರತೀಯ ಭಾಷೆಗೆ ಮೂರುಸಾವಿರ ವರ್ಷಗಳ ಇತಿಹಾಸವಿದೆ.ಭಾರತದ ಅತಿ ಹೆಚ್ಚು ಜನರ ಭಾಷೆಯಾದ ಹಿಂದೀಯು ಸಂಸ್ಕ್ರುತೀಕರಣವಾದ ‘ಖಡೀ ಬೋಲೀ’ಎಂದು ಕರೆಯಲ್ಪಡುವ ಉಪಭಾಷೆ.  ಹಿಂದಿ ಮತ್ತು ಇದು ಹಲವಾರು ಉಪಭಾಷೆಗಳು . 7 ನೇ -13 ನೇ ಶತಮಾನಗಳಲ್ಲಿ ಅಭಿವೃಧ್ಧಿ ಹೊಂದಿದ  ಇಂದಿನ ಉತ್ತರ ಹಿಂದೂಸ್ತಾನಿ ಭಾಷೆಯ  ಆರಂಭಿಕ ರೂಪಗಳು  ಭಾರತದ ಭಾಗಗಳಲ್ಲಿ ಇಸ್ಲಾಮಿಕ್ ಆಡಳಿತದ ಸಮಯದಲ್ಲಿ, ಪರ್ಷಿಯನ್ ಹಿಂದಿ ಭಾಷೆಯನ್ನು ಪ್ರಭಾವಿಸಿತು.  ಪರ್ಷಿಯನ್ ಪ್ರಭಾವವು ಉರ್ದು ಅಭಿವೃದ್ಧಿಗೆ ಕಾರಣವಾಯಿತು, ಆಧುನಿಕ ಗುಣಮಟ್ಟದ ಹಿಂದಿ ಭಾಷೆ  ಕಡಿಮೆ ಪರ್ಷಿಯನ್ ಪ್ರಭಾವವನ್ನು ಹೊಂದಿದೆ ಮತ್ತು ಇದನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ.
  75. ಅದೇ ರೀತಿಯಾಗಿ ದಕ್ಷಿಣ ಭಾರತದ ದ್ರಾವಿಡಿಯನ್ ಭಾಷೆಗಳು ಸಂಸ್ಕೃತದಿಂದ ನೇರವಾಗಿ ಕೆಲವು ಶಬ್ದಗಳನ್ನು ‘ತತ್ಸಮ’ ಎಂತಲೂ ಬಳಕೆಯ  ರೂಪದಲ್ಲಿ ಕೆಲವು ಶಬ್ದಗಳನ್ನು ‘ತದ್ಭವ’ ಎಂತಲೂ ತೆಗೆದುಕೊಂಡಿವೆ.
  76. ಇನ್ನೊಂದು ಪ್ರಮುಖ ಶಾಸ್ತ್ರೀಯ ದ್ರಾವಿಡ ಭಾಷೆಯಾದ ಕನ್ನಡವು  ಮಧ್ಯ 1 ನೆಯ ಸಹಸ್ರಮಾನದ AD ಯಿಂದ ಶಿಲಾಶಾಸನದಲ್ಲಿ ದೃಢೀಕರಿಸಲ್ಪಟ್ಟಿದೆ ಮತ್ತು 9 ನೇ- 10 ನೇ ಶತಮಾನದ ರಾಷ್ಟ್ರಕೂಟ ರಾಜವಂಶದಲ್ಲಿ ಸಾಹಿತ್ಯಕ ಹಳೆಯ ಕನ್ನಡವು ಪ್ರವರ್ಧಮಾನಕ್ಕೆ ಬಂದಿದ್ದನ್ನು ಗುರುತಿಸಲಾಗಿದೆ. ಕದಂಬರ ಅವಧಿಯಲ್ಲಿ ಪೂರ್ವಹಳೆಗನ್ನಡ ಬನವಾಸಿ ದೇಶದ ಭಾಷೆಯಾಗಿದ್ದು, 2000 ವರ್ಷಗಳ ಇತಿಹಾಸವನ್ನು ಹೊಂದಿದೆ. ಬ್ರಹ್ಮಗಿರಿಯಲ್ಲಿ ಕಂಡುಬರುವ ಅಶೋಕ ಶಿಲಾ ಶಾಸನವು (ಕ್ರಿ.ಪೂ. 230 ರಲ್ಲಿ) ಗುರುತಿಸಬಹುದಾದ ಕನ್ನಡದಲ್ಲಿ ಬರೆಯಲ್ಪಟ್ಟಿದೆ .
  77. ಮಹಾಕಾವ್ಯಗಳು
  78. ಮಹಾಭಾರತ ಮತ್ತು ರಾಮಾಯಣಗಳು  ಭಾರತದ ಅತ್ಯಂತ ಹಳೆಯ ಮತ್ತು ಸಂರಕ್ಷಿತ ಮಹಾಕಾವ್ಯಗಳಾಗಿವೆ. ಫಿಲಿಪೈನ್ಸ್, ಥೈಲ್ಯಾಂಡ್, ಮಲೇಷಿಯಾ ಮತ್ತು ಇಂಡೋನೇಷಿಯಾ ಮುಂತಾದ ಆಗ್ನೇಯ ಏಷ್ಯಾದ ರಾಷ್ಟ್ರಗಳ ಮಹಾಕಾವ್ಯಗಳಾಗಿ ಆವೃತ್ತಿಗಳನ್ನು ಅಳವಡಿಸಲಾಗಿದೆ.
  79. ರಾಮಾಯಣವು ಏಳು ಕಾಂಡಗಳು ಮತ್ತು 500 ಸರ್ಗಗಳಲ್ಲಿ,   24,000 ಶ್ಲೋಕಗಳನ್ನು ಒಳಗೊಂಡಿದೆ ಮತ್ತು ಶ್ರೀ ವಿಷ್ಣುವಿನ ಅವತಾರವಾದ ಶ್ರೀರಾಮನ ಕಥೆಯನ್ನು ಹೇಳುತ್ತದೆ ಶ್ರೀ ಲಂಕಾ ರಾಜ ರಾವಣ ರಾಮನ  ಪತ್ನಿ ಸೀತಾಳನ್ನು ಅಪಹರಿಸುತ್ತಾನೆ. ಹಿಂದೂ ಜೀವನದ ರೀತಿ ನೀತಿಗೆ  ಧರ್ಮವೇ ಪ್ರಮುಖ ಆದರ್ಶ ಮಾರ್ಗದರ್ಶಿ ಶಕ್ತಿ ಎಂದು ಸ್ಥಾಪಿಸುವಲ್ಲಿ ಈ ಮಹಾಕಾವ್ಯ ಪ್ರಮುಖ ಪಾತ್ರ ವಹಿಸಿದೆ.
  80. ಮಹಾಭಾರತವು ಪದ್ಯದ ಒಂದು ನೂರು ಸಾವಿರ ನುಡಿಗಳನ್ನು ಹೊಂದಿದ್ದು ಹದಿನೆಂಟು ಪುಸ್ತಕಗಳಲ್ಲಿ (ಪರ್ವಗಳಲ್ಲಿ) ಬರೆಯಲಾಗಿದೆ. ಇದು ಅಸ್ತಿತ್ವದಲ್ಲಿಯೇ ಅತಿ ದೊಡ್ಡ ಏಕ ಸಾಹಿತ್ಯ ಕೃತಿ. ಮೂಲತಃ ಕ್ರಿ.ಪೂ. 400 ಮತ್ತು ಕ್ರಿ.ಶ. 400 ರ ಮಧ್ಯದಲ್ಲಿ ಸಂಸ್ಕೃತದ ಪ್ರಾಚೀನ ಭಾಷೆಯಲ್ಲಿ ಸಂಯೋಜಿಸಲ್ಪಟ್ಟಿದೆ, ಸುಮಾರು ಹತ್ತನೇ ಶತಮಾನದ ಕ್ರಿ.ಪೂ.ಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಇದು ಬಿಂಬಿಸುತ್ತದೆ .
  81. ಮಹಾಭಾರತದ ಮುಖ್ಯ ಕಥೆಯು ಕುಟುಂಬದ ಎರಡು ಶಾಖೆಗಳ – ಪಾಂಡವರು ಮತ್ತು ಕೌರವರ – ಮಧ್ಯೆ  ಹಸ್ತಿನಾಪುರ ಸಿಂಹಾಸನಕ್ಕೆ ನಡೆದ ಕುರುಕ್ಷೇತ್ರ ಯುದ್ಧವನ್ನು  ನಿರೂಪಿಸುತ್ತದೆ.  ಮೂಲಭೂತವಾಗಿ ಹೇಳುವುದಾದರೆ, ಮಹಾಕಾವ್ಯದ ಕಥೆಯು ಧಾರ್ಮಿಕ ಸಂಹಿತೆಯಿಂದ ಹೊರಹೊಮ್ಮಿದ ಜವಾಬ್ದಾರಿಗಳ ವಿಸ್ತೃತ ಅನ್ವೇಷಣೆಯನ್ನು ಪ್ರತಿನಿಧಿಸುತ್ತದೆ. ವೀರರ ಕಥೆಯನ್ನು ಉಲ್ಲೇಖಿಸುವುದರ ಜೊತೆಗೆ, ಮಹಾಭಾರತವು ಮಾನವಧರ್ಮದ ವಿಶಾಲ ವ್ಯಾಪ್ತಿಯಲ್ಲಿ ಬರುವ  ನೈತಿಕತೆ, ಕಾನೂನು, ತತ್ವಶಾಸ್ತ್ರ, ಇತಿಹಾಸ, ಭೌಗೋಳಿಕತೆ, ವಂಶಾವಳಿ ಸೇರಿದಂತೆ ಬರಹಗಳ ಸಂಗ್ರಹವನ್ನು ಒಳಗೊಂಡಿದೆ.
  82. 11. ಭಾರತದ ಜನಾಂಗೀಯ ಉಡುಪು
  83. ಭಾರತದ ನಾರಿಯರ ಸೀರೆ ಧರಿಸಲು ಸುಲಭ ಮತ್ತು ಆರಾಮದಾಯಕ ಮತ್ತು ಧಾರ್ಮಿಕ ಶಿಷ್ಟಾಚಾರದಿಂದ ಒಳಗೂಡಿದ್ದು ಎಂದು ಆರಂಭವಾಗಿದ್ದು ಅತ್ಯಂತ ಸುಂದರ ಮತ್ತು ಸೊಗಸಾದ ಉಡುಗೆಯಾಗಿ ಜನಪ್ರಿಯವಾಗಿದೆ. ಅದೇ ರೀತಿಯಲ್ಲಿ ಸ್ತ್ರೀಯರ ಕುರ್ತಾ ಪೈಜಾಮಾ ಮತ್ತು ಪುರುಷರ ಶೇರ್ವಾನಿ ಭಾರತೀಯ ಜನಾಂಗೀಯ ಉಡುಪುಗಳಾಗಿವೆ . ದಕ್ಷಿಣ ಭಾರತದಲ್ಲಿ ಪುರುಷರು ಬಿಳಿಯ ಧೋತಿ ಉಡುತ್ತಾರೆ.
  84. 12. ಭಾರತೀಯ ಆಹಾರ
  85. ಭಾರತದ ಆಹಾರ ಅದರ ಸಂಸ್ಕೃತಿಯಷ್ಟೇ ವಿಶಿಷ್ಟ , ವಿವಿಧ. ಅಡುಗೆ ಮಾಡುವ ವಿಧಾನ ಪ್ರದೇಶ ದಿಂದ ಪ್ರದೇಶಕ್ಕೆ ಭಿನ್ನವಾದರೂ ಇಡೀ ಭಾರತದಲ್ಲಿ ಒಂದು ಸಾಮ್ಯವಿದೆ. ಅದೆಂದರೆ ಧಂಡಿಯಾಗಿ ಉಪಯೋಗಿಸುವ ಮಸಾಲೆ ಪದಾರ್ಥಗಳು ಮತ್ತು ಪತ್ರಗಳು.ಪ್ರತಿಯೊಂದು ಪ್ರದೇಶ ತನ್ನದೇ ಆದ ವಿಶೇಷ ಭೋಜ್ಯ ಹೊಂದಿದೆ.ಆದರೆ ಇಡೀ ಭಾರತದಲ್ಲಿ ಪ್ರಧಾನ ಆಹಾರ ಅಕ್ಕಿ ಮತ್ತು ಗೋದಿ ಆಗಿವೆ. ಪಾಕಪಧ್ಧತಿಗಳಲ್ಲಿ ದಕ್ಷಿಣ ಭಾರತ, ಉತ್ತರ ಭಾರತ, ಗುಜರಾತಿ, ರಾಜಸ್ತಾನಿ, ಪಂಜಾಬಿ ಬೆಂಗಾಲಿ, ಕಾಶ್ಮೀರಿ  ಮತ್ತು ಮುಘಲಾಯಿ ಇವೇ ಪ್ರಮುಖ ರೀತಿಗಳಾಗಿವೆ.
  86. 13. ಭಾರತೀಯ ನೃತ್ಯಗಳು:
  87. ಭಾರತದ ವಿಭಿನ್ನ ಪ್ರದೇಶಗಳ ವಿವಿಧ ಸಂಸ್ಕೃತಿಗಳನ್ನು ಆಯಾ ಪ್ರದೇಶದ ವಿಶಿಷ್ಟ ಜಾನಪದ ನೃತ್ಯಗಳು ಮತ್ತು ಶಾಸ್ತ್ರೀಯ ನೃತ್ಯಗಳು  ಪ್ರತಿನಿಧಿಸುತ್ತವೆ. ನಾಟ್ಯಶಾಸ್ತ್ರದಲ್ಲಿ ಹೇಳಿದಂತೆ ಭಾರತದಲ್ಲಿ ಎಂಟು ವಿಧದ ಶಾಸ್ತ್ರೀಯ ನೃತ್ಯಗಳು ಪ್ರಚಲಿತವಾಗಿವೆ.
  88. ತಮಿಳುನಾಡಿನ ಭರತನಾಟ್ಯ
  89. ಕೇರಳದ ಕಥಕ್ಕಳಿ
  90. ಉತ್ತರ, ಪಶ್ಚಿಮ ಮತ್ತು ಮಧ್ಯಭಾರತಗಳ ಕಥಕ್
  91. ಕೇರಳದ ಮೋಹಿನಿಯಾಟ್ಯಮ್
  92. ಆಂಧ್ರಪ್ರದೇಶದ ಕುಚಿಪುಡಿ
  93. ಓಡಿಸಾದ ಒಡಿಸ್ಸಿ
  94. ಮಣಿಪುರದ ಮಣಿಪುರಿ
  95. ಆಸ್ಸಮನ ಸಾತ್ತ್ರಿಯಾ
  96. ಈ ಮೇಲಿನವೆಲ್ಲವೂ ಪೌರಾಣಿಕ ಕಥಾ ನೃತ್ಯಗಳು ಮತ್ತು ನರ್ತಕ ನರ್ತಕಿಯರು ತಮ್ಮ ವಿಶೇಷ ಕುಣಿತ, ಹಾವಭಾವಗಳು ಮತ್ತೆ ಕೈಸನೆಗಳ ಮೂಲಕವೇ ಕಥೆಗಳನ್ನು ಪ್ರಸ್ತುತಪಡಿಸುತ್ತಾರೆ. ಆಯಾ ಪ್ರದೇಶದ ಜಾನಪದ ನೃತ್ಯಗಳೂ ಕೂಡ ಅಲ್ಲಲ್ಲಿ ತಲೆಮಾರುಗಳಿಂದ ಒಬ್ಬರಿಂದ ಇನ್ನೊಬ್ಬರಿಗೆ ಹೇಳಿದ ಜಾನಪದ ಕಥೆಗಳನ್ನು ಪ್ರಸ್ತುತಪಡಿಸುವಂಥವೆ ಆಗಿರುತ್ತವೆ.
  97. E&OE
  98. ದೋಷಗಳು ಮತ್ತು ಲೋಪಗಳನ್ನು ಹೊರತುಪಡಿಸಿ  (ಸಲಹೆ ಸೂಚನೆಗಳಿಗೆ ಸ್ವಾಗತ )
  99. Sources   ಆಧಾರ :                 ವಿಕಿಪೀಡಿಯ  (wikipedia )
  100. everyculture.com
  101. livescore.com
  102. betterindia.com Unesco
  103. culture of India Wiki
  104. Holidify.com

Leave a Reply

Discover more from #Heritage of Bharat #ಭಾರತದ ಪರಂಪರೆ

Subscribe now to keep reading and get access to the full archive.

Continue reading